ಬೆಂಗಳೂರು (ಡಿ.02):  ಬಾಗಲಕೋಟೆಯ ಮಹಾಲಿಂಗಪುರ ಪುರಸಭೆ ಸದಸ್ಯೆ ಚಾಂದಿನಿ ನಾಯಕ್‌ ಅವರ ಗರ್ಭಪಾತಕ್ಕೆ ಕಾರಣವಾಗಿರುವ ಬಿಜೆಪಿ ಶಾಸಕ ಸಿದ್ದು ಸವದಿ ಮತ್ತು ಅವರ ಬೆಂಬಲಿಗರ ವಿರುದ್ಧ ಕಾನೂನು ಕ್ರಮ ಜರುಗಿಸಿ ಸಂತ್ರಸ್ತೆಗೆ ಐದು ಕೋಟಿ ರು. ಪರಿಹಾರ ಕೊಡಿಸುವಂತೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ ಆಗ್ರಹಿಸಿದೆ.

ಈ ಸಂಬಂಧ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಡಾ. ಬಿ. ಪುಷ್ಪಾ ಅಮರನಾಥ್‌ ನೇತೃತ್ವದ ನಿಯೋಗ   ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ಮತ್ತು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರಿಗೆ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ.

ಮಹಿಳಾ ದೌರ್ಜನ್ಯ : ಬಿಜೆಪಿ ಶಾಸಕರೋರ್ವರ ರಾಜೀನಾಮೆಗೆ ಒತ್ತಡ .

ದೂರು ಸಲ್ಲಿಕೆ ನಂತರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಷ್ಪಾ ಅಮರನಾಥ್‌, ‘ಈ ಭ್ರೂಣ ಹತ್ಯೆಗೆ ಕಾರಣರಾದ ಶಾಸಕರು ಮತ್ತು ಅವರ ಬೆಂಬಲಿಗರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಆಕೆಗೆ ಆಗಿರುವ ಸಮಸ್ಯೆ ಹಾಗೂ ನಷ್ಟಕ್ಕೆ ಶಾಸಕರಿಂದ 5 ಕೋಟಿ ರು. ಪರಿಹಾರ ಕೊಡಿಸುವಂತೆ ಮಹಿಳಾ ಆಯೋಗಕ್ಕೆ ಹಾಗೂ ಡಿಜಿಪಿಗೆ ದೂರು ನೀಡಲಾಗಿದೆ, ಈ ಮೂಲಕ ಸರ್ಕಾರಕ್ಕೂ ಆಗ್ರಹಿಸಲಾಗುತ್ತಿದೆ’ ಎಂದು ತಿಳಿಸಿದರು.

ಶಾಸಕಿಯರಾದ ರೂಪಾ ಶಶಿಧರ್‌, ಸೌಮ್ಯಾರೆಡ್ಡಿ, ಬಾಗಲಕೋಟೆ ಜಿಲ್ಲಾ ಪಂಚಾಯತ್‌ ಸದಸ್ಯೆ ವೀಣಾ ಕಾಶಪ್ಪನವರ್‌ ಮತ್ತಿತರರಿದ್ದರು.