ಬೆಂಗಳೂರು [ಅ.09]:  ರಾಜ್ಯ ವಿಧಾನಮಂಡಲ ಅಧಿವೇಶನ ಗುರುವಾರದಿಂದ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಬುಧವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಮಹತ್ವದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಪ್ರತಿಪಕ್ಷ ನಾಯಕರ ನೇಮಕದ ಘೋಷಣೆಯಾಗಲಿದೆಯೇ ಅಥವಾ ಇಲ್ಲವೇ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಈಗಾಗಲೇ ಪ್ರತಿಪಕ್ಷ ನಾಯಕನ ಸ್ಥಾನ ನೇಮಕ ವಿಚಾರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್‌ ಮಿಸ್ತ್ರಿ ಅವರು ರಾಜ್ಯಕ್ಕೆ ಆಗಮಿಸಿ ಪಕ್ಷದ ನಾಯಕರು ಹಾಗೂ ಶಾಸಕರಿಂದ ಅಭಿಪ್ರಾಯ ಪಡೆದು ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದಾರೆ. ಪಕ್ಷದ ಕೆಲ ಹಿರಿಯ ನಾಯಕರ ತೀವ್ರ ವಿರೋಧದ ನಡುವೆ ಕಾಂಗ್ರೆಸ್‌ನ ಒಟ್ಟು 66 ಶಾಸಕರ ಪೈಕಿ 46 ಜನರು ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಅವರನ್ನೇ ಪ್ರತಿಪಕ್ಷ ನಾಯಕನನ್ನಾಗಿ ನೇಮಕ ಮಾಡಬೇಕು ಎಂದು ಸಹಿ ಸಂಗ್ರಹದ ಮೂಲಕ ಲಿಖಿತ ರೂಪದ ಅಭಿಪ್ರಾಯ ನೀಡಿದ್ದಾರೆ.

ಆದರೆ, ಪ್ರತಿಪಕ್ಷ ನಾಯಕನ ನೇಮಕ ಮಾಡುವ ವಿಚಾರದಲ್ಲಿ ಹೈಕಮಾಂಡ್‌ ಗೊಂದಲಕ್ಕೆ ಸಿಲುಕಿದೆ. ಒಂದೆಡೆ ಪಕ್ಷದ ಹೆಚ್ಚಿನ ಶಾಸಕರು ಹಾಗೂ ವಿವಿಧ ನಾಯಕರು ಸಿದ್ದರಾಮಯ್ಯ ಅವರ ಪರ ನಿಂತಿದ್ದು, ಅವರನ್ನೇ ಪ್ರತಿಪಕ್ಷ ನಾಯಕನ್ನಾಗಿ ನೇಮಿಸಬೇಕೆಂದು ಲಿಖಿತ ರೂಪದ ಅಭಿಪ್ರಾಯ ಮಂಡಿಸಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಅವರ ನೇಮಕಕ್ಕೆ ಪಕ್ಷದ ಕೆಲ ಹಿರಿಯ ನಾಯಕರ ಮತ್ತೊಂದು ಬಣ ವಿರೋಧ ವ್ಯಕ್ತಪಡಿಸಿದೆ. ಜತೆಗೆ ಕಳೆದ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಅನರ್ಹ ಶಾಸಕರು ಸಿದ್ದರಾಮಯ್ಯ ಅವರ ಬೆಂಬಲಿಗರೇ ಆಗಿದ್ದು, ಸರ್ಕಾರ ಪತನಕ್ಕೆ ಪರೋಕ್ಷವಾಗಿ ಸಿದ್ದರಾಮಯ್ಯ ಅವರೇ ಕಾರಣ ಎಂಬ ದೂರು ಕೂಡ ಹೈಕಮಾಂಡ್‌ ಮುಂದಿದೆ. ಈ ದೂರಿನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಬಿಟ್ಟು ಬೇರೆಯವರನ್ನು ಪ್ರತಿಪಕ್ಷ ನಾಯಕನನ್ನಾಗಿ ನೇಮಿಸಲು ಮುಂದಾಗುವುದಾದರೆ ಅಂತಹ ಪರ್ಯಾಯ ನಾಯಕ ಯಾರಿದ್ದಾರೆ ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ. ಹಾಗಾಗಿ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕನನ್ನಾಗಿ ನೇಮಿಸುವುದೇ, ಬೇಡವೇ ಎಂಬ ಗೊಂದಲ ಹೈಕಮಾಂಡ್‌ನಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೆ, ಸಿದ್ದರಾಮಯ್ಯ ಅವರನ್ನು ಬಿಟ್ಟು ಬೇರೆಯವರನ್ನು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ನೇಮಿಸಿದರೆ ಪಕ್ಷ ಸಂಘಟನೆ ಹಾಗೂ ಉಪಚುನಾವಣೆಯ ಮೇಲೆ ಏನು ಪರಿಣಾಮ ಬೀರಬಹುದು ಎಂಬ ಬಗ್ಗೆಯೂ ಹೈಕಮಾಂಡ್‌ ಸೂಕ್ಷ್ಮ ಅವಲೋಕನ ನಡೆಸಿದೆ. ಒಂದು ವೇಳೆ ಪ್ರತಿಪಕ್ಷ ನಾಯಕನ ನೇಮಕ ವಿಚಾರದಲ್ಲಿ ಸ್ಪಷ್ಟನಿರ್ಧಾರಕ್ಕೆ ಬರಲಾಗದಿದ್ದರೆ ಸದ್ಯದ ಮಟ್ಟಿಗೆ ಅಂದರೆ ಸದನ ಮುಗಿಯವವರೆಗೂ ನೇಮಕ ಮುಂದೂಡಿ, ಮತ್ತೊಮ್ಮೆ ಪಕ್ಷದ ಪ್ರಮುಖ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಹೈಕಮಾಂಡ್‌ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಬುಧವಾರ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆಯಂತೂ ನಡೆಯಲಿದ್ದು, ಸರ್ಕಾರದಿಂದ ನೆರೆ ಪರಿಹಾರ ವಿತರಣೆ ವಿಳಂಬವಾಗಿದೆ, ಪರಿಹಾರ ಕಾರ್ಯಗಳಲ್ಲಿ ವೈಫಲ್ಯ ಉಂಟಾಗಿದೆ ಮುಂತಾದ ವಿಚಾರಗಳನ್ನು ಮುಂದಿಟ್ಟು ಸದನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಾರಿಕೆ ಹೆಣೆಯುವ ಪ್ರಯತ್ನ ನಡೆಯಲಿದೆ.