ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಒಕ್ಕಲಿಗರು ಹಾಗೂ ಲಿಂಗಾಯತರಿಗೆ ಮಾತ್ರ ಅಧಿಕಾರ ಒಕ್ಕಲಿಗರು ಹಾಗೂ ಲಿಂಗಾಯತರನ್ನು ಹೊರತುಪಡಿಸಿ ಬೇರೆ ಸಮುದಾಯದವರಿಗೆ ಅಧಿಕಾರ ನೀಡಿರುವ ಒಂದೂ ಉದಾಹರಣೆ ಇಲ್ಲ

 ಬೆಂಗಳೂರು/ದೇವನಹಳ್ಳಿ (ಅ.04):  ರಾಜ್ಯದಲ್ಲಿ ಬಿಜೆಪಿ (BJP) ಹಾಗೂ ಜೆಡಿಎಸ್‌ (JDS)ನಲ್ಲಿ ಒಕ್ಕಲಿಗರು ಹಾಗೂ ಲಿಂಗಾಯತರನ್ನು ಹೊರತುಪಡಿಸಿ ಬೇರೆ ಸಮುದಾಯದವರಿಗೆ ಅಧಿಕಾರ ನೀಡಿರುವ ಒಂದೂ ಉದಾಹರಣೆ ಇಲ್ಲ. ಅವರಿಗೆ ಆ ಇತಿಹಾಸವೇ ಇಲ್ಲ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಟೀಕಿಸಿದ್ದಾರೆ.

ದೇವನಹಳ್ಳಿಯಲ್ಲಿ ಕಾಂಗ್ರೆಸ್‌ನ ಗಾಣಿಗರ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ (JDS) ಬಗ್ಗೆ ಕಾಂಗ್ರೆಸ್‌ಗೆ ನಡುಕ ಹುಟ್ಟಿದೆ. ಹೀಗಾಗಿಯೇ ನಮ್ಮಂತೆ ಜಾತಿಗಳನ್ನು ಸೇರಿಸಿಕೊಂಡು ಸಭೆ ನಡೆಸುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD kumaraswamy) ಹೇಳಿಕೆಗೆ ತಿರುಗೇಟು ನೀಡಿದರು.

ನನಗೆ ನಡುಕ ಬರುತ್ತದೆಯೋ ಅಥವಾ ಇಲ್ಲವೋ ಕುಮಾರಣ್ಣನಿಗೆ ಚೆನ್ನಾಗಿ ಗೊತ್ತಿದೆ. ರಾಜಕಾರಣಕ್ಕಾಗಿ ಮಾತನಾಡುತ್ತಾರೆ, ಮಾತನಾಡಲಿ. ನಾನು ಕುಮಾರಣ್ಣನಿಗೆ ಒಂದು ಮನವಿ ಮಾಡಿಕೊಳ್ಳುತ್ತೇನೆ. ಈ ರಾಜ್ಯದ ಚರಿತ್ರೆಯನ್ನೇ ತೆಗೆದುಕೊಂಡರೆ ದೇವರಾಜ ಅರಸು (Devaraj Arasu), ಬಂಗಾರಪ್ಪ (Bangarappa), ವೀರಪ್ಪ ಮೊಯ್ಲಿ (veerappa moily), ಧರ್ಮಸಿಂಗ್‌, ಗುಂಡೂರಾಯರು, ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಸಮಾಜಕ್ಕೆ ಯಾವುದಾದರೂ ಪಕ್ಷ ಅಧಿಕಾರ ಕೊಟ್ಟಿದೆ ಎಂದರೆ ಅದು ಕಾಂಗ್ರೆಸ್‌ ಮಾತ್ರ. ಕಾಂಗ್ರೆಸ್‌ ಎಲ್ಲ ವರ್ಗದ ಪರ ಕಾರ್ಯಕ್ರಮ ರೂಪಿಸುತ್ತದೆ ಎಂದು ಹೇಳಿದರು.

'ಅವರಿಬ್ಬರಿಗೂ ಹುಚ್ಚು ಹಿಡಿದಿದೆ : ಕಾಂಗ್ರೆಸ್ ಒಂದು ವರ್ಷದೊಳಗೆ ಎರಡು ಪಾಲಾಗುತ್ತದೆ'

ನಮ್ಮ ಪಕ್ಷ ಕಾಲಕಾಲಕ್ಕೆ ಆಯಾ ಸಮುದಾಯಕ್ಕೆ ನಾಯಕತ್ವ, ರಾಜಕೀಯ ಪಾಲುದಾರಿಕೆ, ಮೀಸಲಾತಿ ಕಲ್ಪಿಸಿದೆ. ಸಾಂಪ್ರದಾಯಿಕ ವೃತ್ತಿ ಅವಲಂಬಿತರಿಗೆ ಕೊರೋನಾ ಸಮಯದಲ್ಲಿ ಪರಿಹಾರ ನೀಡಬೇಕು ಎಂದು ನಾವು ಹೋರಾಟ ಮಾಡಿದ್ದೇವೆ. ನಾನು ಯಾರಿಗೂ ಭಯಪಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.

ಈಶ್ವರಪ್ಪ ಬೆಡ್‌ ವ್ಯವಸ್ಥೆ ಮಾಡಿದರೆ ಮೆಂಟಲ್‌ ಆಸ್ಪತ್ರೆಗೆ ಹೋಗುತ್ತೇನೆ

 ನನ್ನನ್ನು ಮೆಂಟಲ್‌ ಆಸ್ಪತ್ರೆಗೆ ಸೇರಿಸಲು ಅವರು ಸಚಿವ ಕೆ.ಎಸ್‌. ಈಶ್ವರಪ್ಪ (KS Eshwarappa) ಬಯಸಿದ್ದಾರೆ. ಅವರು ಹಾಸಿಗೆ ವ್ಯವಸ್ಥೆ ಕಲ್ಪಿಸಿದರೆ ನಾನು ಹೋಗಿ ದಾಖಲಾಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದರು. ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ನಾವು ಯಾರಾದರೂ ಒಬ್ಬ ಶಾಸಕರು ನಮ್ಮ ಪಕ್ಷ ಸೇರುತ್ತಾರೆ ಎಂದು ಹೆಸರು ಹೇಳಿದ್ದೇವೆಯೇ? ನಮ್ಮ ರಾಜಕಾರಣ ನಾವು ಮಾಡುತ್ತಿದ್ದೇವೆ. ಇವರಿಗೆ ಭಯ ಯಾಕೆ ಎಂದರು.