ಬೆಂಗಳೂರು(ಡಿ.21): ರಾಜ್ಯದಲ್ಲಿ ಚಳಿಗಾಲವಿದ್ದರೂ ಕೊರೋನಾ ಸೋಂಕು ಪ್ರಕರಣಗಳು ಇಳಿಮುಖವಾಗಿರುವುದರಿಂದ ಜನತೆ ನಿರಾಳರಾಗಿ ಕರೋನಾವೇ ಇಲ್ಲ ಎಂಬಂತಹ ವರ್ತನೆ ತೋರತೊಡಗಿದ್ದಾರೆ. ಆದರೆ, ಮಾರಕ ಕೊರೋನಾ ಹಾವಳಿ ಮುಗಿದಿಲ್ಲ. ಜನವರಿ ತಿಂಗಳ ಅಂತ್ಯದ ವೇಳೆಗೆ ಕರೋನಾ ಎರಡನೇ ಅಲೆಯ ಭೀತಿ ಇನ್ನೂ ಜೀವಂತವಾಗಿದೆ ಎಂದು ಎಚ್ಚರಿಸುತ್ತಾರೆ ಸರ್ಕಾರದ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ಸೋಂಕು ನಿಯಂತ್ರಣ ಕುರಿತು ರಾಜ್ಯ ಸರ್ಕಾರ ರಚಿಸಿರುವ ಡಾ.ಎಂ.ಕೆ. ಸುದರ್ಶನ್‌ ನೇತೃತ್ವದ ತಾಂತ್ರಿಕ ಸಲಹಾ ಸಮಿತಿಯು ಸರ್ಕಾರಕ್ಕೆ ವರದಿ ನೀಡಿದ್ದು, ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿಯಲ್ಲಿ ರಾಜ್ಯದಲ್ಲಿ ಎರಡನೇ ಅಲೆ ಕಾಣಿಸಿಕೊಳ್ಳಲಿದೆ. ಈಗಿನಿಂದಲೇ ಎಚ್ಚರಿಕೆ ವಹಿಸಿದರೆ ಎರಡನೇ ಅಲೆ ಬಾರದಂತೆ ತಡೆಯಬಹುದು. ಜನರು ಕ್ರಿಸ್‌ಮಸ್‌, ಹೊಸ ವರ್ಷ ಆಚರಣೆ, ವಿವಿಧ ಸಮಾರಂಭಗಳ ಹೆಸರಿನಲ್ಲಿ ಮಾರ್ಗಸೂಚಿ ಪಾಲಿಸದೆ ಎಚ್ಚರ ತಪ್ಪಿದರೆ ಇನ್ನೂ ಬೇಗನೇ ಎರಡನೇ ಅಲೆ ಕಾಣಿಸಿಕೊಳ್ಳಬಹುದು ಎಂದು ಎಚ್ಚರಿಸಿದ್ದಾರೆ.

ಈ ಬಗ್ಗೆ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹಾಗೂ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಸಚ್ಚಿದಾನಂದ, ಕೊರೋನಾ ಸೋಂಕು ಇನ್ನೂ ಮುಗಿದಿಲ್ಲ. ಕೊರೋನಾ ಲಸಿಕೆ ಬಂದು ಹೆಚ್ಚು ಮಂದಿ ಲಸಿಕೆ ಪಡೆಯುವವರೆಗೂ ಕೊರೋನಾ ನಿಯಂತ್ರಣಕ್ಕೆ ಬರುವುದಿಲ್ಲ. ಸಮಿತಿ ನೀಡಿರುವ ವರದಿ ಪ್ರಕಾರ ಜನವರಿ ಅಂತ್ಯದಲ್ಲಿ ಎರಡನೇ ಅಲೆ ಹರಡುವ ಸಾಧ್ಯತೆ ಇದೆ. ಪ್ರಸ್ತುತ ದಿನನಿತ್ಯದ ಪ್ರಕರಣಗಳು 1 ಸಾವಿರಕ್ಕಿಂತಲೂ ಕಡಿಮೆಗೆ ಬಂದೆ. ಚಳಿಗಾಲ ಮಾಚ್‌ರ್‍ವರೆಗೂ ಮುಂದುವರೆಯುವುದರಿಂದ ಜನರು ಎಚ್ಚರ ತಪ್ಪಿದರೆ ಯಾವುದೇ ಕ್ಷಣದಲ್ಲೂ ಎರಡನೇ ಅಲೆ ಸೃಷ್ಟಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮಾರ್ಗಸೂಚಿ ಪಾಲಿಸಿ:

ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್‌ ಹಾಗೂ ಸಾಮಾಜಿಕ ಅಂತರ ಪಾಲಿಸಬೇಕು. ಇತ್ತೀಚೆಗೆ ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿಯಂತೆ ಜೊತೆಗೆ ಮದುವೆ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ 100ಕ್ಕಿಂತ ಹೆಚ್ಚು ಮಂದಿ ಹಾಜರಾಗುವಂತಿಲ್ಲ. ರಾಜಕೀಯ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ 200 ಮಂದಿ, ಅಂತ್ಯಕ್ರಿಯೆ ವೇಳೆ 50ಕ್ಕಿಂತ ಹೆಚ್ಚು ಮಂದಿ ಹಾಜರಿರುವಂತಿಲ್ಲ ಎಂಬ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೊಸ ವರ್ಷದ ಮಾರ್ಗಸೂಚಿಯನ್ನೂ ಪಾಲಿಸಬೇಕು ಎಂದು ಸಲಹೆ ನೀಡಿದರು.

ಎಲ್ಲರಿಗೂ ಲಸಿಕೆ ಸಿಗುವವರೆಗೂ ಎಚ್ಚರದಿಂದಿರಿ:

ತಾಂತ್ರಿಕ ಸಲಹಾ ಸಮಿತಿ ಸದಸ್ಯರಾದ ಡಾ. ಗಿರಿಧರ್‌ ಬಾಬು, ಲಂಡನ್‌ನಲ್ಲಿ ಕೊರೋನಾ ವೈರಸ್‌ ತನ್ನ ಲಕ್ಷಣಗಳನ್ನೇ ಬದಲಿಸಿಕೊಂಡಿದ್ದು ಇದೀಗ ಲಾಕ್‌ಡೌನ್‌ ಹೇರಿದ್ದಾರೆ. ಹೀಗಾಗಿ ರಾಜ್ಯದಲ್ಲೂ ಸಾರ್ವಜನಿಕರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವಂತಿಲ್ಲ. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜನವರಿಯಲ್ಲಿ ಲಸಿಕೆ ಬರುವುದಾಗಿ ಸರ್ಕಾರ ಹೇಳಿದ್ದರೂ ತುರ್ತು ಅಗತ್ಯವಿರುವವರಿಗೆ ಮೊದಲ ಆದ್ಯತೆ ನೀಡಿ ಬಳಿಕ ಹಂತ-ಹಂತವಾಗಿ ವಿತರಣೆ ಮಾಡಲಾಗುತ್ತದೆ. ಹೀಗಾಗಿ ಎಲ್ಲರಿಗೂ ಲಸಿಕೆ ಸಿಗುವವರೆಗೂ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.

ಎರಡನೇ ಅಲೆಗೆ 45 ದಿನಗಳ ಅಂತರವಿರುತ್ತದೆ: ಹೆಸರು ಹೇಳಬಯಸದ ಸಲಹಾ ಸಮಿತಿಯ ಮತ್ತೊಬ್ಬ ಸದಸ್ಯರು, ವಿಶ್ವದ ಹಲವೆಡೆ ಕೊರೋನಾ ಎರಡನೇ ಅಲೆ ಉಂಟಾದ ರೀತಿಯಲ್ಲೇ ರಾಜ್ಯಕ್ಕೂ ಎರಡನೇ ಅಲೆ ಭೀತಿ ಇದೆ. ಸೋಂಕು ಪ್ರಮಾಣ ಕಡಿಮೆಯಾದ 45 ದಿನಗಳಲ್ಲಿ ಎರಡನೇ ಅಲೆ ಸೃಷ್ಟಿಯಾಗಬಹುದು. ಹೀಗಾಗಿ ಮುಂದಿನ 20 ದಿನಗಳು ನಿರ್ಣಾಯಕ ಎಂದು ಪರಿಗಣಿಸಬೇಕು. ಈ ಬಗ್ಗೆಯೇ ವರದಿಯಲ್ಲಿ ಸಲಹೆಗಳನ್ನು ನೀಡಿದ್ದೇವೆ ಎಂದರು.