ಬೆಂಗಳೂರು [ಮಾ.20]:  ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಬಿಡಿ ಬಿಡಿಯಾಗಿ ಪ್ರವೇಶಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಅನುಸರಿಸುವಂತೆ ಪಿಯು ಇಲಾಖೆ ಸೂಚನೆ ನೀಡಿದೆ.

ಪರೀಕ್ಷಾ ಕೊಠಡಿಗೆ ಆಗಮಿಸುವ ವೇಳೆ ವಿವಿಧ ತಂಡಗಳಾಗಿ ಚದುರಿದ ರೀತಿಯಲ್ಲಿ ಪ್ರವೇಶ ಪಡೆಯಬೇಕು. ಅದೇ ರೀತಿ ಪರೀಕ್ಷಾ ಕೊಠಡಿಗೆ ಪ್ರವೇಶ ಕಲ್ಪಿಸುವ ಸಮಯವನ್ನು ಪರೀಕ್ಷಾ ಕೇಂದ್ರಗಳ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ಉದಾ- ಪರೀಕ್ಷಾ ಕೇಂದ್ರಕ್ಕೆ ಎರಡು ಕಾಲೇಜುಗಳು ಅಥವಾ ಎರಡು ಗೇಟ್‌ನಲ್ಲಿ ಪ್ರವೇಶ ಪಡೆಯಲು ಅವಕಾಶವಿದ್ದರೆ ಬೆಳಗ್ಗೆ 9.30ಕ್ಕೆ ಒಂದು ಕಾಲೇಜು, 9.45ಕ್ಕೆ ಒಂದು ಕಾಲೇಜಿಗೆ ಪ್ರವೇಶ ಕಲ್ಪಿಸಬೇಕು.

ಪಿಯು ವಿದ್ಯಾರ್ಥಿ ಮಾಸ್ಟರ್ ಪ್ಲಾನ್ : ಫ್ಲಾಪ್ ಆಯ್ತು ಪರೀಕ್ಷೆ ಮುಂದೂಡುವ ಕ್ರಿಮಿನಲ್ ಐಡಿಯಾ

ವಿದ್ಯಾರ್ಥಿಗಳು ಕೊಠಡಿಗಳಿಗೆ ಪ್ರವೇಶಿಸುವ ಮುನ್ನ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು, ಪರೀಕ್ಷಾ ಕೇಂದ್ರಗಳಲ್ಲಿ ಕೈಗಳನ್ನು ತೊಳೆದುಕೊಳ್ಳಲು ಕಡ್ಡಾಯವಾಗಿ ಸ್ಯಾನಿಟೈಸರ್‌, ಸಾಬೂನು ಮತ್ತು ನೀರಿನ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳ ಬಳಿ, ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ/ ಹೊರಡುವ ಸಮಯಗಳಲ್ಲಿ ಗುಂಪು ಸೇರದಂತೆ ಕ್ರಮ ವಹಿಸಬೇಕು. ಪರೀಕ್ಷೆ ಮುಗಿದ ನಂತರ ಕೊಠಡಿಗಳಿಂದ ವಿದ್ಯಾರ್ಥಿಗಳನ್ನು ಒಟ್ಟಾಗಿ ಹೊರಡಲು ಬಿಡದೆ ಒಬ್ಬೊಬ್ಬರಾಗಿ ಹೊರಡುವಂತೆ ಸಲಹೆ ನೀಡಬೇಕು.

ಯಾವುದೇ ವಿದ್ಯಾರ್ಥಿಯು ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದರೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು. ಮಾಸ್ಕ್‌ ಧರಿಸಿ ಬಂದರೆ ಪ್ರವೇಶ ಅವಕಾಶ ಕಲ್ಪಿಸಬೇಕು. ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಮತ್ತು ಪರೀಕ್ಷಾ ಕೇಂದ್ರದ ಎಲ್ಲ ಅಧಿಕಾರಿಗಳು ಸ್ಥಳೀಯ ಸನ್ನಿವೇಶಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ತಿಳಿಸಿದ್ದಾರೆ.