ಬೆಂಗಳೂರು (ಮಾ.02]:  ವ್ಯವಸ್ಥಿತವಾಗಿ ಸಂಚು ರೂಪಿಸಿ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ವಿರುದ್ಧ ಹೇಳಿಕೆ ನೀಡಲಾಗುತ್ತಿದೆ. ಹೇಳಿಕೆ ಹಿಂದೆ ಕಾಣದ ಕೈಗಳ ಕೈವಾಡವಿದ್ದು, ಸಂಘ ಪರಿವಾರದವರು ಕೆಲವರ ಮೂಲಕ ಈ ರೀತಿ ಹೇಳಿಕೆ ನೀಡಿಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ದೊರೆಸ್ವಾಮಿ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆ ಖಂಡಿಸಿ ಸಾಹಿತಿಗಳು, ಪ್ರಗತಿಪರರು, ರಾಜಕೀಯ ಪಕ್ಷಗಳ ಮುಖಂಡರು ಭಾನುವಾರ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವವರ ಧ್ವನಿ ಅಡಗಿಸುವ ಪ್ರಯತ್ನವನ್ನು ಆರ್‌ಎಸ್‌ಎಸ್‌ನವರು ಮಾಡುತ್ತಿದ್ದಾರೆ. ಹಿಂಸಾಚಾರದ ಮೂಲಕ ಮತ ಸಮೀಕರಣ ಮಾಡುವುದು ಹಾಗೂ ಸಮಾಜದ ನಿಜವಾದ ಸಮಸ್ಯೆಗಳನ್ನು ಮರೆಮಾಚುವುದು ಅವರ ಉದ್ದೇಶ ಎಂದು ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಆರು ವರ್ಷಗಳಾಗಿದ್ದು, ಅಧಿಕಾರ ನಡೆಸುವಲ್ಲಿ ಸಂಪೂರ್ಣ ವಿಫಲರಾಗಿದೆ. ಹೀಗಾಗಿ, ಜನರ ಭಾವನೆಗಳ ಗಮನವನ್ನು ಬೇರೆಡೆ ತಿರುಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅನಂತಕುಮಾರ್‌ ಹೆಗಡೆ, ಗಾಂಧೀಜಿ ಬಗ್ಗೆ ಮಾತನಾಡಿದಾಗ ಅವರ ವಿರುದ್ಧ ಏನಾದರೂ ಕ್ರಮ ಕೈಗೊಂಡಿದ್ದರಾ ಎಂದು ಪ್ರಶ್ನಿಸಿದರು.

ಒಳ್ಳೆಯ ಬಜೆಟ್‌ ಮಂಡನೆ ಅಸಾಧ್ಯ:

ದೇಶದಲ್ಲಿ ಈಗಾಗಲೇ ಆರ್ಥಿಕ ಹಿಂಜರಿತ ಆಗಿದೆ. ಕೇಂದ್ರ ಸರ್ಕಾರ ಹಣಕಾಸಿನ ನೆರವೂ ನೀಡುತ್ತಿಲ್ಲ. ಜಿಎಸ್‌ಟಿ ಹಣವನ್ನೂ ಕೊಟ್ಟಿಲ್ಲ, ಬರಬೇಕಾದ ಯಾವ ಅನುದಾನವೂ ಸಿಗದಿರುವುದರಿಂದ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಉತ್ತಮ ಬಜೆಟ್‌ ಮಂಡಿಸಲು ಸಾಧ್ಯವೇ ಇಲ್ಲ. ಅಂದಾಜಿನ ಪ್ರಕಾರ ಸುಮಾರು 20 ಸಾವಿರ ಕೋಟಿ ರು. ಬಜೆಟ್‌ನಲ್ಲಿ ಖೋತಾ ಆಗಬಹುದು ಎಂದು ಹೇಳಿದರು.

ಮೋದಿ ಕೊಲೆಗಡುಕ ಎಂದ ಸಿದ್ದರಾಮಯ್ಯ: 'ಸೋನಿಯಾ ಗಾಂಧಿ ಕ್ರಮ ಕೈಗೊಳ್ಳಲಿಲ್ಲ ಯಾಕೆ?'..

ರಾಜ್ಯ 100 ರು. ಸಂಗ್ರಹಿಸಿ ನೀಡಿದರೆ, ಅದರಲ್ಲಿ ಕೇವಲ 45 ರು.ಗಳನ್ನು ಮಾತ್ರ ಕೇಂದ್ರ ಸರ್ಕಾರ ವಾಪಸ್‌ ನೀಡುತ್ತಿದೆ. ಉಳಿದ 55 ರು. ಕೇಂದ್ರ ಸರ್ಕಾರದ ಬಳಿಯೇ ಉಳಿದುಕೊಳ್ಳುತ್ತಿದೆ. ಈ ಬಗ್ಗೆ ಬಿಜೆಪಿಯ ಯಾವೊಬ್ಬ ಸಂಸದರೂ ಕೂಡ ಮಾತನಾಡುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಮಂತ್ರಿಗಳು ಕೂಡ ಮಾತನಾಡುತ್ತಿಲ್ಲ. ಹೀಗಾಗಿ, ಯಾವುದೇ ಕಾರಣಕ್ಕೂ ಒಳ್ಳೆಯ ಬಜೆಟ್‌ ಮಂಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಸಭೆಯ ನಿರ್ಣಯಗಳು

ದೊರೆಸ್ವಾಮಿ ಗುಂಡಿಗೆ ಬಲಿಯಾಗಲಿದ್ದಾರೆ ಎಂಬ ಹೇಳಿಕೆ ನೀಡಿ ಕೊಲೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಯತ್ನಾಳ ಹೇಳಿಕೆ ಸಮರ್ಥಿಸಿದ ಬಿಜೆಪಿ ಮುಖಂಡರು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ನಾಡಿನ ಜನತೆ ಕ್ಷಮೆ ಯಾಚಿಸಬೇಕು. ಯತ್ನಾಳ ಅವರನ್ನು ವಿಧಾನಸೌಧದ ಒಳಗೆ ಬಿಡಬಾರದು ಮತ್ತು ಅವರ ಶಾಸಕ ಸ್ಥಾನವನ್ನು ರದ್ದು ಮಾಡಬೇಕು, ಯತ್ನಾಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಈ ವಿಷಯವನ್ನು ಸದನದಲ್ಲಿ ಚರ್ಚಿಸಬೇಕೆಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು.