ಕೊರೋನಾ 2ನೇ ಅಲೆ: ರಾಜ್ಯದಲ್ಲಿ 70 ದಿನ ಬಳಿಕ ಸಾವು 100ಕ್ಕಿಂತ ಕಡಿಮೆ
* 3604 ಜನರಿಗೆ ಸೋಂಕು, 89 ಮಂದಿ ಬಲಿ
* ಭಾನುವಾರ 1 ಲಕ್ಷ ಮಂದಿಗೆ ಕೋವಿಡ್ ಲಸಿಕೆ
* 11 ಜಿಲ್ಲೆಗಳಲ್ಲಿ ಕೋವಿಡ್ ಸಾವಿನ ವರದಿಯಾಗಿಲ್ಲ
ಬೆಂಗಳೂರು(ಜೂ.28): ರಾಜ್ಯದಲ್ಲಿ ಕೋವಿಡ್ ಸೋಂಕು ಹಾಗೂ ಸಾವಿನ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ಭಾನುವಾರ 3,604 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ, 89 ಮಂದಿ ಮೃತರಾಗಿದ್ದಾರೆ.
ಏಪ್ರಿಲ್ 18ರಂದು 81 ಸಾವು ವರದಿಯಾಗಿತ್ತು. ಇದಾಗಿ 70 ದಿನಗಳ ಬಳಿಕ ಮತ್ತೆ ಸಾವಿನ ಪ್ರಮಾಣ ನೂರಕ್ಕಿಂತ ಕಡಿಮೆ ದಾಖಲಾಗಿದೆ. ಈ 70 ದಿನಗಳ ಅವಧಿಯಲ್ಲಿ ಕೆಲ ದಿನಗಳಂದು 500-600 ಸಾವುಗಳು ವರದಿಯಾಗಿದ್ದವು. ಆದರೆ ಕಳೆದ 10-15 ದಿನದಲ್ಲಿ ಸಾವಿನ ಸಂಖ್ಯೆ 200ಕ್ಕಿಂತ ಕಡಿಮೆ ಆಗಿದ್ದರೂ ಮರಣ ಪ್ರಮಾಣ ಏರುಗತಿಯಲ್ಲಿದೆ. ಬೆಂಗಳೂರು ನಗರದಲ್ಲಿ 11 ಮಂದಿ ಮೃತರಾಗಿದ್ದು, ಮೈಸೂರು ಮತ್ತು ದಕ್ಷಿಣ ಕನ್ನಡದಲ್ಲಿ ತಲಾ 15 ಮಂದಿ ಮರಣವನ್ನಪ್ಪಿದ್ದಾರೆ. 11 ಜಿಲ್ಲೆಗಳಲ್ಲಿ ಕೋವಿಡ್ ಸಾವಿನ ವರದಿಯಾಗಿಲ್ಲ.
ಬೆಂಗಳೂರು ನಗರದಲ್ಲಿ 788, ಮೈಸೂರು 478, ದಕ್ಷಿಣ ಕನ್ನಡ 454 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಐದು ಜಿಲ್ಲೆಗಳಲ್ಲಿ 10ಕ್ಕಿಂತ ಕಡಿಮೆ ಪ್ರಕರಣ, 18 ಜಿಲ್ಲೆಯಲ್ಲಿ 100ಕ್ಕಿಂತ ಕಡಿಮೆ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 7,699 ಮಂದಿ ಗುಣಮುಖರಾಗಿದ್ದು, ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 1.01 ಲಕ್ಷಕ್ಕೆ ಕುಸಿದಿದೆ. ಇದೇ ವೇಳೆ ಭಾನುವಾರ 1 ಲಕ್ಷ ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಈವರೆಗೆ ಒಟ್ಟು 28.34 ಲಕ್ಷ ಮಂದಿ ಸೋಂಕು ಪೀಡಿತರಾಗಿದ್ದು, 26.98 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಒಟ್ಟು 34,743 ಮಂದಿ ಮರಣವನ್ನಪ್ಪಿದ್ದಾರೆ.
ಶಿರಸಿ: ಮನೆಯವರು ಆತಂಕಗೊಂಡ್ರೂ ಹೆದರದ ಅಜ್ಜಿ, ಕೋವಿಡ್ ಗೆದ್ದ 96 ವರ್ಷದ ವೃದ್ಧೆ..!
ಲಸಿಕೆ ಅಭಿಯಾನ:
ಭಾನುವಾರ 1 ಲಕ್ಷ ಮಂದಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಮೊದಲ ಡೋಸ್ 82,403 ಮಂದಿ ಪಡೆದಿದ್ದು 17,633 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ. ಈ ಪೈಕಿ ಯಾರಲ್ಲಿಯೂ ಗಂಭೀರ ಅಡ್ಡ ಪರಿಣಾಮ ಕಾಣಿಸಿಕೊಂಡಿಲ್ಲ.
ರಾಜ್ಯದಲ್ಲಿ ಈವರೆಗೆ 2.17 ಕೋಟಿ ಮಂದಿ ಲಸಿಕೆ ಪಡೆದಿದ್ದಾರೆ. 1.81 ಕೋಟಿ ಮಂದಿ ಮೊದಲ ಡೋಸ್ ಸ್ವೀಕರಿಸಿದ್ದಾರೆ. 35.51 ಲಕ್ಷ ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ. ಭಾನುವಾರ 18ರಿಂದ 44 ವರ್ಷದೊಳಗಿನ 64,588 ಮಂದಿ, 45 ವರ್ಷ ಮೇಲ್ಪಟ್ಟ 15,367 ಮಂದಿ, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು 2,500 ಮಂದಿ ಮೊದಲ ಡೋಸ್ ಸ್ವೀಕರಿಸಿದ್ದಾರೆ. ಉಳಿದಂತೆ 45 ವರ್ಷ ಮೇಲ್ಪಟ್ಟ 13,465, 18 ರಿಂದ 44 ವರ್ಷದೊಳಗಿನ 3,206, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು 483 ಮಂದಿ ಎರಡನೇ ಡೋಸ್ ಪಡೆದಿದ್ದಾರೆ.