ಫೈಟ್ ಶಾಸಕ ಗಣೇಶ್ ಬಗ್ಗೆ ಜಮೀರ್ ಅಹಮದ್ ಹೇಳಿದ್ದೇನು..?
ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಗಣೇಶ್ ನಾಪತ್ತೆಯಾಗಿದ್ದು, ಆನಂದ್ ಸಿಂಗ್ ಒಪ್ಪಿದಲ್ಲಿ ಗಣೇಶ್ ಕರೆತರಲಾಗುವುದು ಎಂದು ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ.
ಬೆಂಗಳೂರು : ರೆಸಾರ್ಟ್‌ನಲ್ಲಿ ಸಹ ಶಾಸಕ ಗಣೇಶ್ ಅವರಿಂದ ಹಲ್ಲೆಗೊಳಗಾಗಿರುವ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರಿಗೆ ಇನ್ನೂ ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗುತ್ತದೆ.
ಮಂಗಳವಾರ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್, ಸಂಸದ ಡಿ.ಕೆ.ಸುರೇಶ್, ಸಚಿವ ಜಮೀರ್ ಅಹಮದ್ ಖಾನ್ ಸೇರಿದಂತೆ ವಿವಿಧ ನಾಯಕರು ಮಂಗಳವಾರ ಅಪೊಲೋ ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ಆನಂದ್ ಸಿಂಗ್ ಆರೋಗ್ಯ ವಿಚಾರಿಸಿದರು.
ಆಪರೇಷನ್ ಕಮಲದಿಂದ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ಇತ್ತೀಚೆಗೆ ತನ್ನೆಲ್ಲಾ ಶಾಸಕರನ್ನು ಬಿಡದಿ ಬಳಿಯ ಈಗಲ್‌ಟನ್ ರೆಸಾರ್ಟ್‌ಗೆ ಕರೆದೊಯಿದ್ದಾಗ ಶಾಸಕ ಗಣೇಶ್ ಜೊತೆ ನಡೆದ ಮಾರಾಮಾರಿಯಲ್ಲಿ ಆನಂದ್ ಸಿಂಗ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಪಕ್ಷದ ವಿವಿಧ ಗಣ್ಯರು ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಕೆ.ಪಾಟೀಲ್, ಶಾಸಕರ ನಡುವಿನ ಮಾರಾಮಾರಿ ಒಂದು ದುರ್ದೈವದ ಘಟನೆ. ಈ ರೀತಿ ಆಗಬಾರದಿತ್ತು. ಘಟನೆಯಿಂದ ನನಗೆ ವೈಯಕ್ತಿಕವಾಗಿ ನೋವಾಗಿದೆ. ಪಕ್ಷದ ಮಟ್ಟದಲ್ಲಿಯೂ ಇದು ನೋವಿನ ಸಂಗತಿ. ಆನಂದ್‌ಸಿಂಗ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಒಂದು ಕಣ್ಣಿಗೆ ಸ್ವಲ್ಪ ಗಾಯವಾಗಿದೆ. ಮತ್ತೊಂದು ಕಣ್ಣಿನಿಂದ ನೋಡುತ್ತಾರೆ. ನೋವು ಕಡಿಮೆ ಆಗಿದೆ ಎಂದು ಹೇಳಿದರು. ಘಟನೆ ಬಗ್ಗೆ ನಾವು ಹೆಚ್ಚು ಚರ್ಚೆ ಮಾಡಲು ಇಷ್ಟಪಡುವುದಿಲ್ಲ ಎಂದು ತಿಳಿಸಿದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಆನಂದ್‌ಸಿಂಗ್ ಇನ್ನೂ ನಾಲ್ಕು ದಿನ ಚಿಕಿತ್ಸೆ ಮುಂದುವರೆಸುವುದಾಗಿ ವೈದ್ಯರು ಹೇಳಿದ್ದಾರೆ. ನಂತರ ಆಸ್ಪತ್ರೆಯಿಂದ ಬಿಡುಗಡೆ ಬಗ್ಗೆ ನಿರ್ಧರಿಸಲಿದ್ದಾರೆ. ಭೇಟಿ ಸಂದರ್ಭದಲ್ಲಿ ಸುಮಾರು ಅರ್ಧಗಂಟೆ ಕಾಲ ಆನಂದ್‌ಸಿಂಗ್ ನನ್ನೊಂದಿಗೆ ಮಾತನಾಡಿದರು. ತಮ್ಮ ಮತ್ತು ಶಾಸಕ ಗಣೇಶ್ ನಡುವಿನ ಗಲಾಟೆ ಕುರಿತು ಮಾತನಾಡಿದ್ದಾರೆ ಎಂದರು.
ಘಟನೆ ಬಳಿಕ ಶಾಸಕ ಗಣೇಶ್ ನಾಪತ್ತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸುರೇಶ್, ಅದೆಲ್ಲ ಊಹಾಪೋಹ ಎಂದರು. ಹಾಗಾದರೆ ಗಣೇಶ್ ಎಲ್ಲಿದ್ದಾರೆ, ಪಕ್ಷದ ಜೊತೆ ಸಂಪರ್ಕದಲ್ಲಿದ್ದಾರಾ ಎಂಬ ಪ್ರಶ್ನೆಗೆ, ನಾನು ಸಿದ್ಧಗಂಗಾ ಮಠಕ್ಕೆ ಹೋಗಿದ್ದೆ ಶಿವಕುಮಾರ ಸ್ವಾಮೀಜಿ ಅವರ ದರ್ಶನ ಪಡೆದು ಇಲ್ಲಿಗೆ ಬಂದಿದ್ದೇನೆ. ಗಣೇಶ್ ಬಗ್ಗೆ ನನಗೆ ಮಾಹಿತಿ ಇಲ್ಲ, ಪಕ್ಷದ ನಾಯಕರ ಜೊತೆ ಸಂಪರ್ಕದಲ್ಲಿರುವ ಬಗ್ಗೆಯೂ ಗೊತ್ತಿಲ್ಲ ಎಂದರು.
ಆನಂದ್ ಒಪ್ಪಿದರೆ ಗಣೇಶ್ ಭೇಟಿ- ಜಮೀರ್: ಆನಂದ್ ಸಿಂಗ್ ಒಪ್ಪಿದರೆ ಗಣೇಶ್ ಅವರನ್ನು ಕರೆತಂದು ಮಾತನಾಡಿಸುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಬಗ್ಗೆ ಶಾಸಕ ಗಣೇಶ್ ಜೊತೆ ಮಾತನಾಡಿದ್ದೀನಿ, ಸ್ವತಃ ನನಗೆ ಕರೆ ಮಾಡಿದ ಅವರು ಈಗಾಗಲೇ ಕ್ಷಮೆ ಕೇಳಿದ್ದಾರೆ. ಇಂತಹ ಘಟನೆ ಆಗಬಾರದಿತ್ತು ಎಂಬ ನೋವು ಅವರಿಗೂ ಇದೆ ಎಂದರು.
ಆನಂದ್ ಸಿಂಗ್ ಭೇಟಿ ವೇಳೆ ರಾಜಕೀಯವಾಗಿ ಏನೂ ಮಾತನಾಡಿಲ್ಲ. ಆರೋಗ್ಯ ವಿಚಾರಿಸಿದೆ, ಸ್ವತಃ ಅವರೇ ಒಂದು ಗಂಟೆ ನಡೆದಾಡಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದರು ಎಂದರು.