ಕಾಂಗ್ರೆಸ್‌ದು ಕುಟುಂಬ ರಾಜಕಾರಣ ಆದರೆ ಬಿಎಸ್‌ವೈ, ಗೌಡ್ರದ್ದು?: ಸಚಿವ ಕೆ.ಜೆ.ಜಾರ್ಜ್
ಪ್ರಧಾನಿ ನರೇಂದ್ರ ಮೋದಿ ಅವರು ಯಡಿಯೂರಪ್ಪ, ದೇವೇಗೌಡರನ್ನು ಪಕ್ಕದಲ್ಲಿ ಕೂರಿಸಿಕೊಂಡು ಕಾಂಗ್ರೆಸ್‌ನದ್ದು ಕುಟುಂಬ ರಾಜಕಾರಣ ಎಂದು ಹೇಳುತ್ತಾರೆ. ಹಾಗಿದ್ದರೆ ಯಡಿಯೂರಪ್ಪ ಮತ್ತು ದೇವೇಗೌಡರದ್ದು ಏನು ರಾಜಕಾರಣ ಎಂದು ಸಚಿವ ಕೆ.ಜೆ.ಜಾರ್ಜ್ ಖಾರವಾಗಿ ಪ್ರಶ್ನಿಸಿದ್ದಾರೆ.
ಉಡುಪಿ (ಏ.20): ಪ್ರಧಾನಿ ನರೇಂದ್ರ ಮೋದಿ ಅವರು ಯಡಿಯೂರಪ್ಪ, ದೇವೇಗೌಡರನ್ನು ಪಕ್ಕದಲ್ಲಿ ಕೂರಿಸಿಕೊಂಡು ಕಾಂಗ್ರೆಸ್‌ನದ್ದು ಕುಟುಂಬ ರಾಜಕಾರಣ ಎಂದು ಹೇಳುತ್ತಾರೆ. ಹಾಗಿದ್ದರೆ ಯಡಿಯೂರಪ್ಪ ಮತ್ತು ದೇವೇಗೌಡರದ್ದು ಏನು ರಾಜಕಾರಣ ಎಂದು ಸಚಿವ ಕೆ.ಜೆ.ಜಾರ್ಜ್ ಖಾರವಾಗಿ ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಟೂರಿಂಗ್ ಟಾಕೀಸ್ ಇದ್ದ ಹಾಗೆ. ಟೂರಿಂಗ್ ಟಾಕೀಸ್ ನವರು ಒಂದು ಊರಿನಲ್ಲಿ ಸಿನೆಮಾ ತೋರಿಸಿ, ಇನ್ನು ಜನ ಬರುವುದಿಲ್ಲ ಅಂತ ಆದ ಮೇಲೆ ಇನ್ನೊಂದು ಊರಿಗೆ ಹೋಗ್ತಾರೆ. ಶೋಭಾ ಕೂಡ ಇನ್ನು ಇಲ್ಲಿ ವೋಟ್ ಸಿಗುವುದಿಲ್ಲ ಅಂತ ಇನ್ನೊಂದು ಜಿಲ್ಲೆಗೆ ಹೋಗಿದ್ದಾರೆ ಎಂದು ಲೇವಡಿ ಮಾಡಿದರು. ಶೋಭಾ ಅವರು ಚಿಕ್ಕಮಗಳೂರಿನ ಒಂದೇ ಒಂದು ಕೆಡಿಪಿ ಮೀಟಿಂಗ್‌ಗೆ ಬಂದಿಲ್ಲ. ಸರ್ಕಾರಿ ಕಾರ್ಯಕ್ರಮಗಳಿಗೆ ಆಹ್ವಾನ ನೀಡಿದರೂ ಬಂದಿಲ್ಲ ಎಂದರು.
ಯುವಜನರನ್ನು ಮುಂಚೂಣಿಗೆ ತರುವುದು ಕಾಂಗ್ರೆಸ್ ಧ್ಯೇಯ: ದೇಶದ ಭವಿಷ್ಯವನ್ನು ಸದೃಢಗೊಳಿಸುವ ಹಾಗೂ ಯುವ ಪೀಳಿಗೆಯನ್ನು ಜಾತ್ಯತೀತವಾಗಿ ಸಮಾಜದಲ್ಲಿ ಮುಂಚೂಣಿಗೆ ತರುವುದು ಕಾಂಗ್ರೆಸ್ ಪಕ್ಷದ ಮೂಲಧ್ಯೇಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ನಗರದ ನಿರಂತರ ಸಮುದಾಯ ಭವನದಲ್ಲಿ ಚುನಾವಣಾ ವಾರ್ ರೂಂ.ಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, ಯುವಕರಿಗೆ ಉದ್ಯೋಗ ನೀಡುವುದಾಗಿ ಕೇಂದ್ರ ಸರ್ಕಾರ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದೆ ಎಂದು ದೂರಿದರು.
ಕಳೆದ ಹತ್ತು ವರ್ಷಗಳಿಂದ ಕೇಂದ್ರದಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಸಂಕಷ್ಟಗಳೇ ಎದುರಾಗುತ್ತಿವೆ. ಪೆಟ್ರೋಲ್, ಅಡುಗೆ ಅನಿಲ, ದಿನುಪಯೋಗಿ ವಸ್ತುಗಳ ಬೆಲೆ ಗಗನಕ್ಕೇರಿರುವುದನ್ನು ಮನಗಂಡು ರಾಜ್ಯ ಸರ್ಕಾರ ಜನತೆಗೆ ಗ್ಯಾರಂಟಿ ಯೋಜನೆಗಳ ಮೂಲಕ ಸಹಾಯಹಸ್ತ ನೀಡಿದೆ ಎಂದು ಹೇಳಿದರು. ಪ್ರಸ್ತುತ ಐದು ಶಾಸಕರನ್ನು ಒಳಗೊಂಡಿರುವ ಜಿಲ್ಲೆ ಚಿಕ್ಕಮಗಳೂರು. ಮುಖ್ಯವಾಗಿ ಸಿ.ಟಿ.ರವಿ ಮಣಿಸಿದ ತಮ್ಮಯ್ಯ ಅವರನ್ನು ಮರೆಯಲಾಗದು. ಅಲ್ಲದೇ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದ ಸುಳಿವೇ ಇರಲಿಲ್ಲ. ಆದರೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ್ ಖರ್ಗೆ ನಾಯಕತ್ವದಲ್ಲಿ ಅಧಿಕಾರ ಪಡೆದಿರುವುದು ಸಾಮಾನ್ಯ ವಿಚಾರವಲ್ಲ ಎಂದರು.
ಬಿಎಸ್‌ವೈರನ್ನು ಜೈಲಿಗಟ್ಟಲು ಎಚ್‌ಡಿಕೆ ಹೋರಾಡಿದ್ರು: ಸಚಿವ ಚಲುವರಾಯಸ್ವಾಮಿ
ರಾಜ್ಯದಲ್ಲಿ ಸುಮಾರು 1.65 ಕೋಟಿ ಮನೆಗಳಿಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಗೃಹ ಲಕ್ಷ್ಮೀ ಯೋಜನೆ ನೀಡಿದೆ. ಉಚಿತ ಅಕ್ಕಿ ವಿತರಣೆಯಲ್ಲೂ ಮಾತನ್ನು ತಪ್ಪದೇ ಪ್ರಾಮಾಣಿಕವಾಗಿ ನಡೆದುಕೊಂಡಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಹೆಮ್ಮೆ. ಬಡವರಿಗೆ ಅಕ್ಕಿಯನ್ನು ನೀಡದೇ ಕೇಂದ್ರ ಸರ್ಕಾರ ನಾಟಕವಾಡುತ್ತಿದೆ ಎಂದು ಅವರು ಟೀಕಿಸಿದರು. ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯ ಕಾಲಕ್ರಮೇಣ ಮುಂದಿನ ಪೀಳಿಗೆಗೆ ಅವಕಾಶ ಕಲ್ಪಿಸಿ ಒಂದಲ್ಲೊಂದು ದಿನ ಬದುಕನ್ನು ತೊರೆಯಬೇಕು. ಈ ಮಧ್ಯದಲ್ಲಿ ಸಲ್ಲಿಸಿದ ಸೇವೆ ಜನಮಾನಸದಲ್ಲಿ ಉಳಿಯಲು ಸಾಧ್ಯ. ಆ ಪ್ರಾಮಾಣಿಕ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಹೀಗಾಗಿ ರಾಜಕೀಯದಲ್ಲಿ ಸೇವಾಗುಣ ಮುಖ್ಯವಾಗಿ ಅಳವಡಿಸಿಕೊಳ್ಳಬೇಕು ಎಂದರು.