ಕಾಂಗ್ರೆಸ್ಸಿಂದ ಸರ್ಕಾರಿ ಕಚೇರಿ ಬಂದ್ ಎಚ್ಚರಿಕೆ: ಕೇಂದ್ರಕ್ಕೆ ಸಿದ್ದು, ಡಿಕೆಶಿ ಆಗ್ರಹ
ದೆಹಲಿಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಸೋಮವಾರ ಬೆಂಗಳೂರಿನ ಜಾರಿ ನಿರ್ದೇಶನಾಲಯದ ಕಚೇರಿ (ಇ.ಡಿ) ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು (ಜೂ.14): ದೆಹಲಿಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಸೋಮವಾರ ಬೆಂಗಳೂರಿನ ಜಾರಿ ನಿರ್ದೇಶನಾಲಯದ ಕಚೇರಿ (ಇ.ಡಿ) ಎದುರು ಬೃಹತ್ ಪ್ರತಿಭಟನೆ ನಡೆಸಿದ್ದು, ಕೇಂದ್ರ ಸರ್ಕಾರವು ದ್ವೇಷದ ರಾಜಕಾರಣ ಮುಂದುವರೆಸಿದರೆ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಲಾಲ್‌ಬಾಗ್ ಮುಖ್ಯಗೇಟ್‌ನಿಂದ ಇ.ಡಿ. ಕಚೇರಿವರೆಗೂ ಪಾದಯಾತ್ರೆ ನಡೆಸಿದರು.
ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಕಾರ್ಯಕರ್ತರೊಂದಿಗೆ ಆಗಮಿಸಿದ ಕಾಂಗ್ರೆಸ್ ನಾಯಕರು ಬ್ಯಾರಿಕೇಡ್ ತಳ್ಳಿಕೊಂಡು ಕಚೇರಿಯತ್ತ ನುಗ್ಗಲು ಪ್ರಯತ್ನಿಸಿದರು. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಸೇರಿ ಕೆಲ ಕಾರ್ಯಕರ್ತರು ಬ್ಯಾರಿಕೇಡ್ ಹತ್ತಿದ್ದರಿಂದ ಹೈಡ್ರಾಮಾ ಸೃಷ್ಟಿಯಾಗಿತ್ತು. ಈ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಗ್ವಾದ ನಡೆದು ಅಂತಿಮವಾಗಿ ಪೊಲೀಸರು ಕಾಂಗ್ರೆಸ್ ನಾಯಕರನ್ನು ಬಂಧಿಸಿ ವಶಕ್ಕೆ ಪಡೆದರು.
ಪರಿಷ್ಕೃತ ಪಠ್ಯ ವಾಪಸಾತಿಗೆ ಆಗ್ರಹಿಸಿ ವಿಧಾನಸೌಧ ಮುಂದೆ ಕಾಂಗ್ರೆಸ್ ಬೃಹತ್ ಪ್ರತಿಭಟನೆ
ಸರ್ಕಾರಿ ಕಚೇರಿ ಬಂದ್ ಎಚ್ಚರಿಕೆ: ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರವು ಐ.ಟಿ., ಇ.ಡಿ.ಯಂತಹ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಧ್ವನಿ ಅಡಗಿಸಲು ಯತ್ನಿಸುತ್ತಿದೆ. ಇದನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಸಹಿಸುವುದಿಲ್ಲ. ನಮ್ಮ ನಾಯಕರಿಗೆ ಕಿರುಕುಳ ನೀಡಲು ಯತ್ನಿಸುತ್ತಿರುವ ಮೋದಿ ಸರ್ಕಾರದ ವಿರುದ್ಧ ಇದು ಸಾಂಕೇತಿಕ ಪ್ರತಿಭಟನೆ ಮಾತ್ರ. ಕೇಂದ್ರ ಇದೇ ಧೋರಣೆ ಮುಂದುವರೆಸಿದರೆ ಎಲ್ಲಾ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಗಿದು ಹೋಗಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣ ಮುಂದಿಟ್ಟುಕೊಂಡು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿದ್ದಾರೆ. ಸೋನಿಯಾ ಗಾಂಧಿ ಅನಾರೋಗ್ಯಕ್ಕೆ ತುತ್ತಾಗಿದ್ದು, ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಿದ್ದಾರೆ. ಅವರನ್ನು ಜೈಲಿಗೆ ಕರೆದುಕೊಂಡು ಹೋದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದರು.
ಜೈಲಿಗೆ ಹೋದರೆ ಪ್ರಾಣ ಬಿಡಲು ಸಿದ್ಧ: ಡಿ.ಕೆ.ಶಿವಕುಮಾರ್ ಮಾತನಾಡಿ, ಇ.ಡಿ.ಯವರು ನಮ್ಮ ಪಕ್ಷದ ನಾಯಕರಿಗೆ ಬೇಕಾದಷ್ಟು ತೊಂದರೆ ನೀಡಲಿದ್ದಾರೆ. ಇದನ್ನು ಎದುರಿಸಲು ನಾನು ಸಿದ್ಧನಿದ್ದೇನೆ. ನೀವು ತಿಹಾರ್ ಜೈಲಿಗಾದರೂ ಕರೆದುಕೊಂಡು ಹೋಗಿ, ಪರಪ್ಪನ ಅಗ್ರಹಾರಕ್ಕಾದರೂ ಕರೆದುಕೊಂಡು ಹೋಗಿ, ಆದರೆ ರಾಹುಲ್ ಗಾಂಧಿ ಅವರನ್ನು ಕರೆದುಕೊಂಡು ಹೋದರೆ ಈ ದೇಶಕ್ಕಾಗಿ ಪ್ರಾಣ ಬಿಡಲು ಸಿದ್ಧರಿದ್ದೇವೆ. ಅದೇ ಕಾರಣಕ್ಕೆ ನಾವೆಲ್ಲ ಪ್ರತಿಭಟನೆಯಲ್ಲಿ ಭಾವಹಿಸಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮೊದಲು ಡಿಸಿಪಿ ಶರಣಪ್ಪ ಮತ್ತಿತರ ಪೊಲೀಸ್ ಅಧಿಕಾರಿಗಳು ಪ್ರತಿಭಟನೆ ಕೈಬಿಡುವಂತೆ ಸಿದ್ದರಾಮಯ್ಯ ಅವರ ಮನವೊಲಿಸಲು ಯತ್ನಿಸಿದರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ಪ್ರತಿಭಟನೆ ಮೊಟಕುಗೊಳಿಸಲು ನಿರಾಕರಿಸಿದರು. ಹೀಗಾಗಿ ಪೊಲೀಸರು ನಾಯಕರನ್ನು ವಶಕ್ಕೆ ಪಡೆದರು. ಕಾಂಗ್ರೆಸ್ ನಾಯಕರಾದ ಎಂ.ಬಿ.ಪಾಟೀಲ್, ಸಲೀಂ ಅಹಮದ್, ರಾಮಲಿಂಗಾರೆಡ್ಡಿ, ಈಶ್ವರಖಂಡ್ರೆ, ಡಾ.ಜಿ. ಪರಮೇಶ್ವರ್, ಆರ್.ವಿ.ದೇಶಪಾಂಡೆ, ಕೆ.ಜೆ.ಜಾಜ್‌ರ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಗಾಂಧಿ, ಜಮೀರ್ ಅಹಮದ್ ಖಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇಡಿ ಅಧಿಕಾರಿಗೆ ಅಣಕು ಏಟು: ಜಾರಿ ನಿರ್ದೇಶನಾಲಯ ಅಧಿಕಾರಿ ಪಾತ್ರಧಾರಿಯಾಗಿ ಅರೆಬೆತ್ತಲಾಗಿ ನಿಂತ ಕಾರ್ಯಕರ್ತರೊಬ್ಬರನ್ನು ಕಾಂಗ್ರೆಸ್ ಕಾರ್ಯಕರ್ತರು ಬಾರು ಕೋಲಿನಿಂದ ಹೊಡೆಯುವ ಮೂಲಕ ಅಣಕು ಪ್ರದರ್ಶನ ನೀಡಿದರು. ‘ಕಾಂಗ್ರೆಸ್ ವಿರುದ್ಧ ಕ್ರಮ ಕೈಗೊಳ್ಳಲು ಎಷ್ಟುಕಮಿಷನ್ ಪಡೆದಿದ್ದೀಯಾ, ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತೀಯಾ’ ಎಂದು ಪ್ರಶ್ನಿಸಿದರು.
ಇತಿಹಾಸ ತಿರುಚಲು ಹೋಗಿ ಪಠ್ಯಪುಸ್ತಕದಲ್ಲಿ ಅವಾಂತರ: ಖಂಡ್ರೆ
ನಮ್ಮದು ರೌಡಿಗಳ ಪಕ್ಷವಲ್ಲ. ಬಿಜೆಪಿ ಕುತಂತ್ರಿಗಳ ಪಕ್ಷವಾಗಿದೆ. ಜನತೆ ಕೇಂದ್ರದ ಧೋರಣೆಯನ್ನು ಗಮನಿಸುತ್ತಿದೆ. ಇನ್ನು ಎರಡು ವರ್ಷ ಮಾತ್ರ ನಿಮ್ಮ ಆಟ ನಡೆಯಲಿದೆ.
-ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ
ಕೇಂದ್ರ ಸರ್ಕಾರ ನಿರಂತರವಾಗಿ ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಹೆದರಿಸುವ ಕೆಲಸ ಮಾಡುತ್ತಿದೆ. ಆದರೆ ಇದಕ್ಕೆ ನಾವು ಬಗ್ಗುವುದಿಲ್ಲ.
-ಸಲೀಂ ಅಹ್ಮದ್, ಕೆಪಿಸಿಸಿ ಉಪಾಧ್ಯಕ್ಷ
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಿಂದ ನೆಹರೂ ಕುಟುಂಬ ಯಾವುದೇ ಲಾಭ ಮಾಡಿಕೊಂಡಿಲ್ಲ. ಆದರೂ ಉದ್ದೇಶ ಪೂರ್ವಕವಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ.
-ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ