ಆನೆಗಳ ಹಾವಳಿ ನಿಯಂತ್ರಣಕ್ಕೆ ಆನೆಧಾಮ ನಿರ್ಮಾಣ: ಸಚಿವ ಈಶ್ವರ್ ಖಂಡ್ರೆ
ಪ್ರಸ್ತುತ ಆನೆಗಳ ಸಂಖ್ಯೆ ಜಾಸ್ತಿಯಾಗಿದ್ದು, ಮಲೆನಾಡು ಭಾಗದಲ್ಲಿ ಆನೆಗಳ ಸಮಸ್ಯೆ ಬಗೆಹರಿಸಲು ಆನೆಧಾಮ ನಿರ್ಮಿಸಲು ಯೋಜನೆ ನಿರ್ಮಿಸಲಾಗುವುದು ಎಂದು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ನರಸಿಂಹರಾಜಪುರ (ಡಿ.16): ಪ್ರಸ್ತುತ ಆನೆಗಳ ಸಂಖ್ಯೆ ಜಾಸ್ತಿಯಾಗಿದ್ದು, ಮಲೆನಾಡು ಭಾಗದಲ್ಲಿ ಆನೆಗಳ ಸಮಸ್ಯೆ ಬಗೆಹರಿಸಲು ಆನೆಧಾಮ ನಿರ್ಮಿಸಲು ಯೋಜನೆ ನಿರ್ಮಿಸಲಾಗುವುದು ಎಂದು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. ಅವರು ಭಾನುವಾರ ತಾಲೂಕಿನ ಚಿಕ್ಕಅಗ್ರಹಾರ ವಲಯ ಅರಣ್ಯ ವ್ಯಾಪ್ತಿ ಹಾಗೂ ಶೃಂಗೇರಿ ವಿಧಾನ ಸಭಾ ಕ್ಷೇತ್ರದ ವಿವಿಧ ಕಾಮಗಾರಿ ಸೇರಿ ₹1 ಕೋಟಿ 10 ಲಕ್ಷ ವೆಚ್ಚದಲ್ಲಿ ಅರಣ್ಯ ಸಿಬ್ಬಂದಿಗಳ ವಸತಿ ಗೃಹ ಉದ್ಘಾಟನೆ, ಕಂದಾಯ ಇಲಾಖೆಯ ಪೋಡಿ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಾಸನ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಪಶ್ಚಿಮ ಘಟ್ಟದಲ್ಲಿ ಆನೆಗಳ ಕಾಟ ಜಾಸ್ತಿಯಾಗಿ ನೂರಾರು ಆನೆಗಳು ಗ್ರಾಮಕ್ಕೆ ದಾಳಿ ಇಡುತ್ತಿದೆ. ಈ ಬಗ್ಗೆ ಮಲೆನಾಡು ಭಾಗದ ಶಾಸಕರೊಂದಿಗೆ ಚರ್ಚೆ ನಡೆಸಿದ್ದೇನೆ. ಶೀಘ್ರದಲ್ಲೇ ಮಲೆನಾಡು ಭಾಗದ ಶಾಸಕರ ನಿಯೋಗದೊಂದಿಗೆ ಮುಖ್ಯ ಮಂತ್ರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು. ಅಧಿವೇಶನದಲ್ಲೂ ಪ್ರಸ್ತಾಪ ಮಾಡುತ್ತೇನೆ.ಪ್ರಾಣಿ ಹಾಗೂ ಮನುಷ್ಯರ ನಡುವೆ ಸಂಘರ್ಷ ಜಾಸ್ತಿಯಾಗಿದೆ. ಆನೆಗಳು ನಾಡಿಗೆ ಬಾರದಂತೆ ಆನೆ ಕಂದಕ, ಸೋಲಾರ್ ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ. ರೇಲ್ವೆ ಹಳಿಯ ಬ್ಯಾರಿಕೇಡ್ ಸಹ ಮಾಡುತ್ತಿದ್ದೇವೆ.
ಬೆಂಗಳೂರಲ್ಲಿ ಮತ್ತೊಂದು ‘ಎಲೆಕ್ಟ್ರಾನಿಕ್ ಸಿಟಿ’ಗೆ ಸಿದ್ಧತೆ: 1000 ಎಕರೆಯಲ್ಲಿ ‘ಸ್ವಿಫ್ಟ್ ಸಿಟಿ’ ನಿರ್ಮಾಣ
ಅರಣ್ಯ ಸಿಬ್ಬಂದಿಗಳಿಗೆ ವನ್ಯ ಜೀವಿಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತಿದ್ದೇವೆ. ನರಸಿಂಹರಾಜಪುರ ತಾಲೂಕಿನಲ್ಲೂ ಕೆರೆಗದ್ದೆಯ ಉಮೇಶ ಎಂಬುವರು ಆನೆಯ ದಾಳಿಯಿಂದ ಮೃತಪಟ್ಟಿದ್ದು, ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದೇನೆ ಎಂದರು. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದ 10 ಜಿಲ್ಲೆಗಳಲ್ಲಿ ಶೇ58 ರಷ್ಟು ಅರಣ್ಯ ಇದ್ದು, ಈ ಜಿಲ್ಲೆಯ ಜನರು ಅದೃಷ್ಟವಂತರಾಗಿದ್ದಾರೆ. ಸೆಕ್ಷನ್ 4 ರಿಂದ ಸೆಕ್ಷನ್ 17 ರ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಅರಣ್ಯ ಕಾನೂನು ಜಾರಿ ಮಾಡುವುದು ಕೇವಲ ರಾಜ್ಯ ಮಾತ್ರವಲ್ಲ. ಕೇಂದ್ರ ಸರ್ಕಾರವು ಸಹ ಅರಣ್ಯ ಕಾಯ್ದೆ ತರುತ್ತದೆ.
ಅರಣ್ಯ ಭೂಮಿಯ ಒಂದು ಇಂಚು ಜಾಗವನ್ನು ಸರ್ಕಾರವು ಉಪಯೋಗಿಸಬೇಕಾದರೂ ಅದಕ್ಕೆ ಸಾಕಷ್ಟು ನಿಬಂಧನಗಳಿವೆ. ಒತ್ತುವರಿ ಮಾಡಿದ ಬಡ ರೈತರಿಗೆ ತೊಂದರೆಯಾಗಬಾರದು ಎಂದು 3 ಎಕರೆ ಒಳಗೆ ಒತ್ತುವರಿ ಮಾಡಿರುವ ಭೂಮಿಯನ್ನು ತೆರವುಗೊಳಿಸಬಾರದು ಎಂದು ರಾಜ್ಯ ಸರ್ಕಾರವು ಈಗಾಗಲೇ ಆದೇಶ ಮಾಡಿದೆ ಎಂದು ತಿಳಿಸಿದರು. 2005-06ರಲ್ಲಿ ಅರಣ್ಯ ಹಕ್ಕು ಕಾಯ್ದೆ ಬಂದಿದ್ದು, ಇದರಡಿ ಯಾವ ರೈತರ ಜಮೀನು ಮಂಜೂರು ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟಿಗೂ ಮನವಿ ಸಲ್ಲಿಸಿದ್ದೇವೆ. ಮುಂದೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯ ನಂತರ ಹೊಸದಾಗಿ ಅರಣ್ಯ ಹಕ್ಕು ಕಾಯ್ದೆ ಸಮಿತಿ ರಚನೆ ಮಾಡಲಾಗುವುದು ಎಂದರು.
ಸರ್ಕಾರವು ಬಡವರ ಪರವಾಗಿದೆ. ಸಣ್ಣ ಒತ್ತುವರಿದಾರರಿಗೆ ತೊಂದರೆ ನೀಡುವುದಿಲ್ಲ. ಹೊಸದಾಗಿ ಒತ್ತುವರಿ ಮಾಡಿದರೆ ಖಂಡಿತ ಶಿಕ್ಷೆಯಾಗಲಿದೆ. ನೂರಾರು ಎಕರೆ ಜಮೀನು ಇದ್ದೂ, ಮತ್ತೆ ಒತ್ತುವರಿ ಮಾಡಿದ ದೊಡ್ಡ ಜಮೀನುದಾರರ ಒತ್ತುವರಿ ತೆರವುಗೊಳಿಸುತ್ತೇವೆ. ಡೀಮ್ಡ್ ಫಾರೆಸ್ಟ್ ಭೂಮಿಯನ್ನು ಅರಣ್ಯ ಎಂದು ಪರಿಗಣಿಸಬಾರದು. ಕಂದಾಯ ಹಾಗೂ ಅರಣ್ಯ ಭೂಮಿಯ ಜಂಟಿ ಸರ್ವೆ ಆಗುವುವರೆಗೂ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವುದಿಲ್ಲ ಸ್ಟಷ್ಟಪಡಿಸಿದರು. ಒತ್ತುವರಿ ಸಂಬಂಧಿಸಿದ ಭೂಮಿಯ ಬಗ್ಗೆ ತೀರ್ಮಾನಿಸಲು ರಾಜ್ಯ, ಜಿಲ್ಲೆ, ತಾಲೂಕು ಮಟ್ಟದ ಸಮಿತಿಗಳನ್ನು ರಚಿಸಲಾಗುವುದು. ಒತ್ತುವರಿ ಭೂಮಿಯಲ್ಲಿ ಸರ್ಕಾರಿ ಶಾಲೆ, ಅಂಗನವಾಡಿ ಕಟ್ಟಡ, ಸರ್ಕಾರಿ ಕಟ್ಟಡಗಳನ್ನು ಬಿಟ್ಟು ಸರ್ವೆ ಮಾಡಬೇಕು.
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಅರಣ್ಯ-ಕಂದಾಯ ಭೂಮಿಯ ಸಮಸ್ಯೆಗಳನ್ನು ಪ್ರಾಮಾಣಿಕತೆಯಿಂದ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು. ಶಾಸಕ ಟಿ.ಡಿ. ರಾಜೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿವೆ. ಅರಣ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚೆ ನಡೆಸಿದ್ದು, ಜಂಟಿ ಸರ್ವೆ ಆಗುವುವರೆಗೂ ಯಾವ ಒತ್ತುವರಿ ಭೂಮಿಯನ್ನು ತೆರವುಗೊಳಿಸಬಾರದು ಎಂದು ಅರಣ್ಯ ಅಧಿಕಾರಿಗಳಿಗೆ ಸೃಷ್ಟವಾದ ಸೂಚನೆ ನೀಡಲಾಗಿದೆ. ಒತ್ತುವರಿ ಮಾಡಿ ಮನೆಕಟ್ಟಿಕೊಂಡ ಫಲಾನುಭವಿಗಳನ್ನು ತೆರವುಗೊಳಿಸಬಾರದು ಎಂದು ನಿರ್ದೇಶನ ನೀಡಿದರು.
ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ರಾಜಕೀಯ ಇಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಚಿಕ್ಕಮಗಳೂರು ಕ್ಷೇತ್ರದ ಶಾಸಕ ತಮ್ಮಯ್ಯ, ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ಬೆನ್ನಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರೈಯಾ ಬಾನು, ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್, ಜಿಲ್ಲಾಧಿಕಾರಿ ಮೀನಾನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಂ ಆಮಟೆ, ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರಕಾಶ್ ಸಿಂಗ್, ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್ ಮತ್ತಿತರರು ಇದ್ದರು. ಕಂದಾಯ ಇಲಾಖೆಯಿಂದ ಪೋಡಿ ಮುಕ್ತ ಅಭಿಯಾನಕ್ಕೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಚಾಲನೆ ನೀಡಿದರು. ಸಾಕೇಂತಿಕವಾಗಿ ಜಿಲ್ಲೆಯ 21 ಜನರಿಗೆ ಪೋಡಿಗೆ ಸಂಬಂಧಪಟ್ಟ ದಾಖಲೆಗಳನ್ನು ನೀಡಲಾಯಿತು.