ಅಂಗವಿಕಲ ದಲಿತನ ಜಾಗದಲ್ಲಿ ಸಿದ್ದು ಮನೆ ನಿರ್ಮಾಣ: ಕುಮಾರಸ್ವಾಮಿ
ಮುಡಾದಿಂದ ಹಂಚಿಕೆಯಾಗಿದ್ದ ದಲಿತರೊಬ್ಬರ ನಿವೇಶನ ಕಬಳಿಸಿ ಮನೆ ಕಟ್ಟಿಸಿದ್ದಾರೆ. ಬಳಿಕ ಆ ಮನೆಯನ್ನು ಮಾರುವ ನಾಟಕವಾಡಿ ಸಿಕ್ಕಿಬಿದ್ದಿದ್ದಾರೆ. ಈ ಕುರಿತ ದಾಖಲೆಗಳು ನನ್ನ ಬಳಿ ಇವೆ ಎಂದ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು(ಸೆ.15): ಮುಡಾ ಹಗರಣ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಮತ್ತೊಂದು ಭೂ ಕಬಳಿಕೆ ಆರೋಪವನ್ನು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾಡಿದ್ದು, ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂಗವಿಕಲ ದಲಿತರೊಬ್ಬರ ಜಾಗದಲ್ಲಿ ಮನೆ ಕಟ್ಟಿದ್ದರು ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಶನಿವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾದಿಂದ ಹಂಚಿಕೆಯಾಗಿದ್ದ ದಲಿತರೊಬ್ಬರ ನಿವೇಶನ ಕಬಳಿಸಿ ಮನೆ ಕಟ್ಟಿಸಿದ್ದಾರೆ. ಬಳಿಕ ಆ ಮನೆಯನ್ನು ಮಾರುವ ನಾಟಕವಾಡಿ ಸಿಕ್ಕಿಬಿದ್ದಿದ್ದಾರೆ. ಈ ಕುರಿತ ದಾಖಲೆಗಳು ನನ್ನ ಬಳಿ ಇವೆ ಎಂದರು.
Channapatna Byelection: ಚನ್ನಪಟ್ಟಣ ಸೋತ್ರೆ ಕುಮಾರಸ್ವಾಮಿಗೆ ಹಿನ್ನಡೆ, ಯೋಗೇಶ್ವರ್
ಅಂಗವಿಕಲ ದಲಿತ ವ್ಯಕ್ತಿಯೊಬ್ಬರ ಬಳಿ 24 ಸಾವಿರ ರು. ಕಟ್ಟಿಸಿಕೊಂಡು ಮುಡಾ ನಿವೇಶನ ಹಂಚಿಕೆ ಮಾಡಲಾಗಿತ್ತು. ಆ ಜಾಗದ ಸುಳ್ಳು ದಾಖಲೆ ಸೃಷ್ಟಿ ಮಾಡಿಕೊಂಡು ಸಾಕಮ್ಮ ಎಂಬುವವರ ಹೆಸರಿನಲ್ಲಿ 10 ಸಾವಿರ ಚದರ ಅಡಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡರು. ಆಮೇಲೆ ನಿವೇಶನದ ಮಾಲೀಕರು ಬಂದು ನೋಡಿದರೆ ಅಲ್ಲಿ ಮನೆ ನಿರ್ಮಿಸಲಾಗಿತ್ತು ಎಂದು ಹೇಳಿದರು.
ನನ್ನ ಜೀವನ ತೆರೆದ ಪುಸ್ತಕ ಎಂದು ಯಾವಾಗಲೂ ಹೇಳುತ್ತಾರೆ. ಅವರ ಆ ತೆರೆದ ಪುಸ್ತಕವನ್ನು ಜನ ಒಮ್ಮೆ ತೆರೆದು ನೋಡಬೇಕು. ನಿವೇಶನ ಲಪಟಾಯಿಸಿಕೊಂಡವರು, ಅಕ್ರಮವಾಗಿ ಮನೆ ಕಟ್ಟಿಕೊಂಡರು, ನಂತರ ಅದನ್ನು ಯಾರಿಗೆ ಮಾರಾಟ ಮಾಡಿದರು? ಎಂಬುದು ಗೊತ್ತಿದೆ. ಎಲ್ಲವನ್ನೂ ತೆಗೆದು ನೋಡಿದರೆ ಅಸಲಿ ಬಣ್ಣ ಗೊತ್ತಾಗುತ್ತದೆ. ಆಗ ಇನ್ನೊಂದು ಹಗರಣ ಶುರುವಾಗುತ್ತದೆ ಎಂದು ಕಿಡಿಕಾರಿದರು.
ಹಾಲಿಗೆ ಪ್ರೋತ್ಸಾಹಧನ ನಾನೇ ಕೊಟ್ಟಿದ್ದು ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಪ್ರೋತ್ಸಾಹ ಧನ ನೀಡುವ ಚಿಂತನೆ ಮಾಡಿ, ಎರಡು ರು. ನೀಡುವ ಕೊಡುವ ವ್ಯವಸ್ಥೆ ಜಾರಿ ಮಾಡಿದ್ದು, ಅದನ್ನು ನಾನು ಎರಡನೇ ಬಾರಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ 6 ರು. ಮಾಡಬೇಕು ಎಂದು ತೀರ್ಮಾನಿಸಿದ್ದೆ. ಆಗ ನೀವೆಲ್ಲ ಸೇರಿ ಸರ್ಕಾರ ಪತನಗೊಳಿಸಿದಿರಿ ಎಂದು ವಾಗ್ದಾಳಿ ನಡೆಸಿದರು.