ಬೆಂಗಳೂರು[ಜ.31]: ಮದ್ಯ​ಪಾನ ನಿಷೇಧ ಹೋರಾಟ ಸಮಿತಿ ನೇತೃ​ತ್ವ​ದಲ್ಲಿ ನಾಡಿನ ಎಲ್ಲೆ​ಡೆ​ಯಿಂದ ಆಗ​ಮಿಸಿ ಸಂಪೂರ್ಣ ಮದ್ಯ ನಿಷೇ​ಧಕ್ಕೆ ರಾಜ​ಧಾ​ನಿ​ಯಲ್ಲಿ ಪ್ರಬಲ ಪ್ರತಿ​ಭ​ಟನೆ ನಡೆ​ಸಿದ ಮಹಿ​ಳೆ​ಯರ ಪ್ರತಿ​ನಿ​ಧಿ​ಗಳು ಹಾಗೂ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ನಡು​ವಿನ ಸಂಧಾನ ಮುರಿದು ಬಿದ್ದಿದ್ದು, ಪ್ರತಿ​ಭ​ಟನೆ ಮುಂದು​ವ​ರೆ​ಸುವ ನಿರ್ಧಾರ ಕೈಗೊಂಡಿದ್ದ ಹೋರಾ​ಟ​ಗಾ​ರ​ರನ್ನು ಪೊಲೀ​ಸರು ಒತ್ತಾ​ಯ​ಪೂ​ರ್ವ​ಕ​ವಾಗಿ ಚದು​ರಿ​ಸಿದ ಘಟನೆ ನಡೆ​ದಿದೆ.

ಬುಧ​ವಾರ ಇಡೀ ದಿನ ನಡೆದ ಪ್ರತಿ​ಭ​ಟನೆ ಹಿನ್ನೆ​ಲೆ​ಯಲ್ಲಿ ಮಹಿಳಾ ಹೋರಾ​ಟ​ಗಾ​ರರ ಪ್ರತಿನಿಧಿಗಳಾದ ರಂಗ​ಕರ್ಮಿ ಪ್ರಸನ್ನ ಹಾಗೂ ಸ್ವರ್ಣ ಭಟ್‌ ಅವ​ರೊಂದಿಗೆ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ನಡೆ​ಸಿದ ಮಾತು​ಕತೆ ವಿಫ​ಲ​ವಾ​ಯಿತು. ಏಕಾ​ಏಕಿ ಮದ್ಯ ನಿಷೇಧ ಜಾರಿಗೆ ತರು​ವುದು ಸಾಧ್ಯ​ವಿಲ್ಲ. ಈ ಬಗ್ಗೆ ನಿಮ್ಮನ್ನು ಒಳ​ಗೊಂಡು ಪ್ರತ್ಯೇಕ ಸಭೆ ನಡೆ​ಸು​ತ್ತೇನೆ. ಈಗ ಪ್ರತಿ​ಭ​ಟನೆ ಕೈ ಬಿಡಿ ಎಂದು ಮುಖ್ಯ​ಮಂತ್ರಿ ಮಾಡಿದ ಮನ​ವಿಗೆ ಪ್ರತಿ​ಭ​ಟ​ನಾ​ಕಾ​ರರು ಜಗ್ಗ​ಲಿಲ್ಲ.

ತಾವು ಪ್ರತಿ​ಭ​ಟನೆ ನಡೆ​ಸು​ತ್ತಿದ್ದ ರಸ್ತೆ​ಗ​ಳಲ್ಲೇ ಹೋರಾಟ ಮುಂದು​ವ​ರೆ​ಸು​ವು​ದಾಗಿ ಘೋಷಿ​ಸಿದರು. ಪೊಲೀಸರು ಪ್ರತಿಭಟನೆಯನ್ನು ಫ್ರೀಡಂ ಪಾರ್ಕ್ ಆವರಣಕ್ಕೆ ಸ್ಥಳಾಂತರಿಸುವಂತೆ ಮನವಿ ಮಾಡಿದರಾದರೂ, ಬೇಕಿದ್ದರೆ ನಮ್ಮನ್ನು ಬಂಧಿಸಿ ಕರೆದೊಯ್ಯಿರಿ. ಆದರೆ, ಹೋರಾಟ ಸ್ಥಳಾಂತರಿಸುವುದಿಲ್ಲ ಎಂದು ಮಹಿಳೆಯರು ಪಟ್ಟು ಹಿಡಿದು ಕುಳಿತರು. ಈ ವೇಳೆ ಹೋರಾಟಗಾರರ ಪ್ರತಿನಿಧಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಹೋರಾಟಗಾರರು ತಮ್ಮ ಮನವಿಗೆ ಒಪ್ಪದ ಹಿನ್ನೆಲೆಯಲ್ಲಿ ಪೊಲೀಸರು ಅನಿವಾರ್ಯವಾಗಿ ಒಂದಷ್ಟುಜನರನ್ನು ವಶಕ್ಕೆ ಪಡೆದು ಪ್ರತಿಭಟನಾಕಾರರು ಸ್ಥಳದಿಂದ ಚದುರುವಂತೆ ಮಾಡಿದರು. ಕೆಲವರನ್ನು ವಿವಿಧ ಪೊಲೀಸ್‌ ಠಾಣೆಗಳಿಗೆ ಕರೆದೊಯ್ದು ಊರುಗಳಿಗೆ ಹೋಗಲು ವ್ಯವಸ್ಥೆ ಮಾಡಲಾಯಿತು. ಪ್ರತಿಭಟನಾ ಸ್ಥಳದಲ್ಲಿದ್ದ ಮಿಕ್ಕವರು ಮೆಜೆಸ್ಟಿಕ್‌ ಕಡೆ ಧಾವಿಸಿ ಬಸ್ಸು, ರೈಲುಗಳ ಮೂಲಕ ತಮ್ಮ ಊರ ಹಾದಿ ಹಿಡಿದರು.

ಮಾತುಕತೆ ವಿಫಲ:

ಸತತ 18 ದಿನಗಳ ಕಾಲ ಪಾದಯಾತ್ರೆಯಲ್ಲಿ ರಾಜಧಾನಿಗೆ ಸಾಗಿ ಬಂದಿದ್ದ ರಾಯಚೂರು, ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ನಾಡಿನ ನಾನಾ ಜಿಲ್ಲೆಗಳ ಮೂರು ಸಾವಿರಕ್ಕೂ ಹೆಚ್ಚು ಮಹಿಳಾ ಹೋರಾಟಗಾರರು ಮಂಗಳವಾರ ರಾತ್ರಿ ಇಡೀ ಮಲ್ಲೇಶ್ವರದ ಆಟದ ಮೈದಾದಲ್ಲೇ ರಾತ್ರಿ ದೂಡಿದ್ದರು. ಬುಧವಾರ ಬೆಳಗ್ಗೆ ಅಲ್ಲಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಾಗ ಪೊಲೀಸರು ಫ್ರೀಡಂ ಪಾರ್ಕ್ ಬಳಿ ಅವರನ್ನು ತಡೆದರು. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಮಧ್ಯಾಹ್ನದಿಂದಲೂ ಶೇಷಾದ್ರಿ ರಸ್ತೆಯಲ್ಲೇ ಕೂತು ಹೋರಾಟ ನಡೆಸಿದರು. ಈ ಹೋರಾಟ ಗಂಭೀರ ಸ್ವರೂಪ ಪಡೆದು ಇಡೀ ನಗ​ರದ ಸಂಚಾರ ವ್ಯವಸ್ಥೆ ಅಸ್ತ​ವ್ಯ​ಸ್ತ​ವಾದ ಹಿನ್ನೆ​ಲೆ​ಯಲ್ಲಿ ಸರ್ಕಾರ ಹೋರಾಟಗಾರ​ರೊಂದಿಗೆ ಮಾತುಕತೆ ನಡೆಸಿತಾದರೂ ಸಂಧಾನ ವಿಫಲವಾಯಿತು.

ರಂಗಕರ್ಮಿ ಪ್ರಸನ್ನ ಸೇರಿದಂತೆ ಹೋರಾಟಗಾರರ ಎಂಟು ಜನ ಪ್ರತಿನಿಧಿಗಳೊಂದಿಗೆ ಸ್ವತಃ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ವಿಧಾನಸೌಧದಲ್ಲಿ ಮಾತುಕತೆ ನಡೆಸಿದರು. ಆದರೆ, ಹೋರಾಟಗಾರರನ್ನು ಮನವೊಲಿಸುವಲ್ಲಿ ವಿಫಲವಾದರು. ‘ಏಕಾಏಕಿ ಮದ್ಯ ನಿಷೇಧ ಮಾಡಿ ಎಂದರೆ ಹೇಗೆ ಸಾಧ್ಯ, ಮನವಿ ಕೊಡಿ ಸಚಿವ ಸಂಪುಟದಲ್ಲಿ ಚರ್ಚಿಸುತ್ತೇನೆ. ನಂತರ ನಿಮ್ಮೊಂದಿಗೆ ಮತ್ತೊಂದು ಸಭೆ ಕರೆಯುತ್ತೇನೆ’ ಎಂದು ಹೇಳಿದರು.

ಇದಕ್ಕೆ ಒಪ್ಪದ ಪ್ರತಿನಿಧಿಗಳು ಏಕಾಏಕಿ ಮದ್ಯ ನಿಷೇಧ ಮಾಡಲಾಗುವುದಿಲ್ಲ ಎನ್ನುವುದಾದರೆ ಕೊನೆಯ ಪಕ್ಷ ಕಾಲಾವಕಾಶವನ್ನಾದರೂ ತೆಗೆದುಕೊಂಡು ಮುಂದಿನ ಯಾವ ತಿಂಗಳಿಂದ ಮದ್ಯ ನಿಷೇಧಿಸುತ್ತೀರಿ ಎಂಬ ಬಗ್ಗೆ ಲಿಖಿತ ಭರವಸೆ ನೀಡುವಂತೆ ಹೋರಾಟಗಾರರ ಪ್ರತಿನಿಧಿಗಳು ಪಟ್ಟು ಹಿಡಿದಿದರು. ಇದಕ್ಕೆ ಮುಖ್ಯಮಂತ್ರಿ ಅವರು ಒಪ್ಪದಿದ್ದರಿಂದ ಮಾತುಕತೆ ವಿಫಲವಾಯಿತು.

ಪ್ರತಿನಿಧಿಗಳನ್ನು ವಶಕ್ಕೆ ಪಡೆದ ಪೊಲೀಸರು:

ಮಾತುಕತೆ ವಿಫಲವಾಗಿದ್ದರಿಂದ ಮದ್ಯ ನಿಷೇಧಕ್ಕೆ ಆಗ್ರಹಿಸಿ ಪ್ರತಿನಿಧಿಗಳು ವಿಧಾನಸೌಧದಲ್ಲೇ ಪ್ರತಿಟನೆಗೆ ಮುಂದಾದಾಗ ಅವರನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ಜೀಪಿನಲ್ಲಿ ಪ್ರತಿಭಟನಾ ಸ್ಥಳಕ್ಕೆ ಕರೆತಂದು ಬಿಟ್ಟರು ಎನ್ನಲಾಗಿದೆ.

ಬಳಿಕ ಪ್ರತಿಭಟನಾ ಸ್ಥಳಕ್ಕೆ ಬಂದ ಪ್ರತಿನಿಧಿಗಳು ಮದ್ಯ ನಿಷೇಧಕ್ಕೆ ಮುಖ್ಯಮಂತ್ರಿ ಅವರು ಒಪ್ಪದ ವಿಷಯವನ್ನು ಪ್ರತಿಭಟನಾಕಾರರಿಗೆ ತಿಳಿಸಿದಾಗ, ಸ್ಥಳದಿಂದ ಕದಲದೆ ಹೋರಾಟ ಮುಂದುವರೆಸಲು ನಿರ್ಧರಿಸಿದಾಗ ಪೊಲೀಸರು ಹೋರಾಟವನ್ನು ಫ್ರೀಡಂ ಪಾರ್ಕ್ಗೆ ಸ್ಥಳಾಂತರಿಸಲು ನಡೆಸಿದ ಪ್ರಯತ್ನ ವಿಫಲವಾದಾಗ, ಪ್ರತಿಭಟನಾಕಾರರನ್ನು ಬಲವಂತವಾಗಿ ವಶಕ್ಕೆ ಪಡೆದರು.

ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇದ ಮಾಡುವ ಬಗ್ಗೆ ಪರಿಶೀಲಿಸಲು ಸಮಯಾವಕಾಶದ ಅಗತ್ಯವಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಾರಾಯಿ ಮತ್ತು ಲಾಟರಿ ನಿಷೇಧಿಸಿದ್ದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವುದರಿಂದ ಮಿತ್ರ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ ಯಾವುದೇ ನಿರ್ಧಾರ ಸಾಧ್ಯವಿಲ್ಲ. ಜೊತೆಗೆ ಜಿಎಸ್‌ಟಿ ಜಾರಿ ನಂತರ ರಾಜ್ಯ ಸರ್ಕಾರಕ್ಕೆ ಸಂಪನ್ಮೂಲ ಕ್ರೋಡೀಕರಣ ಅವಕಾಶಗಳು ಸೀಮಿತವಾಗಿವೆ. ಈ ನಿಟ್ಟಿನಲ್ಲಿ ಈ ವಿಷಯದ ಬಗ್ಗೆ ಉನ್ನತ ಮಟ್ಟದ ಚರ್ಚೆ ನಡೆಸುವುದು ಅಗತ್ಯ. ಹೀಗಾಗಿ ಏಕಾಏಕಿ ಘೋಷಣೆ ಸಾಧ್ಯವಿಲ್ಲ.

- ಮುಖ್ಯಮಂತ್ರಿ ಕುಮಾರಸ್ವಾಮಿ