ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರದ ಮೂಲಕ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ ಎಚ್‌.ಎಂ.ವೆಂಕಟೇಶ್‌ 

ಬೆಂಗಳೂರು(ಮೇ.21): ರಾಜ್ಯದಲ್ಲಿ ಸರ್ಕಾರ ರಚನೆಯಾದ ಬೆನ್ನಲ್ಲೇ ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ವಿರುದ್ಧ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ದೂರು ಸಲ್ಲಿಕೆಯಾಗಿದ್ದು, ಸ್ವಜನಪಕ್ಷಪಾತ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಪದಚ್ಯುತಿಗೊಳಿಸಬೇಕು ಅಥವಾ ರಾಜೀನಾಮೆ ನೀಡುವಂತೆ ಸೂಚನೆ ನೀಡಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತ ಎಚ್‌.ಎಂ.ವೆಂಕಟೇಶ್‌ ದೂರು ನೀಡಿದ್ದಾರೆ. ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗವನ್ನು ಮಾಡುವ ಜನಪ್ರತಿನಿಧಿಗಳು, ಅಧಿಕಾರಿಗಳು, ನೌಕರರ ಮೇಲೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿ.ಎಸ್‌.ಪಾಟೀಲ್‌ ಮತ್ತವರ ಕುಟುಂಬದ ಮೇಲೆಯೇ ಗಂಭೀರವಾದ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಅವರಿಗೆ ಹೊಣೆಗಾರಿಕೆ ನೀಡಿರುವುದು ಸಮಂಜಸವಲ್ಲ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಬರೀ 30 ಸಾವಿರ ಸಂಬಳ ಪಡೆಯುವ ಸಹಾಯಕ ಇಂಜಿನಿಯರ್‌ ಮನೆಯಲ್ಲಿ 30 ಲಕ್ಷದ ಟಿವಿ!

ಚಂದ್ರಪ್ರಭಾ ಎಂಬುವವರು ಪಾಟೀಲ್‌ ಪತ್ನಿ ಮತ್ತು ಪುತ್ರನ ವಿರುದ್ಧ ದೂರು ನೀಡಿದ್ದಾರೆ. ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಚನೆಯಾಗಿರುವ ನೂತನ ಕಾಂಗ್ರೆಸ್‌ ಸರ್ಕಾರವು ಸೂಕ್ತ ಕ್ರಮ ಜರುಗಿಸಬೇಕು. ತಕ್ಷಣ ಕಾರ್ಯಪ್ರವೃತ್ತರಾಗಿ ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ಅವರಿಂದ ರಾಜೀನಾಮೆ ಪಡೆದುಕೊಂಡು ಪ್ರಾಮಾಣಿಕರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.