ಬೆಂಗಳೂರು(ಜ.08): ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡನೇ ಹಂತದ ಕೋವಿಡ್‌ ಲಸಿಕೆ ತಾಲೀಮು (ಡ್ರೈ ರನ್‌) ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ 11 ಗಂಟೆವರೆಗೆ ಎಂಟು ಕಡೆ ನಡೆಯಲಿದೆ ಎಂದು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಆರೋಗ್ಯ ಇಲಾಖೆ ಸೂಚನೆಯಂತೆ ಶುಕ್ರವಾರ ಪಾಲಿಕೆಯ ಎಂಟು ವಲಯಗಳಲ್ಲಿ ತಲಾ ಒಂದು ಕಡೆ ತಾಲೀಮು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ರೆಫೆರಲ್‌ ಆಸ್ಪತ್ರೆ, ವೈದ್ಯಕೀಯ ಕಾಲೇಜು, ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ತಲಾ 25 ಆರೋಗ್ಯ ಸೇವಾ ಕಾರ್ಯಕರ್ತರಿಗೆ ಲಸಿಕೆ ತಾಲೀಮು ನಡೆಸಲಾಗುವುದು ಎಂದು ತಿಳಿಸಿದರು.

ಬಿಎಂಟಿಸಿಗೆ ಶೀಘ್ರ 90 ಎಲೆಕ್ಟ್ರಿಕ್‌ ಬಸ್ ಸೇರ್ಪಡೆ

ಕಳೆದ ಜ.3ರಂದು ಬಿಬಿಎಂಪಿ ಎರಡು ಕೇಂದ್ರಗಳಾದ ಕಾಮಾಕ್ಷಿಪಾಳ್ಯ ಮತ್ತು ವಿದ್ಯಾಪೀಠ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್‌ಸಿ) ಗಳಲ್ಲಿ ಮಾತ್ರ ಕೋವಿಡ್‌ ಲಸಿಕೆಯ ಡ್ರೈರನ್‌ ನಡೆಸಲಾಗಿತ್ತು. ಈ ಬಾರಿ ಎರಡು ಮೆಡಿಕಲ್‌ ಕಾಲೇಜು, ಎರಡು ಖಾಸಗಿ ಆಸ್ಪತ್ರೆ, ಎರಡು ಬಿಬಿಎಂಪಿ ಆಸ್ಪತ್ರೆ ಹಾಗೂ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಸಲಾಗುತ್ತಿದೆ. ಡ್ರೈರನ್‌ ವೇಳೆ ಲಸಿಕೆ ಹಾಕುವುದನ್ನು ಹೊರತು ಪಡಿಸಿ ಉಳಿದಂತೆ ಎಲ್ಲ ಪ್ರಕ್ರಿಯೆಗಳನ್ನು ಸಹಜವಾಗಿಯೇ ನಡೆಸಲಾಗುವುದು. ಅಗತ್ಯ ಸಿಬ್ಬಂದಿ, ಕೊಠಡಿ, ವಾಹನ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಡ್ರೈರನ್‌ ನಡೆಯುವ ಕೇಂದ್ರಗಳು

ವಲಯ ಅಸ್ಪತ್ರೆ ಖಾಸಗಿ/ಸರ್ಕಾರಿ/ಬಿಬಿಎಂಪಿ

ಬೊಮ್ಮನಹಳ್ಳಿ ಸಿಂಗಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್‌ಸಿ) ಬಿಬಿಎಂಪಿ

ಪೂರ್ವ ಹಲಸೂರಿನ ರೆಫೆರಲ್‌ ಆಸ್ಪತ್ರೆ ಬಿಬಿಎಂಪಿ

ಮಹದೇವಪುರ ಕೆ.ಆರ್‌. ಪುರದ ಸಾರ್ವಜನಿಕ ಆಸ್ಪತ್ರೆ ಸರ್ಕಾರಿ

ರಾಜರಾಜೇಶ್ವರಿನಗರ ಕೆಂಗೇರಿಯ ಸಾರ್ವಜನಿಕ ಆರೋಗ್ಯ ಕೇಂದ್ರ ಸರ್ಕಾರಿ

ಪಶ್ಚಿಮ ಬೆಂಗಳೂರು ವೈದ್ಯಕೀಯ ಕಾಲೇಜು ಸರ್ಕಾರಿ

ದಕ್ಷಿಣ ಕಿಮ್ಸ… ವೈದ್ಯಕೀಯ ಕಾಲೇಜು ಖಾಸಗಿ

ದಾಸರಹಳ್ಳಿ ಸಪ್ತಗಿರಿ ವೈದ್ಯಕೀಯ ಕಾಲೇಜು ಖಾಸಗಿ

ಯಲಹಂಕ ಆಸ್ಟರ್‌ ಸಿಎಂಐ ಆಸ್ಪತ್ರೆ ಖಾಸಗಿ

‘ಖಾಸಗಿ ಆಸ್ಪತ್ರೆ ವಿವರ ಕೊಡಿ’

ಕೋವಿಡ್‌ ಲಸಿಕೆ ಹಾಕುವುದಕ್ಕೆ ನಗರದಲ್ಲಿ ಸುಮಾರು 1,600 ಲಸಿಕೆ ವಿತರಣೆ ಕೇಂದ್ರ ಸ್ಥಾಪಿಸಲು ಬಿಬಿಎಂಪಿ, ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್‌ ಕಾಲೇಜುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗುರುವಾರ ನಡೆದ ಬಿಬಿಎಂಪಿಯ ಎಲ್ಲ ವಲಯದ ಆರೋಗ್ಯಾಧಿಕಾರಿಗಳ ಸಭೆಯಲ್ಲಿ ಎಷ್ಟುಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟುಲಸಿಕೆ ವಿತರಣೆ ಕೇಂದ್ರ ಆರಂಭಿಸಬಹುದು ಎಂದು ವರದಿ ನೀಡುವಂತೆ ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರ ಸೂಚಿಸಿದ್ದಾರೆ.