'ನಾನು ಯಾರ ದೇಹದ ಬಗ್ಗೆಯೂ ಮಾತಾಡಿಲ್ಲ : ತಪ್ಪಾಗಿ ಅರ್ಥೈಸಲಾಗಿದೆ'
ನಾನು ಯಾರ ದೇಹದ ಬಗ್ಗೆಯೂ ಮಾತನಾಡಿಲ್ಲ ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ
ಕಲಬುರಗಿ (ಅ.26): ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ 23 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ರೈತರು, ಜನ ಸಂಕಷ್ಟದಲ್ಲಿದ್ದಾರೆ. ಉಸ್ತುವಾರಿ ಮಂತ್ರಿಗಳು ಜಿಲ್ಲೆಗಳಲ್ಲಿ ಬೀಡು ಬಿಟ್ಟು ಪರಿಹಾರ ಕೈಗೊಳ್ಳಬೇಕು. ಆದರೆ ಕಲಬುರಗಿ ಜಿಲ್ಲಾ ಉಸ್ತುವಾರಿ ಮಂತ್ರಿ ಮೇ ನಿಂದ ಜಿಲ್ಲೆಯತ್ತ ತಲೆ ಹಾಕಿಲ್ಲ ಎಂದರು.
ಕಲಬುರಗಿಯಲ್ಲಿ ಮಾತನಾಡಿದ ಕಂದಾಯ ಸಚಿವರು ಪಿಕ್ ನಿಕ್ ಬಂದಂತೆ ಕಲಬುರಗಿಗೆ ಬಂದು ಹೋಗಿದ್ದಾರೆ. ಇನ್ನು ಸಿಎಂ ಮೇಲಿಂದ ಹಾರಾಟ ಮಾಡಿ ಹೋಗಿದ್ದಾರೆ ಮೇಲಿಂದ ಅವರಿಗೆ ಏನು ಕಂಡಿತೋ ಗೊತ್ತಿಲ್ಲ. ಒಬ್ಬನೇ ಒಬ್ಬ ಸಂತ್ರಸ್ಥರ ಕಷ್ಟ ಸಿಎಂ ಆಲಿಸಿಲ್ಲ. ಸಿಎಂ ಮತ್ತು ಮಂತ್ರಿಗಳ ನಡೆಯಿಂದ ಅಧಿಕಾರಿಗಳಿಗೆ ಲಂಗು ಲಗಾಮು ಇಲ್ಲದಂತಾಗಿದೆ ಎಂದು ಮಾಜಿ ಸಿಎಂ ವಾಗ್ದಾಳಿ ನಡೆಸಿದರು.
ಇನ್ನು ಪ್ರವಾಹದಿಂದ ಜನ ಸಂಕಷ್ಟದಲ್ಲಿದ್ದರೂ ರಾಜ್ಯ ಮತ್ತು ಕೇಂದ್ರ ಸರಕಾರ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ನೆರೆ ಸಂಕಷ್ಟ ನಿಭಾಹಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ ಸಚಿವ ರಮೇಶ್ ಜಾರಕಿಹೊಳಿ
ನೆರೆ ನಿರ್ವಹಣೆಯಲ್ಲಿ ಸರಕಾರ ವಿಫಲವಾಗಿದೆ. ಇದೇ ಕಾರಣಕ್ಕೆ ಸರಕಾರಕ್ಕೆ ದಮ್ ಇಲ್ಲ ಎಂದು ನಾನು ಹೇಳಿದ್ದೆ. ಆದರೆ ಕೆಲವರು ಅದನ್ನು ದೈಹಿಕ ತಾಕತ್ತು ಎಂದು ಹೋಲಿಸುತ್ತಿದ್ದಾರೆ. ಸಿದ್ದರಾಮಯ್ಯಗಿಂತ ನಾಲ್ಕು ಪಟ್ಟು ದಮ್ ಇದೆ ಎನ್ನುತ್ತಿದ್ದಾರೆ.
ಫಿಜಿಕಲ್ ಆಗಿ ದಮ್ ಬಗ್ಗೆ ನಾನು ಮಾತಾಡಿಲ್ಲ. ಇವರಿಗೆ ಪರಿಹಾರ ಕೊಡಿಸೋ ದಮ್ ಇಲ್ಲ ಎಂದಿದ್ದೇನೆ. ಈಗಲೂ ದಮ್ ಇದ್ರೆ ಕೂಡಲೇ ಕೇಂದ್ರ ಸರಕಾರದಿಂದ ಪರಿಹಾರ ಕೊಡಿಸಲಿ. ನೆರೆ ನಿರ್ವಹಣೆಯ ಬಗ್ಗೆ ಚರ್ಚೆಗಾಗಿ ಸರಕಾರ ವಿಶೇಷ ಅಧಿವೇಶನ ಕರೆಯಲಿ ಎಂದು ಕಲಬುರಗಿಯಲ್ಲಿ ಸಿದ್ದರಾಮಯ್ಯ ಹೇಳಿದರು.