Asianet Suvarna News Asianet Suvarna News

ಜೆಡಿಎಸ್‌ ವಿರುದ್ಧ ಸಿದ್ದು ರಣತಂತ್ರ : ಏನದು ಮಾಸ್ಟರ್ ಪ್ಲಾನ್..?

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಇದೇ ವೇಳೆ ಜೆಡಿಎಸ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ರಣತಂತ್ರ ರೂಪಿಸುತ್ತಿದ್ದಾರೆ. 

Congress Leader Siddaramaiah Master Plan Against JDS For LokSabha Election 2019
Author
Bengaluru, First Published Feb 1, 2019, 8:20 AM IST

ಬೆಂಗಳೂರು :  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಮಿತ್ರಪಕ್ಷ ಜೆಡಿಎಸ್‌ ಜತೆಗಿನ ಸೀಟು ಹೊಂದಾಣಿಕೆ ವೇಳೆ ಕಾಂಗ್ರೆಸ್‌ ಪಕ್ಷವು ಮೇಲುಗೈ ಸಾಧಿಸುವಂತೆ ಮಾಡಲು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಮಹತ್ವದ ಸಭೆ ನಡೆದಿದ್ದು, ಸ್ಥಳೀಯ ನಾಯಕರೊಂದಿಗೆ ಚುನಾವಣಾ ರಣತಂತ್ರದ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದಾರೆ.

ಕಾಂಗ್ರೆಸ್‌ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುತ್ತಿರುವ ಜೆಡಿಎಸ್‌ ಪಕ್ಷವು ಹಳೆ ಮೈಸೂರು ಭಾಗದಲ್ಲಿ ಮಾತ್ರವೇ ಹೆಚ್ಚು ಪ್ರಾಬಲ್ಯ ಹೊಂದಿದೆ. ಜತೆಗೆ, ಈ ಭಾಗದಲ್ಲಿ ಜೆಡಿಎಸ್‌ಗೆ ಸಮಾನವಾದ ಬಲವನ್ನು ಕಾಂಗ್ರೆಸ್‌ ಹೊಂದಿದೆ. ಹೀಗಾಗಿ ಕಾಂಗ್ರೆಸ್‌ ಪಕ್ಷವು ಹಳೆ ಮೈಸೂರು ಭಾಗದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಸೀಟು ಹಂಚಿಕೆ ವೇಳೆ ಮಾಡಬೇಕಿರುವ ತಂತ್ರಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಹಾಸನ ಅಥವಾ ಮಂಡ್ಯ ಎರಡರಲ್ಲಿ ಒಂದನ್ನು ಮಾತ್ರ ಜೆಡಿಎಸ್‌ಗೆ ಬಿಟ್ಟು ಕೊಡಬೇಕು. ಇನ್ನು ತುಮಕೂರನ್ನೂ ಜೆಡಿಎಸ್‌ ಕೇಳಿದರೆ ತನ್ನದೇ ಸಂಸದ ಮುದ್ದಹನುಮೇಗೌಡರನ್ನು ಜೆಡಿಎಸ್‌ ಟಿಕೆಟ್‌ನೊಂದಿಗೆ ಕಣಕ್ಕಿಳಿಸಬೇಕು ಎಂಬ ಚರ್ಚೆ ನಡೆಯಿತು ಎಂದು ಮೂಲಗಳು ಹೇಳಿವೆ.

ಮಹತ್ವದ ಚರ್ಚೆ :  ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಮೈಸೂರು, ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳ ಮುಖಂಡರೊಂದಿಗೆ ಸಭೆ ನಡೆಸಲಾಯಿತು.

ಚುನಾವಣಾ ಪೂರ್ವ ಮೈತ್ರಿಯ ಪ್ರಾಥಮಿಕ ಒಪ್ಪಂದದಂತೆ ಹಾಲಿ ಸಂಸದರನ್ನು ಹೊಂದಿರುವ ಪಕ್ಷಕ್ಕೆ ಸೀಟು ಬಿಟ್ಟುಕೊಡಬೇಕು. ಆದರೆ, ಈ ನಿಯಮದ ಪ್ರಕಾರ ಮಂಡ್ಯ ಹಾಗೂ ಹಾಸನ ಎರಡೂ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು. ಹೀಗಾದರೆ ತಮ್ಮ ಪ್ರಬಲ ಸ್ಪರ್ಧಿಯಾಗಿರುವ ಜೆಡಿಎಸ್‌ ಪರವಾಗಿಯೇ ಕಾಂಗ್ರೆಸ್‌ ಕಾರ್ಯಕರ್ತರು ಕೆಲಸ ಮಾಡುವಂತಹ ಪರಿಸ್ಥಿತಿ ಎದುರಾಗಲಿದೆ. ಇದರಿಂದ ಈ ಭಾಗದಲ್ಲಿ ಪಕ್ಷ ಅಸ್ತಿತ್ವ ಕಳೆದುಕೊಳ್ಳುವ ಅಪಾಯವಿದೆ ಎಂಬ ಭೀತಿಯನ್ನು ಸ್ಥಳೀಯ ಮುಖಂಡರು ವ್ಯಕ್ತಪಡಿಸಿದರು.

ಹೀಗಾಗಿ, ಮಂಡ್ಯ ಹಾಗೂ ಹಾಸನದಲ್ಲಿ ಎರಡು ಕ್ಷೇತ್ರದಲ್ಲಿ ಒಂದು ಕ್ಷೇತ್ರವನ್ನು ಕಾಂಗ್ರೆಸ್‌ ಪಡೆಯಬೇಕು. ಒಂದು ವೇಳೆ ಮಂಡ್ಯ ಕ್ಷೇತ್ರವು ಕಾಂಗ್ರೆಸ್‌ ಪಾಲಿಗೆ ಬಂದರೆ ಸುಮಲತಾ ಅಂಬರೀಷ್‌ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು. ಸುಮಲತಾ ಅವರ ಹೆಸರು ಮುನ್ನೆಲೆಗೆ ತಂದರೆ ಮಂಡ್ಯ ಕ್ಷೇತ್ರವು ಕಾಂಗ್ರೆಸ್‌ಗೆ ದೊರಕುವ ಸಾಧ್ಯತೆ ಇದೆ. ಹೀಗಾಗಿ ಎರಡೂ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡದೆ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸುಮಲತಾ ಅವರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು.

ತುಮಕೂರು ಜೆಡಿಎಸ್‌ಗೆ? :  ಕಾಂಗ್ರೆಸ್‌ ಸಂಸದರು ಹೊಂದಿರುವ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಜೆಡಿಎಸ್‌ ಪಟ್ಟು ಹಿಡಿದರೆ ಕಾಂಗ್ರೆಸ್‌ ಸಂಸದ ಮುದ್ದಹನುಮೇಗೌಡ ಗೆದ್ದಿರುವ ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು, ಮುದ್ದ ಹನುಮೇಗೌಡ ಅವರನ್ನು ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್‌ ವಲಯದಲ್ಲಿ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಲೋಕಸಭಾ ಚುನಾವಣಾ ಪೂರ್ವ ಮೈತ್ರಿಯ ಪ್ರಾಥಮಿಕ ಹಂತದ ಮಾತುಕತೆ ಪ್ರಕಾರ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪೈಕಿ ಹಾಲಿ ಸಂಸದರನ್ನು ಹೊಂದಿರುವ ಪಕ್ಷವು ಕ್ಷೇತ್ರ ಬಿಟ್ಟುಕೊಡುವಂತಿಲ್ಲ. ಆದರೆ, ಇನ್ನೊಂದು ಮೂಲದ ಪ್ರಕಾರ ಕಾಂಗ್ರೆಸ್‌ನಂತೆಯೇ ಜೆಡಿಎಸ್‌ ಕೂಡ ಕಾಂಗ್ರೆಸ್‌ನ ಹಾಲಿ ಸಂಸದರಿರುವ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಒಂದೊಮ್ಮೆ ಈ ರೀತಿ ಬಿಟ್ಟುಕೊಡುವ ಸಂದರ್ಭ ಸೃಷ್ಟಿಯಾದರೆ ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು, ಹಾಲಿ ಕಾಂಗ್ರೆಸ್‌ ಸಂಸದರಾಗಿರುವ ಮುದ್ದ ಹನುಮೇಗೌಡ ಅವರನ್ನು ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆಯೂ ಕಾಂಗ್ರೆಸ್‌ ವಲಯದಲ್ಲಿ ಚರ್ಚೆಯಾಗಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭಕ್ಕೆ’ ತಿಳಿಸಿವೆ.

ಇದೇ ವೇಳೆ ಹಾಸನ ಹಾಗೂ ಮಂಡ್ಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಜೆಡಿಎಸ್‌ನಿಂದ ಆಗುತ್ತಿರುವ ತೊಂದರೆ ಹಾಗೂ ಅದನ್ನು ನಿಭಾಯಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

Follow Us:
Download App:
  • android
  • ios