Asianet Suvarna News Asianet Suvarna News

ಕರ್ನಾಟಕದಲ್ಲಿ ಮೆಗಾ ಜವಳಿ ಪಾರ್ಕ್ ನಿರ್ಮಾಣ: ಪ್ರಧಾನಿ ಮೋದಿ

ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಘೋಷಣೆ, ಕರ್ನಾಟಕ, 6 ರಾಜ್ಯಗಳಲ್ಲಿ ‘ಪಿಎಂ ಮಿತ್ರ’ ಸ್ಥಾಪನೆ, ಕಲಬುರಗಿ/ವಿಜಯಪುರ/ತುಮಕೂರಿಗೆ ಅವಕಾಶ?. 

Construction of Mega Textile Park in Karnataka Says PM Narendra Modi grg
Author
First Published Mar 18, 2023, 6:57 AM IST

ನವದೆಹಲಿ(ಮಾ.18):  ಜವಳಿ ಕ್ಷೇತ್ರದಲ್ಲಿ ಅಪಾರ ಹೂಡಿಕೆಯನ್ನು ಆಕರ್ಷಿಸಿ, ಲಕ್ಷಾಂತರ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಕರ್ನಾಟಕ ಸೇರಿ ಏಳು ರಾಜ್ಯಗಳಲ್ಲಿ ‘ಪಿಎಂ ಮಿತ್ರ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್’ಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲೇ ಮಾಡಲಾಗಿರುವ ಈ ಘೋಷಣೆ ಮಹತ್ವ ಪಡೆದುಕೊಂಡಿದೆ.

ಕರ್ನಾಟಕ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್‌, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದಲ್ಲಿ ಈ ಜವಳಿ ಪಾರ್ಕ್ಗಳು ಸ್ಥಾಪನೆಯಾಗಲಿವೆ. ಜವಳಿ ಕ್ಷೇತ್ರಕ್ಕೆ ಇವು ಅತ್ಯಾಧುನಿಕ ಮೂಲಸೌಕರ್ಯವನ್ನು ಒದಗಿಸಲಿವೆ. ‘ಮೇಕ್‌ ಇನ್‌ ಇಂಡಿಯಾ’, ‘ಮೇಕ್‌ ಫಾರ್‌ ದ ವಲ್ಡ್‌ರ್‍’ಗೆ ಇವು ಮಹಾನ್‌ ಉದಾಹರಣೆಯಾಗಲಿವೆ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. 5ಎಫ್‌ (ಫಾರ್ಮ್‌-ಫೈಬರ್‌-ಫ್ಯಾಕ್ಟರಿ-ಫ್ಯಾಷನ್‌-ಫಾರಿನ್‌) ಎಂಬ ದೂರದೃಷ್ಟಿಗೆ ಅನುಗುಣವಾಗಿ ಜವಳಿ ಕ್ಷೇತ್ರಕ್ಕೆ ‘ಪಿಎಂ ಮಿತ್ರ’ ಉತ್ತೇಜನ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

25 ತಾಲೂಕಿನಲ್ಲಿ ಮಿನಿ ಜವಳಿ ಪಾರ್ಕ್: ಸಿಎಂ ಬೊಮ್ಮಾಯಿ

ಏನಿದು ಪಿಎಂ ಮಿತ್ರ?:

ಪ್ರಧಾನಮಂತ್ರಿಗಳ ‘ಮೆಗಾ ಇಂಟಿಗ್ರೇಟೆಡ್‌ ಟೆಕ್ಸ್‌ಟೈಲ್‌ ರೀಜನ್‌ ಅಂಡ್‌ ಅಪ್ಪರೆಲ್‌’ನ ಸಂಕ್ಷಿಪ್ತ ರೂಪ. 4445 ಕೋಟಿ ರು. ವೆಚ್ಚದಲ್ಲಿ ಸ್ಥಾಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಪಾರ್ಕ್ಗಳು ವಿಶ್ವದರ್ಜೆಯ ಕೈಗಾರಿಕಾ ಮೂಲಸೌಕರ್ಯವನ್ನು ಜವಳಿ ಕ್ಷೇತ್ರಕ್ಕೆ ಒದಗಿಸಲಿವೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಆಕರ್ಷಿಸಿ, ವಿದೇಶಿ ನೇರ ಬಂಡವಾಳ ಹಾಗೂ ಸ್ಥಳೀಯ ಹೂಡಿಕೆಯನ್ನು ಆಕರ್ಷಿಸಲಿವೆ.

ಒಂದೇ ಸ್ಥಳದಲ್ಲಿ ನೂಲುಗಾರಿಕೆ, ನೇಕಾರಿಕೆ, ಸಂಸ್ಕರಣೆ/ಡೈಯಿಂಗ್‌ ಮತ್ತು ಮುದ್ರಣ ಸೇರಿ ಎಲ್ಲ ಸೇವೆಗಳನ್ನು ಒಳಗೊಂಡಿರಲಿವೆ. ಈ ರೀತಿ ಒಂದೇ ಸ್ಥಳದಲ್ಲಿ ಎಲ್ಲ ಸೇವೆ ಲಭಿಸುವುದರಿಂದ ಸಾಗಣೆ ವೆಚ್ಚ ಕಡಿಮೆಯಾಗಲಿದೆ. ಪ್ರತಿ ಪಾರ್ಕ್ನಿಂದಲೂ 1 ಲಕ್ಷ ನೇರ ಹಾಗೂ 2 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿವೆ.

CM Basavaraj Bommai: ಮೆಗಾ ಜವಳಿ ಪಾರ್ಕ್‌ಗೆ ಅನುದಾನ ಕೋರಿದ ಬೊಮ್ಮಾಯಿ

2021ರ ಬಜೆಟ್‌ನಲ್ಲಿ ಇಂತಹದ್ದೊಂದು ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ಈ ಯೋಜನೆಯಡಿ ಕರ್ನಾಟಕದ ಕಲಬುರಗಿ, ತುಮಕೂರು ಹಾಗೂ ವಿಜಯಪುರವನ್ನು ಸೇರ್ಪಡೆ ಮಾಡಬೇಕು ಎಂದು ಕಳೆದ ನವೆಂಬರ್‌ನಲ್ಲಿ ಕೇಂದ್ರ ಜವಳಿ ಸಚಿವರನ್ನು ಭೇಟಿಯಾಗಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದರು.

ಈ ಮೂರೂ ಜಿಲ್ಲೆಗಳು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಿಗೆ ಹತ್ತಿರದಲ್ಲಿವೆ. ಪ್ರಮುಖ ನಗರಗಳು ಹಾಗೂ ಬಂದರಿಗೂ ಸನಿಹದಲ್ಲಿವೆ. ನುರಿತ ಮಾನವ ಸಂಪನ್ಮೂಲವೂ ಲಭ್ಯವಿದೆ. ಮೆಗಾ ಜವಳಿ ಪಾರ್ಕ್ ಸ್ಥಾಪನೆಯಿಂದ ಆ ಜಿಲ್ಲೆಗಳನ್ನು ಟೆಕ್ಸ್‌ಟೈಲ್‌ ಕೇಂದ್ರ ಸ್ಥಾನವನ್ನಾಗಿಸಬಹುದು. ತನ್ಮೂಲಕ ಜವಳಿ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಕಾರಗೊಳಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ನನಸುಗೊಳಿಸಬಹುದು ಎಂದು ವಾದ ಮಂಡಿಸಿದ್ದರು. ಹೀಗಾಗಿ ‘ಪಿಎಂ ಮಿತ್ರ’ ಎಲ್ಲಿ ಸ್ಥಾಪನೆಯಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Follow Us:
Download App:
  • android
  • ios