*  ಪೆಟ್ರೋಲ್‌, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಆಕ್ರೋಶ*  ಚಕ್ಕಡಿಯಾಯ್ತು, ಸೈಕಲ್‌ ಆಯ್ತು, ಈಗ ಟಾಂಗಾ*  ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಟಾಂಗಾ ಜಾಥಾ  

ಬೆಂಗಳೂರು(ಸೆ.24): ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ಇತ್ತೀಚೆಗೆ ಎತ್ತಿನಗಾಡಿ, ಸೈಕಲ್‌ ಜಾಥಾ ಮೂಲಕ ಸದನಕ್ಕೆ ಆಗಮಿಸಿದ್ದ ಕಾಂಗ್ರೆಸ್‌(Congress) ನಾಯಕರು ಶುಕ್ರವಾರ ಟಾಂಗಾ ಮೂಲಕ ಆಗಮಿಸಲು ನಿರ್ಧರಿಸಿದ್ದಾರೆ. ತನ್ಮೂಲಕ ತಮ್ಮ ವಿಭಿನ್ನ ಹೋರಾಟ ಸರಣಿ ಮುಂದುವರೆಸಿದ್ದಾರೆ.

"

ಶುಕ್ರವಾರ ಬೆಳಗ್ಗೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಸೇರಿದಂತೆ ಕಾಂಗ್ರೆಸ್‌ ನಾಯಕರು ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಟಾಂಗಾ ಜಾಥಾ ನಡೆಸಲಿದ್ದಾರೆ.

ಲಿಂಗಾಯತರನ್ನ ಸೆಳೆಯಲು ಕಾಂಗ್ರೆಸ್‌ ಸಭೆ

ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್‌ ನಾಯಕರು ಸೋಮವಾರ ಪ್ರಾರಂಭವಾದ ವಿಧಾನಮಂಡಲ ಅಧಿವೇಶನಕ್ಕೆ ಎತ್ತಿನ ಗಾಡಿಯಲ್ಲಿ ಆಗಮಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಿನೂತನವಾಗಿ ಪ್ರತಿಭಟಿಸಿದ್ದರು. ಬಳಿಕ ಸೈಕಲ್‌ ಜಾಥಾ ಮೂಲಕ ಆಗಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗಮನ ಸೆಳೆದಿದ್ದರು.

ಇದೀಗ ಶುಕ್ರವಾರ ಟಾಂಗಾ ಮೂಲಕ ವಿಧಾನಸೌಧಕ್ಕೆ ಆಗಮಿಸಿ ಸದನದಲ್ಲಿ ಭಾಗವಹಿಸಲಿದ್ದಾರೆ. ಶುಕ್ರವಾರ ಮಧ್ಯಾಹ್ನ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ಆಗಮಿಸಲಿದ್ದು, ಇದೇ ದಿನ ಕಾಂಗ್ರೆಸ್‌ ಟಾಂಗಾ ಜಾಥಾ ಹಮ್ಮಿಕೊಂಡಿರುವುದು ಕುತೂಹಲ ಮೂಡಿಸಿದೆ.