ಬೆಂಗಳೂರು (ಅ.05):  ಕೊರೋನಾದಿಂದ ಹೈರಾಣಾಗಿರುವ ಖಾಸಗಿ ಬಸ್‌ ಮಾಲೀಕರು ಸರ್ಕಾರ ಬಸ್‌ ಕಾರ್ಯಾಚರಣೆಗೆ ಅನುಮತಿ ನೀಡಿದ್ದರೂ ಬಸ್‌ಗಳನ್ನು ರಸ್ತೆಗಿಳಿಸಲು ಹಿಂದೇಟು ಹಾಕುತ್ತಿದ್ದಾರೆ.

ರಾಜ್ಯದಲ್ಲಿ ಸುಮಾರು 14 ಸಾವಿರ ಖಾಸಗಿ ಬಸ್‌ಗಳಿದ್ದು, ಬಹುತೇಕ ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಈ ಪೈಕಿ ಮಂಗಳೂರು, ಶಿವಮೊಗ್ಗ, ಬೆಂಗಳೂರು, ಉಡುಪಿಯಲ್ಲಿ ಪ್ರಯಾಣಿಕರ ಕೊರತೆ ನಡುವೆಯೂ ಸುಮಾರು 500 ಬಸ್‌ ಕಾರ್ಯಾಚರಣೆ ಮಾಡಲಾಗುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಆದಾಯ ಬಾರದಿರುವುದರಿಂದ ಈ ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸುವ ಚಿಂತನೆಯಲ್ಲಿದ್ದಾರೆ. ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇನ್ನೂ ಬಸ್‌ ಕಾರ್ಯಾಚರಣೆ ಆರಂಭಿಸದ ಬಹುತೇಕ ಬಸ್‌ ಮಾಲೀಕರು ಸದ್ಯಕ್ಕೆ ಬಸ್‌ಗಳನ್ನು ರಸ್ತೆಗೆ ಇಳಿಸದಿರಲು ತೀರ್ಮಾನಿಸಿದ್ದಾರೆ.

ಕೊರೋನಾದಿಂದಾಗಿ ಖಾಸಗಿ ಬಸ್‌ ಉದ್ಯಮ ಸಂಪೂರ್ಣ ನೆಲಕಚ್ಚಿದ್ದು, ಬಸ್‌ ಮಾಲೀಕರು, ಚಾಲಕರು ಹಾಗೂ ಅವರ ಅವಲಂಬಿತರು ತೀವ್ರ ಸಂಕಷ್ಟಎದುರಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನೆರವಿಗೆ ಧಾವಿಸದಿದ್ದರೆ, ಈ ವರ್ಷ ಕಳೆÜದರೂ ಖಾಸಗಿ ಬಸ್‌ಗಳು ರಸ್ತೆಗಿಳಿಯುವುದು ಕಷ್ಟವಾಗುತ್ತದೆ. ಏಕೆಂದರೆ, ಕೇಂದ್ರ ಸರ್ಕಾರದ ಅನ್‌ಲಾಕ್‌ 5.0 ಮಾರ್ಗಸೂಚಿಯಲ್ಲಿ ಶೇ.50ರಷ್ಟುಆಸನ ಭರ್ತಿಗೆ ಅವಕಾಶ ನೀಡಿದೆ. ಬಸ್‌ಗಳಲ್ಲಿ ಇಬ್ಬರು ಅಥವಾ ಐವತ್ತು ಮಂದಿ ಪ್ರಯಾಣಿಸಿದರೂ ಕಾರ್ಯಾಚರಣೆ ವೆಚ್ಚ ಒಂದೇ ಆಗಿರುತ್ತದೆ. ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಬಸ್‌ ಮಾಲೀಕರು ಇದೀಗ ಬಸ್‌ ಸೇವೆ ಆರಂಭಿಸಿ ಮತ್ತಷ್ಟುನಷ್ಟಅನುಭವಿಸಲು ಸಿದ್ಧರಿಲ್ಲ ಎಂದು ರಾಜ್ಯ ಟ್ರಾವೆಲ್‌ ಆಪರೇಟ​ರ್‍ಸ್ ಅಸೋಸಿಯೇಷನ್‌ ಅಧ್ಯಕ್ಷ ನಟರಾಜ್‌ ಶರ್ಮಾ ಹೇಳಿದರು.

ತೆರಿಗೆ ವಿನಾಯಿತಿಗೆ ಒತ್ತಾಯ:

ಈಗ ಖಾಸಗಿ ಬಸ್‌ ಕಾರ್ಯಾಚರಣೆ ಆರಂಭಿಸುವುದಾದರೆ ರಾಜ್ಯ ಸರ್ಕಾರಕ್ಕೆ ಮೂರು ತಿಂಗಳ ಮುಂಗಡ ರಸ್ತೆ ತೆರಿಗೆ ಪಾವತಿಸಬೇಕು. ಈಗಾಗಲೇ ಕೊರೋನಾತಂಕದಲ್ಲಿ ಜನರು ಸಮೂಹ ಸಾರಿಗೆ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಸ್ತೆ ತೆರಿಗೆ ಪಾವತಿಸಿ ಬಸ್‌ ಕಾರ್ಯಾಚರಣೆ ಮಾಡಿದರೆ, ಬಸ್‌ ಮಾಲೀಕರು ಮತ್ತಷ್ಟುನಷ್ಟಅನುಭವಿಸಿ ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ. ಹೀಗಾಗಿ ಸರ್ಕಾರ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಬಸ್‌ ಮಾಲೀಕರ ನೆರವಿಗೆ ಧಾವಿಸಬೇಕು. ಕನಿಷ್ಠ ಆರು ತಿಂಗಳ ರಸ್ತೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಖಾಸಗಿ ಬಸ್‌ ಮಾಲೀಕರು ಒತ್ತಾಯಿಸಿದ್ದಾರೆ.