Asianet Suvarna News Asianet Suvarna News

ಜೂ.20ಕ್ಕೆ ಕೇಂದ್ರದ ವಿರುದ್ಧ ಅಕ್ಕಿ ಕದನ: ಕಾಂಗ್ರೆಸ್ಸಿಂದ ಪ್ರತಿಭಟನೆ: ಡಿಕೆಶಿ

ಕೇಂದ್ರದ ಬಳಿ ಅಕ್ಕಿ ದಾಸ್ತಾನಿದ್ದರೂ ರಾಜ್ಯಕ್ಕೆ ನೀಡದೆ ದ್ವೇಷ ರಾಜಕಾರಣ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮಂಗಳವಾರ ಕಾಂಗ್ರೆಸ್ಸಿಂದ ಪ್ರತಿಭಟನೆ: ಡಿ.ಕೆ.ಶಿವಕುಮಾರ್‌ 

Congress Will Be Protest Against Central Government in Karnataka on June 20th grg
Author
First Published Jun 17, 2023, 5:16 AM IST

ಬೆಂಗಳೂರು(ಜೂ.17):  ‘ಕೇಂದ್ರದ ಬಳಿ ಅಕ್ಕಿ ದಾಸ್ತಾನು ಇದ್ದರೂ ರಾಜ್ಯಕ್ಕೆ ಮಾರಾಟ ಮಾಡಲು ನಿರಾಕರಿಸಿರುವ ಕೇಂದ್ರ ಸರ್ಕಾರದ ದ್ವೇಷ ರಾಜಕಾರಣ, ಬಡವರ ವಿರೋಧಿ ನೀತಿ ವಿರುದ್ಧ ಜೂ.20ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆ​ಸು​ತ್ತೇವೆ’ ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಅಕ್ಕಿ ನೀಡುವುದಾಗಿ ಹೇಳಿ ನಿರಾಕರಿಸಿರುವುದು ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಸಾಕ್ಷಿ. ಕೇಂದ್ರದ ಬಳಿ 7 ಲಕ್ಷ ಮೆಟ್ರಿಕ್‌ ಟನ್‌ ದಾಸ್ತಾನು ಇದೆ. ನಾವು ಕೇವಲ 2.85 ಲಕ್ಷ ಟನ್‌ ಖರೀದಿಗೆ ಕೇಳಿದ್ದೆವು. ದಾಸ್ತಾನು ಇದ್ದರೂ ಹಾಗೂ ಪ್ರತಿ ಕೆ.ಜಿ.ಗೆ 36.60 ರು.ಗಳಂತೆ ಹಣ ನೀಡಲು ನಾವು ಒಪ್ಪಿದ್ದರೂ ಅಕ್ಕಿ ನೀಡಲು ನಿರಾಕರಿಸಲಾಗುತ್ತಿದೆ. ಕೇಂದ್ರದ ಈ ಧೋರಣೆಯನ್ನು ಪ್ರತಿಭಟಿಸುವ ಮೂಲಕ ಜನರಿಗೆ ಅರಿವು ಮೂಡಿಸುವ ಜತೆಗೆ ಕೇಂದ್ರದ ಮೇಲೆ ಒತ್ತಡ ಹೇರಲು ಹೋರಾಟ ಮಾಡುತ್ತೇವೆ. ಆಯಾ ಪ್ರತಿಭಟನೆಯಲ್ಲಿ ಸಂಬಂಧಪಟ್ಟಶಾಸಕರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್‌ನಿಂದ ಮುಂದುವರೆದ ದೋಖಾ ಸಿರೀಸ್: ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ‌ ವಾಗ್ದಾಳಿ

‘ಇನ್ನು ಕೇಂದ್ರ ಸರ್ಕಾರ ಯಾವುದೇ ರೀತಿಯ ಷಡ್ಯಂತ್ರ ನಡೆಸಿದರೂ ಬಿಪಿಎಲ್‌ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ತಲಾ 10 ಕೆ.ಜಿ. ಅಕ್ಕಿ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಅಕ್ಕಿ ಹೊಂದಿಸಲು ನೆರೆ ರಾಜ್ಯಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಜೂ.21ರಂದು ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಲೂ ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ನಡ್ಡಾ ಹೇಳಿದಂತೆಯೇ ಕೇಂದ್ರದಿಂದ ಸೇಡಿನ ನಡೆ:

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಸೋತರೆ ಕೇಂದ್ರ ಅನುದಾನ ಸ್ಥಗಿತ ಎಂದು ಹೇಳಿದ್ದರು. ಈಗ ಕರ್ನಾಟಕ ರಾಜ್ಯಕ್ಕೆ ಅಕ್ಕಿ ಖರೀದಿಗೆ ಅವಕಾಶ ತಪ್ಪಿಸುವ ಮೂಲಕ ತಮ್ಮ ಮಾತು ಉಳಿಸಿಕೊಂಡಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೆಲಸ ಮಾಡುವುದಾಗಿ ಪ್ರಧಾನ ಮಂತ್ರಿಗಳು ಹೇಳಿಕೆ ನೀಡಿದ್ದರು. ಆದರೆ ಬಿಜೆಪಿ ಅಧ್ಯಕ್ಷರು ಮತದಾರರನ್ನು ಬೆದರಿಸಿದ್ದರು. ಇದೀಗ ಬಿಜೆಪಿ ರಾಷ್ಟಾ್ರಧ್ಯಕ್ಷರ ಹೇಳಿಕೆಯಂತೆಯೇ ಕೇಂದ್ರವು ಸೇಡಿನ ನಡೆ ಅನುಸರಿಸಿ ರಾಜ್ಯದ ಜನರಿಗೆ ಅನ್ಯಾಯ ಮಾಡಲು ಹೊರಟಿದೆ ಎಂದು ಟೀಕಿಸಿದರು.

ಎಫ್‌ಸಿಐ ಅಕ್ಕಿ ನೀಡಲು ಒಪ್ಪಿತ್ತು:

ಅನ್ನಭಾಗ್ಯ ಅಡಿ ಹೆಚ್ಚುವರಿ ಅಕ್ಕಿ ನೀಡಲು ಭಾರತೀಯ ಆಹಾರ ಪ್ರಾಧಿಕಾರದಿಂದ ಅಕ್ಕಿ ಖರೀದಿಗೆ ಮನವಿ ಮಾಡಿದ್ದೆವು. ಪ್ರಾಧಿಕಾರ ಕೂಡ ಜೂನ್‌ 12 ರಂದು ರಾಜ್ಯಕ್ಕೆ ಪತ್ರ ಬರೆದು 2,08,425.750 ಮೆಟ್ರಿಕ್‌ ಟನ್‌ ಅಕ್ಕಿ ಖರೀದಿಗೆ ಅನುಮತಿ ನೀಡುವುದಾಗಿ ಪ್ರಾಧಿಕಾರ ಪತ್ರ ಬರೆದಿತ್ತು. ಮತ್ತೊಂದು ಪತ್ರದಲ್ಲಿ 15 ಲಕ್ಷ ಟನ್‌ ಖರೀದಿಗೆ ಅನುಮತಿ ನೀಡಿತ್ತು. ಇದಾದ ಮರುದಿನ ಅಂದರೆ ಜೂನ್‌ 13 ರಂದು ಗೋಧಿ ಮತ್ತು ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ರಾಜ್ಯ ಸರ್ಕಾರಗಳಿಗೆ ಮಾರಾಟ ಮಾಡುವುದನ್ನು ಕೇಂದ್ರ ತಡೆ ಹಿಡಿದಿದೆ. ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಇದು ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎಫ್‌ಸಿಐ ನೀತಿ ಬದಲಾಗಿದ್ದು ಪ್ರಾದೇ​ಶಿಕ ಅಧಿಕಾರಿಗಳಿಗೆ ಗೊತ್ತಿರಲಿಲ್ಲ. ಹೀಗಾ​ಗಿ ಅನುಮತಿ ನೀಡಿದ್ದರು’ ಎಂಬ ಎಫ್‌ಸಿಐ ಸ್ಪಷ್ಟನೆಗೆ ಪ್ರತಿಕ್ರಿಯಿಸಿ, ‘ಅಲ್ಲಿಗೆ ಭಾರತ ಆಹಾರ ಪ್ರಾಧಿಕಾರಕ್ಕೆ ತಮ್ಮ ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲ ಎಂಬುದು ಸ್ಪಷ್ಟವಾಗುತ್ತದೆಯಲ್ಲವೇ?’ ಎಂದರು.

ಪರ್ಯಾಯ ಸಿದ್ಧತೆ ಮಾಡುತ್ತಿದ್ದೇವೆ:

ಪರ್ಯಾಯ ವ್ಯವಸ್ಥೆಗೆ ಪ್ರಯತ್ನಿಸುತ್ತಿದ್ದು ಹೆಚ್ಚು ಅಕ್ಕಿ ಬೆಳೆಯುವ ರಾಜ್ಯಗಳನ್ನು ಸಂಪರ್ಕಿಸುತ್ತಿದ್ದೇವೆ. ಯಾರನ್ನು ಸಂಪರ್ಕಿಸುತ್ತೇವೆ ಎಂದು ಬಹಿರಂಗಪಡಿಸುವುದಿಲ್ಲ. ಬಹಿರಂಗಪಡಿಸಿದರೆ ಅವರಿಗೂ ಅಕ್ಕಿ ಮಾರಾಟ ಮಾಡದಂತೆ ಬೆದರಿಕೆ ಹಾಕುತ್ತಾರೆ. ಈ ಯೋಜನೆ ಕೇವಲ ಕಾಂಗ್ರೆಸಿಗರಿಗೆ ಮಾತ್ರವಲ್ಲ. ಎಲ್ಲಾ ಪಕ್ಷದ ಬೆಂಬಲಿಗರು, ಮತದಾರರಿಗೆ ಲಭ್ಯವಾಗುತ್ತದೆ. ಹೀಗಾಗಿ ರಾಜ್ಯದ ಸಂಸದರು ನಮ್ಮ ಹೋರಾಟಕ್ಕೆ ಬೆಂಬಲ ನೀಡುವ ವಿಶ್ವಾಸವಿದೆ ಎಂದು ಹೇಳಿದರು.

ಕಾನೂನು ಹೋರಾಟ ಬೇಡ:

ಎಫ್‌ಸಿಐ ಜತೆ ಕಾನೂನು ಹೋರಾಟ ಮಾಡಿ ಪಡೆಯಬಹುದಲ್ಲವೇ ಎಂದು ಕೇಳಿದಾಗ, ‘ಕಾನೂನು ಹೋರಾಟ ಬೇಡ. ಒಕ್ಕೂಟ ವ್ಯವಸ್ಥೆಯಲ್ಲಿ ಯಾರಿಗೆ ಏನು ಸಿಗಬೇಕೋ ಅವರಿಗೆ ಸಿಗಬೇಕು. ನಾವು ಕೇಂದ್ರ ಸರ್ಕಾರಕ್ಕೆ ಶೇ.40 ರಷ್ಟುತೆರಿಗೆ ಪಾವತಿ ಮಾಡುತ್ತೇವೆ. ಆದರೆ ನಮಗೆ ವಾಪಸು ಕೇವಲ ಶೇ.17ರಷ್ಟುಮಾತ್ರ ಸಿಗುತ್ತದೆ. ಅದನ್ನು ಕೇಂದ್ರ ಅರ್ಥ ಮಾಡಿಕೊಳ್ಳಬೇಕು’ ಎಂದರು.

ಕುಂಟು ನೆಪ ಹೇಳಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ: ಸಿದ್ದು ವಿರುದ್ಧ ಬೊಮ್ಮಾಯಿ ವಾಗ್ದಾಳಿ

ಸಚಿವರಾದ ಡಾ.ಎಂ.ಸಿ. ಸುಧಾಕರ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌, ಚಂದ್ರಪ್ಪ, ಶಾಸಕರಾದ ಶ್ರೀನಿವಾಸ್‌ ಮಾನೆ, ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಸೇರಿ ಹಲವರು ಹಾಜರಿದ್ದರು.

8 ಕೇಜಿ ಅಕ್ಕಿ ಜೊತೆ 2 ಕೇಜಿ ರಾಗಿ/ಜೋಳ: ಮುನಿಯಪ್ಪ

ದೇವನಹಳ್ಳಿ: ರಾಜ್ಯ ಸರ್ಕಾರದಿಂದ ನೀಡುವ 10 ಕೇಜಿ ‘ಅನ್ನಭಾಗ್ಯ’ದಲ್ಲಿ ದಕ್ಷಿಣ ಕರ್ನಾಟಕದಲ್ಲಿ 8 ಕೇಜಿ ಅಕ್ಕಿ ಜೊತೆಗೆ 2 ಕೇಜಿ ರಾಗಿ ಹಾಗೂ ಉತ್ತರ ಕರ್ನಾಟಕದಲ್ಲಿ 2 ಕೇಜಿ ಜೋಳ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದ್ದಾರೆ.

Follow Us:
Download App:
  • android
  • ios