ಬೆಂಗಳೂರು (ಸೆ.28): ಭೂ ಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ರೈತರಿಂದ ಜಮೀನು ಕಸಿದುಕೊಳ್ಳುವುದು ಮಾತ್ರವಲ್ಲ ಕನಿಷ್ಠ ಬೆಂಬಲ ಬೆಲೆಯನ್ನೂ ತೆಗೆದು ಹಾಕಲು ಪ್ರಧಾನಿ ನರೇಂದ್ರ ಮೋದಿ ಹುನ್ನಾರ ಹೂಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಆರೋಪಿಸಿದ್ದಾರೆ.

ಅಲ್ಲದೆ, ಕೃಷಿಕರಿಂದ ಅಕ್ರಮವಾಗಿ ಜಮೀನು ಖರೀದಿ ಮಾಡಿದ್ದ 13 ಸಾವಿರ ಪ್ರಕರಣಗಳನ್ನು ರಾಜ್ಯ ಸರ್ಕಾರವು ರದ್ದು ಮಾಡಿರುವುದಲ್ಲದೆ ಕೊರೋನಾ ಹೆಸರಿನಲ್ಲೂ ಕೋಟ್ಯಂತರ ರು. ಭ್ರಷ್ಟಾಚಾರ ನಡೆಸಿದೆ. ಭ್ರಷ್ಟಾಚಾರದ ಕೂಪವಾಗಿರುವ ಈ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೊಗೆಯಬೇಕು ಎಂದು ಕರೆ ನೀಡಿದರು.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಹಿರಿಯ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಹಾಗೂ ಕಾಂಗ್ರೆಸ್‌ಗೆ ಅವಿನಾಭಾವ ಸಂಬಂಧ ಇದೆ. ಇಂದಿರಾಗಾಂಧಿ ಹಾಗೂ ಸೋನಿಯಾ ಗಾಂಧಿಯವರು ಚುನಾವಣೆ ಗೆದ್ದಿರುವ ರಾಜ್ಯವಿದು. ಹೀಗಾಗಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರಬೇಕು. ಇದಕ್ಕಾಗಿ ರಾಜ್ಯದಲ್ಲಿ ಮೆಡಿಕಲ್‌ ಕಿಟ್‌, ವೈದ್ಯಕೀಯ ಸಲಕರಣೆ ಖರೀದಿ ಸೇರಿದಂತೆ ಕೊರೋನಾ ಹೆಸರಿನಲ್ಲಿ ರಾಜ್ಯ ಸರ್ಕಾರ ನಡೆಸಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಜನರ ಮುಂದಿಡಬೇಕು ಎಂದು ಮುಖಂಡರಿಗೆ ತಿಳಿಸಿದರು.

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಬದಲಾವಣೆ: ಹೊಸಬರಿಗೆ ರಾಜ್ಯದ ಕೈ ಹೊಣೆ..! ...

ರೈತರಿಂದ ಕೃಷಿ ಭೂಮಿ ಉಳ್ಳವರ ಪಾಲಾಗಬಾರದು ಎಂದು ಭೂ ಸುಧಾರಣೆ ಕಾಯಿದೆ ಜಾರಿ ಮಾಡಲಾಯಿತು. ಆದರೆ, ಈ ಕಾನೂನು ಉಲ್ಲಂಘಿಸಿ ರೈತರಿಂದ ಭೂಮಿ ಖರೀದಿಸಿರುವ 13,814 ಪ್ರಕರಣಗಳನ್ನು ರದ್ದುಗೊಳಿಸಲಾಗಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ರೈತರನ್ನು ಬಲಿ ಕೊಡಲಾಗುತ್ತಿದೆ. ಇಂತಹ ಮಾರಕ ಕಾನೂನನ್ನು ಸುಗ್ರೀವಾಜ್ಞೆ ಮೂಲಕ ತರುವ ಹಿತಾಸಕ್ತಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಏನಿದೆ ಎಂದು ಪ್ರಶ್ನಿಸಿದರು.

ಎಪಿಎಂಸಿ ಕಾಯಿದೆಯಿಂದ ರೈತರಿಗೆ ಭಾರಿ ಹೊಡೆತ ಬೀಳಲಿದೆ. ಎಪಿಎಂಸಿ ಕಾಯಿದೆ ತಿದ್ದುಪಡಿಯಿಂದ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ದೊರೆಯದಂತೆ ಮಾಡಬೇಕು ಎಂಬುದು ನರೇಂದ್ರ ಮೋದಿ ಉದ್ದೇಶ ಎಂದು ಟೀಕಿಸಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ತರುವ ಚರ್ಚೆ ಆರಂಭ: 

ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಸರ್ಕಾರದ ಆಡಳಿತ ನೋಡಿ ಕಾಂಗ್ರೆಸ್‌ ಪಕ್ಷವನ್ನು ಏಕೆ ಸೋಲಿಸಿದೆವು ಎಂದು ಜನರು ಪರಿತಪಿಸುತ್ತಿದ್ದಾರೆ. ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಚರ್ಚೆ ಆರಂಭವಾಗಿದೆ. ಆಪರೇಷನ್‌ ಕಮಲ ಮಾಡಿ ಒಬ್ಬೊಬ್ಬ ಶಾಸಕರಿಗೆ 20-25 ಕೋಟಿ ರು. ಖರ್ಚು ಮಾಡಿ ಖರೀದಿ ಮಾಡಿದರು. ಇಷ್ಟೆಲ್ಲಾ ಮಾಡಿ ಅಧಿಕಾರಕ್ಕೆ ಬಂದು ಜನರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ದೂರಿದರು.

ಕೇಂದ್ರದಿಂದ ಅನುದಾನ ತರಲು ಇವರಿಗೆ ತಾಕತ್‌ ಇಲ್ಲ. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ಅನುದಾನವನ್ನೂ ತರಲು ಆಗುತ್ತಿಲ್ಲ. ಹೀಗಿದ್ದ ಮೇಲೆ ಅಧಿಕಾರದಲ್ಲಿ ಏಕಿರಬೇಕು. ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಹರಿಹಾಯ್ದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರು ಹಾಜರಿದ್ದರು.