Asianet Suvarna News Asianet Suvarna News

ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದುವರಿದ ಮಳೆ, ನಾಲ್ವರು ಬಲಿ

ಬಿರುಬಿಸಿಲಿನ ನಡುವೆಯೂ ಕರಾವಳಿ, ಮಲೆನಾಡು ಸೇರಿ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶನಿವಾರ ಮಳೆ ಸುರಿದಿದ್ದು, ಮಳೆ ಸಂಬಂಧಿ ಅನಾಹುತಕ್ಕೆ ಮತ್ತೆ ನಾಲ್ವರು ಬಲಿಯಾಗಿದ್ದಾರೆ. 

Continued rains in more than 15 districts of the state four people death gvd
Author
First Published Apr 21, 2024, 4:38 AM IST

ಬೆಂಗಳೂರು (ಏ.21): ಬಿರುಬಿಸಿಲಿನ ನಡುವೆಯೂ ಕರಾವಳಿ, ಮಲೆನಾಡು ಸೇರಿ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶನಿವಾರ ಮಳೆ ಸುರಿದಿದ್ದು, ಮಳೆ ಸಂಬಂಧಿ ಅನಾಹುತಕ್ಕೆ ಮತ್ತೆ ನಾಲ್ವರು ಬಲಿಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನರೋಣ ಗ್ರಾಮದಲ್ಲಿ ಬಾಲಕ ಮಹೇಶ್‌ (10 ), ಶಿವಮೊಗ್ಗ ತಾಲೂಕಿನ ಹರಮಘಟ್ಟದಲ್ಲಿ ತೋಟದ ಕೆಲಸ ಮುಗಿಸಿ ವಾಪಸಾಗುತ್ತಿದ್ದ ರಾಕೇಶ್‌ (28), ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಪಾಲಡ್ಕ ನಿವಾಸಿ ನಿತಿನ್ (24) ಸಿಡಿಲು ಬಡಿದು ಮೃತಪಟ್ಟಿದ್ದಾರೆ. 

ಇದೇ ವೇಳೆ, ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಹರಾಳು ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಭಾರೀ ಗಾಳಿಗೆ ಮನೆಯ ಚಾವಣಿ ಬಿದ್ದು ಗಾಯಗೊಂಡಿದ್ದ ನಾಗಮ್ಮ ದಡ್ಡಿ (47) ಎಂಬುವರು ಚಿಕಿತ್ಸೆ ಫಲಿಸದೆ ಶನಿವಾರ ಕೊನೆಯುಸಿರೆಳೆದಿದ್ದಾರೆ. ಮಳೆಯಿಂದಾಗಿ ಗೋಕರ್ಣದ ಮಹಾಬಲೇಶ್ವರ ದೇಗುಲದ ಗರ್ಭಗುಡಿ ಕೆಲಕಾಲ ಜಲಾವೃತ್ತವಾಗಿತ್ತು. ಇದರಿಂದ ಭಕ್ತರಿಗೆ ಸ್ಪರ್ಶದರ್ಶನ ಸಿಗಲಿಲ್ಲ. ಸತತ ಮೂರು ಗಂಟೆಗೂ ಅಧಿಕ ಕಾಲ ನೀರು ತುಂಬಿತ್ತು. ಹಾಸನದಲ್ಲಿ ಭಾರೀ ಗಾಳಿಗೆ ಮನೆಯ ಹೆಂಚುಗಳು ಹಾರಿ ಹೋಗಿವೆ. 

ಕಾಂಗ್ರೆಸ್‌ದು ಕುಟುಂಬ ರಾಜಕಾರಣ ಆದರೆ ಬಿಎಸ್‌ವೈ, ಗೌಡ್ರದ್ದು?: ಸಚಿವ ಕೆ.ಜೆ.ಜಾರ್ಜ್

ಅರಬ್ಬಿ ಸಮುದ್ರದಲ್ಲಿ ಬೀಸಿದ ಭಾರೀ ಗಾಳಿಗೆ ಭಟ್ಕಳದಲ್ಲಿ ಮೀನುಗಾರಿಕೆ ಬೋಟ್ ಮುಳುಗಿತಾದರೂ ಅದರಲ್ಲಿದ್ದ ನಾಲ್ವರು ಮೀನುಗಾರರನ್ನು ಇನ್ನೊಂದು ಬೋಟ್‌ನಲ್ಲಿರುವ ಮೀನುಗಾರರನ್ನು ರಕ್ಷಿಸಲಾಗಿದೆ. ಇದೇ ವೇಳೆ, ದಾವಣಗೆರೆ, ಗದಗ, ಹಾಸನ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಹಾವೇರಿ, ಕೊಪ್ಪಳ, ವಿಜಯನಗರ, ಬೆಂಗಳೂರು ಜಿಲ್ಲೆಗಳಲ್ಲಿಯೂ ಮಳೆಯಾದ ವರದಿಯಾಗಿದೆ.

ಮಲೆನಾಡಿಗೆ ತಂಪೆರೆದ ಮಳೆರಾಯ: ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಸತತವಾಗಿ ಉತ್ತಮ ಮಳೆ ಆಗುತ್ತಿದೆ. ಇದರಿಂದಾಗಿ ವಾತಾವರಣ ತಂಪಾಗಿದೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಲ್ಲಿ ಕೊಂಚ ಸಮಾಧಾನ ವ್ಯಕ್ತವಾಗುತ್ತಿದೆ. ಶನಿವಾರ ಇಡೀ ದಿನ ತಾಲೂಕಿನಲ್ಲಿ ಮಳೆಗಾಲದ ಛಾಯೆ ಕಂಡುಬಂದಿದೆ. ಬೇಸಿಗೆ ಆರಂಭ ಆದಾಗಿನಿಂದ ಮಳೆ ಇಲ್ಲದೇ ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ತಾಲೂಕಿನ ಬಹುತೇಕ ಎಲ್ಲ ನದಿ-ತೊರೆಗಳು ನೀರಿನ ಕೊರತೆಯಿಂದ ಒಣಗಿದ್ದವು. ತೆರೆದ ಬಾವಿಗಳು ಮಾತ್ರವಲ್ಲದೇ, ಕೊಳವೆ ಬಾವಿಗಳಲ್ಲೂ ನೀರಿನ ಕೊರತೆ ಉಂಟಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. 

ಕೇಂದ್ರ ಸರ್ಕಾರ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದೆ: ಚಲುವರಾಯಸ್ವಾಮಿ

ತಾಲೂಕಿನ ಕೆಲವು ಭಾಗದಲ್ಲಿ ಕುಡಿಯುವ ನೀರಿಗೂ ಕೊರತೆ ಉಂಟಾಗಿದ್ದು ಕೃಷಿಭೂಮಿಗೂ ನೀರಿಲ್ಲದೇ ಅಡಕೆ ತೋಟಗಳು ಒಣಗುವ ಸ್ಥಿತಿ ನಿರ್ಮಾಣವಾಗಿ ರೈತರ ಸಂಕಷ್ಟಕ್ಕೂ ಕಾರಣವಾಗಿತ್ತು. ಎರಡು ಮೂರು ದಿನ ಸತತವಾಗಿ ಮಳೆಯಾಗುತ್ತಿದ್ದು, ವಾತಾವರಣ ತಂಪಾಗಿದೆ. ಮಾತ್ರವಲ್ಲ, ನೀರಿಲ್ಲದೇ ಹರಿವನ್ನೇ ನಿಲ್ಲಿಸಿದ್ದ ತುಂಗಾ, ಮಾಲತಿ ಮುಂತಾದ ನದಿಗಳಲ್ಲಿ ನಿಧಾನವಾಗಿ ನೀರು ಹರಿಯುವುದಕ್ಕೂ ಪ್ರಾರಂಭವಾಗಿದೆ. ಶುಕ್ರವಾರ ಮಧ್ಯರಾತ್ರಿ ಆರಂಭವಾದ ಮಳೆ ತಾಲೂಕಿನಾದ್ಯಂತ ಶನಿವಾರ ಬೆಳಗಿನ ತನಕ ಸುಮಾರು 5 ಗಂಟೆ ಗುಡುಗಿನಿಂದ ಕೂಡಿದ ಮಳೆಯಾಗಿದೆ.

Follow Us:
Download App:
  • android
  • ios