Corona Crisis: ಬಿಎಂಟಿಸಿ ಬಸ್‌ಗಳಲ್ಲಿ ಮಾಸ್ಕ್ ಕಡ್ಡಾಯ
ಇನ್ನು ಮುಂದೆ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸಬೇಕು ಎಂದರೆ ಮಾಸ್ಕ್ ಧರಿಸುವುದು ಕಡ್ಡಾಯ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು(ಬಿಎಂಟಿಸಿ) ಬಸ್‌ಗಳಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಮಾಸ್ಕ್ (ಮುಖಗವಸು) ಕಡ್ಡಾಯ ನಿಯಮ ಜಾರಿಗೊಳಿಸಲಾಗಿದೆ.
ಬೆಂಗಳೂರು (ಡಿ.24): ಇನ್ನು ಮುಂದೆ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸಬೇಕು ಎಂದರೆ ಮಾಸ್ಕ್ ಧರಿಸುವುದು ಕಡ್ಡಾಯ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು(ಬಿಎಂಟಿಸಿ) ಬಸ್‌ಗಳಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಮಾಸ್ಕ್ (ಮುಖಗವಸು) ಕಡ್ಡಾಯ ನಿಯಮ ಜಾರಿಗೊಳಿಸಲಾಗಿದೆ. ಕೊರೋನಾ ನಾಲ್ಕನೇ ಅಲೆಯ ಆತಂಕದಿಂದ ಈ ಕ್ರಮಕ್ಕೆ ಬಿಎಂಟಿಸಿ ಮುಂದಾಗಿದ್ದು, ಪ್ರಯಾಣಿಕರು ಮಾಸ್ಕ್ ಧರಿಸದೆ ಪ್ರಯಾಣಿಸುವಂತಿಲ್ಲ. ಈ ಕುರಿತು ಸಿಬ್ಬಂದಿ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ. ಆದರೆ, ನಿಯಮ ಪಾಲಿಸದಿದ್ದರೆ ಯಾವುದೇ ರೀತಿ ದಂಡ ಅಥವಾ ಶಿಸ್ತಿನ ಕ್ರಮಕ್ಕೆ ಮುಂದಾಗಿಲ್ಲ.
ಈ ಕುರಿತು ಶುಕ್ರವಾರ ಸುತ್ತೋಲೆ ಹೊರಡಿಸಿರುವ ಬಿಎಂಟಿಸಿ, ರಾಜ್ಯದಲ್ಲಿ ಕೊರೋನಾ ನಿಯಂತ್ರಣದಲ್ಲಿದ್ದರೂ ಕೆಲ ದೇಶಗಳಲ್ಲಿ ಏರಿಕೆಯಾಗುತ್ತಿದೆ. ಮುಂಬರುವ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸಾಮೂಹಿಕ ಸಾರಿಗೆ ಪ್ರಯಾಣ ಸಂದರ್ಭದಲ್ಲಿ ಹೆಚ್ಚು ಜಾಗರೂಕರಾಗಿರುವಂತೆ, ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸಂಸ್ಥೆಯ ಮಟ್ಟದಲ್ಲಿ ಮಾರ್ಗಸೂಚಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದೆ.
ಕೋವಿಡ್ ಎದುರಿಸಲು ಡಿ.27ರಂದು ತಾಲೀಮು: ಸಚಿವ ಸುಧಾಕರ್
ಚಾಲನಾ ಸಿಬ್ಬಂದಿಯನ್ನು ಒಳಗೊಂಡಂತೆ ಸಂಸ್ಥೆಯ ಎಲ್ಲಾ ವರ್ಗದ ಸಿಬ್ಬಂದಿ ಮತ್ತು ಅಧಿಕಾರಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸಬೇಕು. ಬಸ್ಸಿನಲ್ಲಿ ಬರುವ ಪ್ರಯಾಣಿಕರು ಮಾಸ್ಕ್ ಹಾಕಬೇಕು. ಒಂದು ವೇಳೆ ಹಾಕದೇ ಇದ್ದಲ್ಲಿ ಅಂಥವರಿಗೆ ಚಾಲನಾ ಸಿಬ್ಬಂದಿ ಮಾಸ್ಕ್ ಹಾಕಲು ಸೂಚಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸೋಂಕಿನ ಲಕ್ಷಣ ಇದ್ದರೆ ಮನೆಯಲ್ಲಿರಿ: ಸಿಬ್ಬಂದಿಗೆ ಶೀತಜ್ವರ, ತೀವ್ರ ಉಸಿರಾಟ ಸಮಸ್ಯೆ ಸೇರಿದಂತೆ ಕೊರೋನಾ ಲಕ್ಷಣ ಕಂಡುಬಂದರೆ ಕೂಡಲೇ ಸೋಂಕು ಪರೀಕ್ಷೆಗೊಳಗಾಗಬೇಕು. ಪರೀಕ್ಷೆ ವರದಿ ಬರುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿ ಆರೈಕೆಯಲ್ಲಿರಬೇಕು. ಮೊದಲ ಮತ್ತು ಎರಡನೇ ಡೋಸ್ ಪಡೆದವರು ಕಡ್ಡಾಯವಾಗಿ ಮೂರನೇ ಡೋಸ್ ಪಡೆಯಬೇಕು ಎಂದು ಸುತ್ತೋಲೆಯಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶರು ಸೂಚಿಸಿದ್ದಾರೆ.
ಮತ್ತೆ ಕೋವಿಡ್ ಭೀತಿ: ಬೆಂಗಳೂರು ವಿವಿಯಲ್ಲಿ ಮಾಸ್ಕ್ ಕಡ್ಡಾಯ
ಇತರೆ ಸಾರಿಗೆಯಲ್ಲಿ ಇನ್ನೂ ಕಡ್ಡಾಯವಿಲ್ಲ: ರೈಲುಗಳು, ಕೆಎಸ್‌ಆರ್‌ಟಿಸಿ ಬಸ್, ಖಾಸಗಿ ಸಂಸ್ಥೆಗಳ ಬಸ್ ಹಾಗೂ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ ನಿಯಮ ಜಾರಿಯಲ್ಲಿಲ್ಲ. ಸ್ವಯಂ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಯಾಣಿಕರು ಮಾಸ್ಕ್ ಧರಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.