ಬೆಂಗಳೂರು [ಜ.17]:  ಮುಂಬರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ‘ಕಿರು ನಿಯಂತ್ರಣ ಘಟಕ’ ಹಾಗೂ ಪರೀಕ್ಷಾ ಕೇಂದ್ರಗಳ ಮಾಹಿತಿ ತಿಳಿಯಲು ರಾಜ್ಯಾದ್ಯಂತ ನಾಲ್ಕು ಸೇವಾ ಕೇಂದ್ರ ತೆರೆಯಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ಸಂಬಂಧ ಗುರುವಾರ ಪಿಯು ಇಲಾಖೆ ನಿರ್ದೇಶಕರು ಮತ್ತು ಜಿಲ್ಲಾ ಉಪನಿರ್ದೇಶಕರೊಂದಿಗೆ ನಡೆಸಿದ ಸಭೆಯ ಬಳಿಕ ಮಾತನಾಡಿದ ಅವರು, ಪರೀಕ್ಷೆಗೆ ಸಂಬಂಧಿಸಿದ ಗೌಪ್ಯ ಚಟುವಟಿಕೆಗಳ ನಿರ್ವಹಣೆಗಾಗಿ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಇದೆ. ಈ ವರ್ಷದಿಂದ ಮತ್ತಷ್ಟುಜಾಗೃತಿ ವಹಿಸಲು ಆಯಾ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿಯೂ ‘ಕಿರು ನಿಯಂತ್ರಣ ಘಟಕ’ ತೆರೆಯಲಾಗುತ್ತಿದೆ. ಇದೇ ರೀತಿ ವಿದ್ಯಾರ್ಥಿಗಳ ಹಾಜರಿ, ಪರೀಕ್ಷಾ ಅಕ್ರಮ, ಪರೀಕ್ಷೆ ಕಾರ್ಯದಲ್ಲಿ ತೊಡಗುವ ಸಿಬ್ಬಂದಿ, ಉತ್ತರ ಪತ್ರಿಕೆ ಸರಬರಾಜು ವಿವರ ಪಡೆಯಲು ಸೇವಾ ಕೇಂದ್ರಗಳನ್ನು ತೆರೆಯಲು ಸೂಚಿಸಿದ್ದೇನೆ ಎಂದು ಹೇಳಿದರು.

SSLC ಪ್ರಿಪರೇಟರಿ ಪರೀಕ್ಷೆ ಗೊಂದಲಕ್ಕೆ ತೆರೆ!.

ಪ್ರಾಯೋಗಿಕ ಪರೀಕ್ಷೆ:  2020ನೇ ಸಾಲಿನ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ ಜ.25ರಿಂದ ಫೆ.10ರ ವರೆಗೆ ನಡೆಯಲಿದೆ. 2,46,772 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಅಭ್ಯರ್ಥಿ ಪಟ್ಟಿ, ಅಂಕ ಪಟ್ಟಿಹಾಗೂ ಉತ್ತರ ಪತ್ರಿಕೆಗಳನ್ನು ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಿಗೆ ಕೂಡಲೇ ರವಾನಿಸಲು ಸೂಚನೆ ನೀಡಿದರು. 

SSLC, PUC ವಿದ್ಯಾರ್ಥಿಗಳಿಗೆ 10 ಗ್ರಾಂ ಚಿನ್ನದ ಸರ ಕೊಡುಗೆ..

ಪ್ರಾಯೋಗಿಕ ಪರೀಕ್ಷೆಯ ಅಂಕಗಳನ್ನು ನೇರವಾಗಿ ಆನ್‌ಲೈನ್‌ ಮೂಲಕ ಕೇಂದ್ರಕ್ಕೆ ರವಾನಿಸಲು ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿದ್ದಾರೆ. ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ಫೆಬ್ರವರಿಯಲ್ಲಿ ಜಿಲ್ಲಾಧಿಕಾರಿಗಳು, ಖಜಾನಾಧಿಕಾರಿಗಳು, ಪೊಲೀಸ್‌ ಇಲಾಖೆಯನ್ನು ಒಳಗೊಂಡ ಅಧಿಕಾರಿಗಳ ಸಭೆ ನಡೆಸುವುದಾಗಿ ಸಚಿವರು ತಿಳಿಸಿದರು.