ಬೆಂಗಳೂರು :  ಅತೃಪ್ತ ಶಾಸಕರು ಬಿಜೆಪಿಯತ್ತ ವಾಲುವ ಸಾಧ್ಯತೆ ಇನ್ನೂ ಇದ್ದು, ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಯುವ ಸಾಧ್ಯತೆ ಬಗ್ಗೆ ಆಡಳಿತಾರೂಢ ಜೆಡಿಎಸ್‌-ಕಾಂಗ್ರೆಸ್‌ನಲ್ಲಿ ಇನ್ನೂ ಆತಂಕವಿದೆ. ಹೀಗಾಗಿ, ಸರ್ಕಾರ ಅಲ್ಪಮತಕ್ಕೆ ಬೀಳದಂತೆ ತಡೆಯಲು ಬಿಜೆಪಿಗೆ ರಿವರ್ಸ್‌ ಆಪರೇಷನ್‌ ನಡೆಸುವುದೂ ಸೇರಿದಂತೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಉಭಯ ಪಕ್ಷಗಳ ನಾಯಕರು ತೀರ್ಮಾನಿಸಿದ್ದಾರೆ.

ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಅವರ ನೇತೃ​ತ್ವ​ದಲ್ಲಿ ನಡೆದ ಸಮ​ನ್ವಯ ಸಮಿತಿ ಸಭೆ​ಯಲ್ಲಿ ಈ ನಿರ್ಧಾರ ಕೈಗೊ​ಳ್ಳ​ಲಾ​ಗಿ​ದೆ.

ಕಾಂಗ್ರೆಸ್‌ನ ಅತೃಪ್ತ ಶಾಸಕರ ನೆರವಿನಿಂದ ಬಿಜೆಪಿ ಸತ​ತ​ವಾಗಿ ಸರ್ಕಾರ ಅಸ್ಥಿ​ರ​ಗೊ​ಳಿ​ಸಲು ಯತ್ನಿ​ಸು​ತ್ತಿದೆ. ಅಲ್ಲ ಮುಂದಿನ ವಿಧಾ​ನ​ಮಂಡಲ ಅಧಿ​ವೇ​ಶ​ನದ ವೇಳೆ ಅವಿ​ಶ್ವಾಸ ನಿರ್ಣಯ ಮಂಡಿ​ಸುವ ಮತ್ತು ಆ ವೇಳೆಗೆ ಉಭಯ ಪಕ್ಷ​ಗಳ ಶಾಸ​ಕರನ್ನು ಸೆಳೆದು ಪಕ್ಷ ಅಲ್ಪ​ಮ​ತಕ್ಕೆ ಬೀಳು​ವಂತೆ ಮಾಡುವ ತಂತ್ರ​ಗಾ​ರಿ​ಕೆ​ಯಲ್ಲಿ ನಿರ​ತ​ವಾಗಿದೆ. ಇದೇ ವೇಳೆ ಕಾಂಗ್ರೆ​ಸ್‌ನ ನಾಲ್ಕು ಮಂದಿ ಅತೃಪ್ತ ಶಾಸ​ಕರು ಇನ್ನೂ ಪಕ್ಷದ ನಾಯ​ಕರ ಸಂಪ​ರ್ಕಕ್ಕೆ ಸಿಗು​ತ್ತಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ಅಲ್ಪ​ಮ​ತಕ್ಕೆ ಕುಸಿ​ಯ​ದಂತೆ ಮಾಡಲು ಅಗತ್ಯ ತಂತ್ರ​ಗಾ​ರಿಕೆ ಮಾಡ​ಬೇ​ಕಾದ ಅಗ​ತ್ಯ​ವಿದೆ ಎಂಬು​ದನ್ನು ಉಭಯ ಪಕ್ಷ​ಗಳ ನಾಯ​ಕರು ಸಭೆ​ಯಲ್ಲಿ ಒಪ್ಪಿ​ಕೊಂಡ​ರು.

ಜತೆಗೆ, ರಿವ​ರ್ಸ್‌ ಆಪ​ರೇ​ಷನ್‌ ಮೂಲಕ ಬಿಜೆ​ಪಿಯ ಸಂಖ್ಯಾ​ಬ​ಲ​ವನ್ನು ಕುಸಿ​ಯು​ವಂತೆ ಮಾಡು​ವುದು ಹಾಗೂ ಕಾಂಗ್ರೆ​ಸ್‌ನ ಅತೃಪ್ತ ಶಾಸ​ಕರು ಪಕ್ಷ ತೊರೆ​ಯ​ದಂತೆ ತಡೆ​ಯಲು ಸಾಧ್ಯ​ವಿ​ರುವ ಎಲ್ಲಾ ಕ್ರಮ​ಗ​ಳನ್ನು ಕೈಗೊ​ಳ್ಳಲು ತೀರ್ಮಾ​ನಿ​ಸ​ಲಾ​ಯಿತು. ಇದೇ ವೇಳೆ ಪಕ್ಷದ ಇನ್ಯಾವ ಶಾಸ​ಕರು ಬಿಜೆ​ಪಿಯ ಆಮಿ​ಷಕ್ಕೆ ಬಲಿ​ಯಾ​ಗ​ದಂತೆ ಎಚ್ಚ​ರಿಕೆ ವಹಿ​ಸುವ ಕುರಿತು ತೀರ್ಮಾ​ನಿ​ಸ​ಲಾ​ಯಿತು.

ಬಿಜೆ​ಪಿಯ ತಂತ್ರ​ಗಾ​ರಿ​ಕೆಗೆ ಪ್ರತಿ ತಂತ್ರ ಹೂಡಲು ಆ ಪಕ್ಷದ ಶಾಸ​ಕ​ರನ್ನು ಸೆಳೆ​ಯ​ಬೇಕು. ಈ ಬಗ್ಗೆ ಅಂತಹ ಶಾಸಕರ ಪಟ್ಟಿಮಾಡಿ ಒಂದಿಬ್ಬರು ಶಾಸಕರನ್ನು ಸೆಳೆಯಬೇಕು. ಇದಕ್ಕೆ ಅಗತ್ಯವಾಗಿರುವ ಎಲ್ಲಾ ಸಹಕಾರವನ್ನು ಸರ್ಕಾರ ಹಾಗೂ ಉಭಯ ಪಕ್ಷಗಳು ನೀಡಬೇಕು ಎಂದು ಚರ್ಚಿಸಿದರು.

ಸಭೆ​ಯಲ್ಲಿ ಈ ವಿಚಾರ ಪ್ರಸ್ತಾ​ಪಿ​ಸಿದ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವರು, ಬಿಜೆ​ಪಿಯ ಹಲವು ಶಾಸ​ಕರು ನಮ್ಮ ಸಂಪ​ರ್ಕ​ದಲ್ಲೂ ಇದ್ದಾರೆ. ಈ ಪೈಕಿ ಕೆಲ​ವರು ಕಾಂಗ್ರೆಸ್‌ ಪಕ್ಷ ಸೇರುವ ಬಯಕೆ ವ್ಯಕ್ತ​ಪ​ಡಿ​ಸಿ​ದ್ದಾರೆ. ಹೀಗಾಗಿ ಹೈಕ​ಮಾಂಡ್‌ನ ಜತೆ ಚರ್ಚಿಸಿ ಬಿಜೆ​ಪಿ​ಯಿಂದ ಬರುವ ಶಾಸ​ಕ​ರನ್ನು ಕಾಂಗ್ರೆ​ಸ್‌ಗೆ ಸೇರಿ​ಸಿ​ಕೊ​ಳ್ಳಲು ಒಪ್ಪಿಗೆ ಪಡೆ​ಯ​ಬೇಕು ಎಂದು ಹೇಳಿ​ದರು ಎನ್ನ​ಲಾ​ಗಿದೆ.

ಇದೇ ವೇಳೆ ಉಭಯ ಪಕ್ಷ​ಗಳ ಶಾಸ​ಕರು ಸರ್ಕಾ​ರದ ಕಾರ್ಯ ವೈಖರಿ ಬಗ್ಗೆ ಅಸ​ಮಾ​ಧಾ​ನ​ಗೊ​ಳ್ಳ​ದಂತೆ ನೋಡಿ​ಕೊ​ಳ್ಳ​ಬೇಕು. ಶಾಸ​ಕರ ಕೆಲ​ಸ ಕಾರ್ಯ​ಗಳ ವಿಷ​ಯ​ದಲ್ಲಿ ತಾರ​ತಮ್ಯ ಮಾಡ​ಬಾ​ರದು ಎಂಬ ಕಾಂಗ್ರೆಸ್‌ ನಾಯ​ಕರ ಮನ​ವಿಗೆ ಮುಖ್ಯ​ಮಂತ್ರಿ​ಯ​ವರು ಒಪ್ಪಿಗೆ ನೀಡಿ​ದರು ಎಂದು ಮೂಲ​ಗಳು ತಿಳಿ​ಸಿ​ವೆ.

ಮೊದಲಿಗೆ ಪಕ್ಷದ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ನಿಗಮ-ಮಂಡಳಿ, ಸಂಸದೀಯ ಕಾರ್ಯದರ್ಶಿ ಹುದ್ದೆಗಳ ನೇಮಕಾತಿ ಬಗ್ಗೆ ಆದೇಶ ಹೊರಡಿಸಬೇಕು. ಜತೆಗೆ ಇನ್ನಿಬ್ಬರು ಅತೃ​ಪ್ತ ಶಾಸಕರಿಗೆ ನಿಗಮ-ಮಂಡಳಿ ಹುದ್ದೆ ನೀಡಲಿದ್ದು, ಅದನ್ನೂ ನೇಮಕ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆ ಚರ್ಚೆ ಇಲ್ಲ:  ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಮೈತ್ರಿ ಹಾಗೂ ಕ್ಷೇತ್ರ ಹಂಚಿಕೆ ವಿಚಾ​ರ​ವನ್ನು ಈ ಸಭೆಯ ಚರ್ಚೆಯ ವಿಷ​ಯ​ದಿಂದ ಹೊರ​ಗಿ​ಡಲು ಸಭೆಯ ಆರಂಭ​ದಲ್ಲೇ ಉಭಯ ಪಕ್ಷ​ಗಳ ನಾಯ​ಕರು ತೀರ್ಮಾ​ನಿ​ಸಿ​ದ​ರು.

ಲೋಕ​ಸಭೆ ಕ್ಷೇತ ಹಂಚಿಕೆ ವಿಚಾ​ರ​ವಾಗಿ ರಾಜ್ಯ ನಾಯ​ಕ​ತ್ವದ ಮಟ್ಟ​ದಲ್ಲಿ ಪ್ರತ್ಯೇ​ಕ​ವಾಗಿ ಒಂದು ಸಭೆ ನಡೆ​ಸೋಣ. ಈ ಸಭೆ​ಯಲ್ಲಿ ಉಭಯ ಪಕ್ಷ​ಗಳ ನಾಯ​ಕರು ತಮ್ಮ ಅಭಿ​ಪ್ರಾಯ ಮಂಡಿ​ಸಲಿ. ಅನಂತರ ಈ ಅಭಿ​ಪ್ರಾ​ಯ​ವನ್ನು ಹೈಕ​ಮಾಂಡ್‌ಗೆ ತಿಳಿ​ಸೋಣ. ಹೈಕ​ಮಾಂಡ್‌ ಮಟ್ಟ​ದಲ್ಲೇ ಈ ಬಗ್ಗೆ ತೀರ್ಮಾ​ನ​ವಾ​ಗಲಿ ಎಂದು ಸಿದ್ದ​ರಾ​ಮಯ್ಯ ಅವರು ಸಭೆಗೆ ತಿಳಿ​ಸಿದ್ದು, ಅದಕ್ಕೆ ಉಭಯ ಪಕ್ಷ​ಗಳ ನಾಯ​ಕರು ಒಪ್ಪಿ​ದರು ಎಂದು ಮೂಲ​ಗಳು ಹೇಳಿ​ವೆ.

ಬಡ್ತಿ ಮೀಸ​ಲಾ​ತಿ ಮೂಡದ ಒಮ್ಮ​ತ:  ಸಭೆ​ಯಲ್ಲಿ ಬಡ್ತಿ ಮೀಸ​ಲಾತಿ ಜಾರಿ​ಗೊ​ಳಿ​ಸುವ ವಿಷ​ಯವೂ ಪ್ರಸ್ತಾ​ಪ​ಗೊಂಡಿದ್ದು, ಈ ಬಗ್ಗೆ ಒಮ್ಮತ ಮೂಡಿ ಬರ​ಲಿಲ್ಲ ಎಂದು ತಿಳಿದು ಬಂದಿ​ದೆ. ಬಡ್ತಿ ಮೀಸ​ಲಾತಿ ನೀತಿ ಜಾರಿ​ಗೊ​ಳಿ​ಸ​ಬೇಕು ಎಂಬ ಕಾಂಗ್ರೆಸ್‌ ನಾಯ​ಕರ ಆಗ್ರ​ಹಕ್ಕೆ ಈ ಬಗ್ಗೆ ಸಾಧಕ ಬಾಧಕ ನೋಡಿ ನಂತರ ತೀರ್ಮಾನ ಕೈಗೊ​ಳ್ಳು​ವು​ದಾಗಿ ಕುಮಾ​ರ​ಸ್ವಾಮಿ ತಿಳಿ​ಸಿದರು ಎಂದು ಮೂಲ​ಗಳು ಹೇಳಿ​ವೆ.