Omicron Threat: ರಾಜ್ಯದಲ್ಲಿ ಕೊರೋನಾ ಸ್ಫೋಟ: ನಿಯಂತ್ರಣ ಮಟ್ಟಮೀರಿದ ಸೋಂಕು
* 207 ದಿನ ಬಳಿಕ 8906 ಕೇಸ್: ಮತ್ತೆ 5% ದಾಟಿದ ಪಾಸಿಟಿವಿಟಿ
* ಬೆಂಗಳೂರಿನಲ್ಲಿ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ದುಪ್ಪಟ್ಟು
* ಒಮಿಕ್ರೋನ್ ಹೆಚ್ಚಳವಾದಂತೆ ಮತ್ತೆ ಹೊಸ ಪ್ರಕರಣಗಳು ಕೂಡ ಹೆಚ್ಚಳ
ಬೆಂಗಳೂರು(ಜ.09): ರಾಜ್ಯದಲ್ಲಿ(Karnataka) ಕೊರೋನಾ(Coronavirus) ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ನಿಯಂತ್ರಣ ಮಟ್ಟಮೀರಿದ್ದು, 2ನೇ ಅಲೆಯ ಉಚ್ಛ್ರಾಯ ಹಂತದ ಬಳಿಕ (ಏಳು ತಿಂಗಳು) ಇದೇ ಮೊದಲ ಬಾರಿ ಶೇ.5ರ ಗಡಿ ದಾಟಿದೆ. ಅಲ್ಲದೆ, ಬೆಂಗಳೂರಿನಲ್ಲಿ(Bengaluru) ಪಾಸಿಟಿವಿಟಿ ದರ ಶೇ.10ರ ಆಸುಪಾಸಿನಲ್ಲಿದೆ. ಈ ಮೂಲಕ ಸಾಂಕ್ರಾಮಿಕ ರೋಗ ತಜ್ಞರು ಲಾಕ್‌ಡೌನ್‌ಗೆ ನಿಗದಿ ಪಡಿಸಿದ್ದ ಮಾರ್ಗಸೂಚಿಯ ಹಂತವನ್ನು ರಾಜ್ಯ ತಲುಪಿದಂತಾಗಿದೆ.
ರಾಜ್ಯದಲ್ಲಿ ಶನಿವಾರ 207 ದಿನಗಳ ಬಳಿಕ 8,906 ಮಂದಿ ಸೋಂಕಿತರಾಗಿದ್ದು, 4 ಜನರು ಸಾವಿಗೀಡಾಗಿದ್ದಾರೆ. 508 ಮಂದಿ ಗುಣಮುಖರಾಗಿದ್ದು, 38,507 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಶುಕ್ರವಾರ 2.03 ಲಕ್ಷ ಇದ್ದ ಪರೀಕ್ಷೆ ಶನಿವಾರ 1.64 ಲಕ್ಷಕ್ಕೆ ಇಳಿಕೆಯಾಗಿದ್ದು, ಆದರೂ, ಸೋಂಕಿತರ ಸಂಖ್ಯೆ 487 (ಶುಕ್ರವಾರ 8,449) ಏರಿಕೆಯಾಗಿವೆ. ಇದರೊಂದಿಗೆ ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ 30.4 ಲಕ್ಷಕ್ಕೆ, ಗುಣಮುಖರ ಸಂಖ್ಯೆ 29.96 ಲಕ್ಷಕ್ಕೆ, ಸಾವಿಗೀಡಾದವರ ಸಂಖ್ಯೆ 38,507ಕ್ಕೆ ತಲುಪಿದೆ.
Omicron Threat: 'ಕೇಸ್‌ಗಳ ಸ್ಫೋಟ ನೋಡಿ ಶಾಲೆ ಬಂದ್, ಲಾಕ್‌ಡೌನ್ ಮಾಡಬೇಡಿ'
ಈ ನಡುವೆ ರಾಜ್ಯಕ್ಕಿಂತ ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ದುಪ್ಪಟ್ಟಿದೆ. ಶನಿವಾರ ಬರೋಬ್ಬರಿ ಶೇ.9.8ರಷ್ಟುದಾಖಲಾಗಿದ್ದು, ಸೋಂಕು ಪರೀಕ್ಷೆಗೊಳಪಡುವ ಪ್ರತಿ 100 ಮಂದಿಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಂತಾಗಿದೆ.
ಯಾವುದೇ ಒಂದು ಪ್ರದೇಶದಲ್ಲಿ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ(Positivity Rate) ಶೇ.5ರೊಳಗಿರಬೇಕು. ಒಂದು ವೇಳೆ ಹೆಚ್ಚಳವಾದರೆ ಆ ಪ್ರದೇಶದಲ್ಲಿ ಸೋಂಕು ನಿಯಂತ್ರಣ ಮಟ್ಟಮೀರಿದೆ ಎಂದು ಸಾಂಕ್ರಾಮಿಕ ರೋಗ ತಜ್ಞರು ತಿಳಿಸಿದ್ದರು. ಅಲ್ಲದೆ, ಮೊದಲ ಮತ್ತು ಎರಡನೇ ಅಲೆಯಲ್ಲಿ ರಾಜ್ಯ ಲಾಕ್‌ಡೌನ್(Lockdown) ಮತ್ತು ಅನ್‌ಲಾಕ್‌ಗೆ ಶೇ.5 ಪಾಸಿಟಿವಿಟಿ ದರವನ್ನೇ ಮಾನದಂಡ ಮಾಡಿಕೊಳ್ಳಲಾಗಿತ್ತು. ಈ ಬಾರಿಯೂ ಶೇ.5ಕ್ಕಿಂತ ಹೆಚ್ಚಾದರೆ ಲಾಕ್‌ಡೌನ್ ಅನಿವಾರ್ಯ ಎಂದು ತಜ್ಞರು ತಿಳಿಸಿದ್ದರು. ವರ್ಷಾರಂಭದಿಂದ ಪಾಸಿಟಿವಿಟಿ ದರ ಹೆಚ್ಚಳವಾಗುತ್ತಾ ಸಾಗಿ ಶನಿವಾರ ಶೇ.5.4ಕ್ಕೆ ತಲುಪಿದೆ. ಅಂದರೆ, ಸೋಂಕು ಪರೀಕ್ಷೆಗೊಳಗಾಗುವ ಪ್ರತಿ 100 ಮಂದಿಯಲ್ಲಿ ಐದು ಮಂದಿಯಲ್ಲಿ ಸೋಂಕು ದೃಢಪಡುತ್ತಿದೆ. 2ನೇ ಅಲೆಯಲ್ಲಿ ಒಂದೇ ದಿನ ಗರಿಷ್ಠ ಶೇ.36ಕ್ಕೆ ಹೆಚ್ಚಳವಾಗಿತ್ತು.
ರಾಜಧಾನಿ ಅಪಾಯ:
ಎರಡನೇ ಅಲೆಯಲ್ಲಿ ಒಂದೇ ದಿನ ಶೇ.40 ರಷ್ಟು ಪಾಸಿಟಿವಿಟಿ ದರ ದಾಖಲಾಗಿತ್ತು. ರಾಜ್ಯದ ಒಟ್ಟಾರೆ 38 ಸಾವಿರ ಸಕ್ರಿಯ ಸೋಂಕಿತರ ಬೆಂಗಳೂರಿನಲ್ಲಿಯೇ 32 ಸಾವಿರ ಸೋಂಕಿತರು ಚಿಕಿತ್ಸೆ/ಆರೈಕೆಯಲ್ಲಿದ್ದಾರೆ.
Covid 19 Spike: ಬೆಂಗ್ಳೂರಲ್ಲಿ ಶೇ.9.8ಕ್ಕೆ ಏರಿದ ಪಾಸಿಟಿವಿಟಿ ದರ: ಹೆಚ್ಚಾದ ಆತಂಕ
207 ದಿನಗಳ ಗರಿಷ್ಠ:
ಈ ಹಿಂದೆ ಜೂ.12 ರಂದು 9,785 ಕೊರೋನಾ ಹೊಸ ಪ್ರಕರಣಗಳು ವರದಿಯಾಗಿದ್ದವು. ಆ ಬಳಿಕ ಇಳಿಕೆಯಾಗುತ್ತಾ ಸಾಗಿ ಕನಿಷ್ಠ 176ಕ್ಕೆ ತಗ್ಗಿತ್ತು. ಒಮಿಕ್ರೋನ್ ಹೆಚ್ಚಳವಾದಂತೆ ಮತ್ತೆ ಹೊಸ ಪ್ರಕರಣಗಳು ಹೆಚ್ಚಳವಾಗುತ್ತಾ ಸಾಗಿದೆ. ಸದ್ಯ 207 ದಿನಗಳ (ಏಳು ತಿಂಗಳು) ಬಳಿಕ ಅತಿ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿವೆ. ದೃಢಪಟ್ಟಿದೆ. ಕಳೆದ ಒಂದು ವಾರದಿಂದ ದಿನದಿಂದ ದಿನಕ್ಕೆ ಏರಿಕೆಯಾಗುತ್ತಾ ಸಾಗಿದ್ದು, ಜ.1ರಂದು 1033 ಇತ್ತು ಸದ್ಯ ಒಂಬತ್ತು ಸಾವಿರದ ಆಸುಪಾಸಿಗೆ ಬಂದಿದ್ದು, ಒಂದು ವಾರದಲ್ಲಿಯೇ ಒಂಬತ್ತು ಪಟ್ಟು ಹೆಚ್ಚಳವಾಗಿದೆ.
ಎಲ್ಲಿ ಎಷ್ಟು ಸೋಂಕು?:
ಶನಿವಾರ ಬೆಂಗಳೂರಿನಲ್ಲಿ 7113, ದಕ್ಷಿಣ ಕನ್ನಡ 295, ಮೈಸೂರು 203, ಉಡುಪಿ 186, ಮಂಡ್ಯ 183, ಹಾಸನ 139 ಮಂದಿಗೆ ಸೋಂಕು ತಗುಲಿದೆ. ಉಳಿದ 3 ಜಿಲ್ಲೆಗಳಲ್ಲಿಯೂ ಬೆರಳೆಣಿಕೆಯಷ್ಟು, 19 ಜಿಲ್ಲೆಗಳಲ್ಲಿ ಎರಡಂಕಿಯಷ್ಟು, ಯಾದಗಿರಿ ಹಾಗೂ ಹಾವೇರಿ ಶೂನ್ಯ ಪ್ರಕರಣ ದಾಖಲಾಗಿದೆ. ಬೆಂಗಳೂರು ಮೂವರು, ಕಲಬುರಗಿ ಒಬ್ಬ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ(Department of Health) ಬುಲಿಟಿನ್ ತಿಳಿಸಿದೆ.