ಸಿದ್ದರಾಮೋತ್ಸವಕ್ಕೆ ಬೇಕಿದ್ರೆ ಸಹಕಾರ ನೀಡುತ್ತೇವೆ: ನಳೀನ್ ಕುಮಾರ್ ಕಟೀಲ್
* ಸಿದ್ದರಾಮೋತ್ಸವಕ್ಕ ಸಕಲ ಸಿದ್ಧತೆ
* ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮೋತ್ಸವ
^ ಸಿದ್ದರಾಮೋತ್ಸವಕ್ಕೆ ಬೇಕಿದ್ರೆ ಸಹಕಾರ ನೀಡುತ್ತೇವೆ ಎಂದ ನಳೀನ್ ಕುಮಾರ್ ಕಟೀಲ್
ಬೆಂಗಳೂರು, (ಜುಲೈ.07):ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬವನ್ನು ಸಿದ್ದರಾಮೋತ್ಸವ ಎಂದು ಹೆಸರಿಟ್ಟು ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿದ್ದರಾಮಯ್ಯನವರ ಆಪ್ತರು, ಅಭಿಮಾನಿಗಳು ಈ ಕಾರ್ಯಕ್ರಮ ಮಾಡುತ್ತಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇನ್ನು ಇದಕ್ಕೆ ಕಾಂಗ್ರೆಸ್‌ನಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.
ಈ ಬಗ್ಗೆ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ ಕುಮಾರ್ ಕಟೀಲ್ ಮಾತನಾಡಿದ್ದು,ನಾವು ಸಿದ್ದರಾಮೋತ್ಸವಕ್ಕೆ ಬೇಕಿದ್ದರೆ ಸಹಕಾರ ಕೊಡುತ್ತೇವೆ. ಆದರೆ ಸಿದ್ದರಾಮೋತ್ಸವದಿಂದ ನಮಗೆ ಯಾವುದೇ ಭಯ ಇಲ್ಲ.ಇನ್ನೂ 4-5 ಲಕ್ಷ ಜನರನ್ನು ಬೇಕಿದ್ರೆ ಕಳುಹಿಸಿಕೊಡುತ್ತೇವೆ. ಆದರೆ ಸಿದ್ದರಾಮೋತ್ಸವದಿಂದ ಭಯ ಆಗುತ್ತಿರುವುದು ಡಿ.ಕೆ. ಶಿವಕುಮಾರಗೆ. ಇದನ್ನು ಶುರು ಮಾಡಿದ ನಂತರ ಡಿ.ಕೆ. ಶಿವಕುಮಾರ ನಿದ್ದೆ ಮಾಡುತ್ತಿಲ್ಲ. ಸಿದ್ದರಾಮಯ್ಯನವರು ಡಿ.ಕೆ.ಶಿವಕುಮಾರ್ ನಿದ್ದೆ ಕೆಡಿಸಿದ್ದಾರೆ. ಮುಂದಿನ ಸಿಎಂ ಎಂದು ತೋರಿಸಿಕೊಳ್ಳಲು ಸಿದ್ದರಾಮಯ್ಯ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದರು.
ನನಗೆ ಸಿದ್ದರಾಮೋತ್ಸವಕ್ಕಿಂತ ಸ್ವಾತಂತ್ರ್ಯ ಅಮೃತ ಮಹೋತ್ಸವ ಮುಖ್ಯ: ಡಿಕೆಶಿ
ಸಿದ್ದರಾಮಯ್ಯ ತನ್ನ ಜೊತೆಗಿದ್ದವರನ್ನೆಲ್ಲ ಮುಗಿಸಿದ್ದಾರೆ. ಇದೀಗ ಡಿ.ಕೆ. ಶಿವಕುಮಾರ ಮುಗಿಸಲು ಈ ತಂತ್ರವನ್ನು ಹೆಣೆದಿದ್ದಾರೆ. ಕಾಂಗ್ರೆಸ್‌ನಲ್ಲಿ ತಮ್ಮ ಅಸ್ತಿತ್ವ ಉಳಿಸ್ಕೋಬೇಕು. ಹೈಕಮಾಂಡ್ಗೆ ತಮ್ಮ ಶಕ್ತಿ ತೋರಿಸಬೇಕು. ಮುಂದಿನ ಮುಖ್ಯಮಂತ್ರಿ ನಾನೇ ಅಂತ ಘೋಷಣೆ ಮಾಡಬೇಕೆಂಬ ಒತ್ತಡವನ್ನು ಸಿದ್ದರಾಮಯ್ಯ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.
ಡಿ.ಕೆ. ಶಿವಕುಮಾರ ಮುಗಿಸೋದು ಸಿದ್ದರಾಮಯ್ಯ ತಂತ್ರ. ಈಗಾಗಲೇ ಜನತಾ ದಳವನ್ನು ಸಿದ್ದರಾಮಯ್ಯ ಮುಗಿಸಿದರು. ಕಾಂಗ್ರೆಸ್ಗೆ ಬಂದು ನಿಜವಾದ ಕಾಂಗ್ರೆಸಿಗರನ್ನು ಹೊರಗಿಟ್ರು. ದಲಿತ ಸಿಎಂ ಆಗಬೇಕಾಗಿದ್ದ ಖರ್ಗೆಯವರನ್ನು ಹೊರಗಿಟ್ರು. ಪರಮೇಶ್ವರ್ ಅವರನ್ನು ಸೋಲಿಸಿದ್ರು. ಈಗ ಡಿಕೆಶಿ ಮುಗಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
PSI ನೇಮಕಾತಿ ಹಗರಣದ ಕುರಿತು ಮಾತನಾಡಿದ್ದು, ತನಿಖೆ ಹಗ್ಗ ಕಾಂಗ್ರೆಸ್ ಕುತ್ತಿಗೆಯನ್ನೇ ಸುತ್ತಿಕೊಳ್ಳುತ್ತೆ. ಇದನ್ನು ಸಿದ್ದರಾಮಯ್ಯ ಅರಿತುಕೊಳ್ಳಬೇಕು. ಸಿಐಡಿ ತನಿಖೆ ಪೂರ್ಣಗೊಂಡ ಬಳಿಕ ಎಲ್ಲವೂ ಹೊರಬರುತ್ತದೆ. ಕಾಂಗ್ರೆಸ್ನ ಯಾರೆಲ್ಲ ಭಾಗಿಯಾಗಿದ್ದಾರೆ ಅನ್ನೋದು ಗೊತ್ತಾಗುತ್ತೆ ಎಂದು ಹೇಳಿದರು.
ಸಿಎಂ, ಗೃಹ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಅವಧಿಯಲ್ಲಿ ಹಗರಣಗಳ ರಾಶಿಯೇ ಬಿದ್ದಿತ್ತು. ಅಧಿಕಾರಕ್ಕೆ ಏರಿದ ಮರುದಿನವೇ ರಾಜೀನಾಮೆ ನೀಡಬೇಕಿತ್ತು. ಅಧಿಕಾರಿಗಳಾದ ಡಿ.ಕೆ.ರವಿ, ಗಣಪತಿ ಆತ್ಮಹತ್ಯೆಗೆ ಶರಣಾಗಿದ್ದರು. ಹಲವು ಡಿವೈಎಸ್ಪಿಗಳು ರಾಜೀನಾಮೆ ನೀಡಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಹಗರಣಗಳೇ ತುಂಬಿದ್ದವು. ಆಗ ಯಾರ ವಿರುದ್ಧವೂ ಸರ್ಕಾರ ಕ್ರಮಕೈಗೊಂಡಿಲ್ಲ. ಸಿದ್ದರಾಮಯ್ಯಗೆ ಸಿಎಂ ರಾಜೀನಾಮೆ ಕೇಳುವ ನೈತಿಕತೆಯಿಲ್ಲ ಎಂದು ಸಿದ್ದರಾಮಯ್ಯಗೆ ನಳಿನ್ ಕುಮಾರ್ ಕಟೀಲು ತಿರುಗೇಟು ನೀಡಿದರು.