ಬೆಂಗಳೂರು [ಅ.11]:  ನೆರೆಪೀಡಿತರ ಸಂಕಷ್ಟಹಾಗೂ ಪರಿಹಾರ ಕಾರ್ಯದಲ್ಲಿ ವಿಳಂಬ ಕುರಿತು ಚರ್ಚಿಸಲು ನಿಲುವಳಿ ಸೂಚನೆ ಮಂಡಿಸಲು ಮುಂದಾದ ಪ್ರತಿಪಕ್ಷಕ್ಕೆ ಅವಕಾಶ ನೀಡದೆ ಬಜೆಟ್‌ ಕುರಿತ ಪೂರಕ ಅಂದಾಜು ಮಂಡನೆಗೆ ಸ್ಪೀಕರ್‌ ಅವಕಾಶ ನೀಡಿದ್ದು ವಿಧಾನಮಂಡಲ ಅಧಿವೇಶನದ ಮೊದಲ ದಿನವಾದ ಗುರುವಾರ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಮತ್ತು ಸದನದಲ್ಲಿ ಕಾವೇರಿದ ವಾತಾವರಣ ನಿರ್ಮಾಣಕ್ಕೆ ಕಾರಣವಾಯಿತು.

ಸದನ ಆರಂಭವಾಗುತ್ತಿದ್ದಂತೆಯೇ ರಾಜ್ಯದಲ್ಲಿ ತೀವ್ರ ನೆರೆ ಹಾಗೂ ಬರ ಆವರಿಸಿದ್ದು, ನೆರೆಯಿಂದ 7 ಲಕ್ಷಕ್ಕೂ ಹೆಚ್ಚು ಮಂದಿ ಬೀದಿಪಾಲಾಗಿದ್ದಾರೆ. 90ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಈಗಲೂ ಆತ್ಮಹತ್ಯೆಗಳು ಮುಂದುವರೆದಿವೆ. ಹೀಗಾಗಿ ನೆರೆ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಲು ಕೋರಿ ಸಲ್ಲಿಸಿದ್ದ ನೋಟಿಸ್‌ ಆಧಾರದಲ್ಲಿ ನಿಲುವಳಿ ಪ್ರಸ್ತಾಪಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಾದರು. ಆದರೆ, ನಿಲುವಳಿ ಸೂಚನೆ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸಲು ನಿರಾಕರಿಸಿದ ಕಾಗೇರಿ ಅವರು ಕಾರ್ಯದರ್ಶಿಗಳ ವರದಿ ಸೇರಿದಂತೆ ವಿವಿಧ ವರದಿಗಳ ಒಪ್ಪಿಸಲು ಅವಕಾಶ ಮಾಡಿಕೊಟ್ಟರು.

ಸರ್ಕಾರ ನಡೆಯಲು ಬಿಡಲ್ಲ

ಸದನ ಮುಂದೂಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆರ್‌ಎಸ್‌ಎಸ್‌ ಅಥವಾ ಬೇರೊಬ್ಬರಿಂದ ನಿರ್ದೇಶನ ಪಡೆದು ಈ ರೀತಿ ಮಾಡಿದ್ದಾರೆ ಎನಿಸುತ್ತಿದೆ. ನೆರೆ ಮೇಲೆ ಚರ್ಚೆ ನಡೆಸಲು ಅವಕಾಶ ಕಲ್ಪಿಸದಿದ್ದರೆ ಜನತಾ ನ್ಯಾಯಾಲಯದ ಮುಂದೆ ಹೋಗಬೇಕಾಗುತ್ತದೆ. ಈ ಸರ್ಕಾರ ಹಾಗೂ ಅಧಿವೇಶನ ನಡೆಯಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಪಾಪ ಮಂತ್ರಿ ಆಗ್ಬೇಕು ಅಂದ್ಕಂಡಿದ್ರಿ, ಸಿಎಂ ಬಿಎಸ್‌ವೈಗೆ ಡಿಸಿಎಂಗಳ ಹೆಸರೇ ಗೊತ್ತಿಲ್ಲ!'...

ಬಳಿಕ ನಡೆದ ಸದನ ಸಲಹಾ ಸಮಿತಿಯಲ್ಲೂ ಈ ಬಗ್ಗೆ ಚರ್ಚೆ ನಡೆದಿದ್ದು, ಭೋಜನ ವಿರಾಮದ ಬಳಿಕ ನೆರೆಯ ಮೇಲೆ ಚರ್ಚಿಸಲು ನಿಯಮ 68ರ ಅಡಿ ಚರ್ಚೆಗೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಅವಕಾಶ ಮಾಡಿಕೊಟ್ಟರು.