ಶಕ್ತಿ ಯೋಜನೆಯಿಂದ ನಷ್ಟ: ಖಾಸಗಿ ಬಸ್, ಕ್ಯಾಬ್, ಆಟೋಗೆ ಪರಿಹಾರ ಪ್ಯಾಕೇಜ್?
ಕಳೆದ ಮೂರ್ನಾಲ್ಕು ವರ್ಷಗಳಿಂದ ಕೊರೋನಾ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಖಾಸಗಿ ಸಾರಿಗೆ ಕ್ಷೇತ್ರ ನಷ್ಟದಲ್ಲಿದೆ. ಅದರ ಜತೆಗೆ ಇದೀಗ ‘ಶಕ್ತಿ’ ಯೋಜನೆ ಜಾರಿ ನಂತರ ಖಾಸಗಿ ಬಸ್, ಕ್ಯಾಬ್ ಮತ್ತು ಆಟೋಗಳಿಗೆ ಪ್ರಯಾಣಿಕರ ಕೊರತೆ ಉಂಟಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಬೆಂಗಳೂರು(ಆ.13): ‘ಶಕ್ತಿ’ ಯೋಜನೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ರಾಜ್ಯದ ಖಾಸಗಿ ಸಾರಿಗೆ ಉದ್ಯಮ ಸಂಕಷ್ಟದಲ್ಲಿದ್ದು, ಅದಕ್ಕೆ ರಾಜ್ಯ ಸರ್ಕಾರದಿಂದ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳು ಹಾಗೂ ಸಾರಿಗೆ ಉದ್ಯಮಕ್ಕಾಗಿರುವ ನಷ್ಟದ ಬಗ್ಗೆ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಿಗೆ ಇಲಾಖೆಗೆ ಸೂಚಿಸಿದ್ದಾರೆ. ವರದಿ ಆಧರಿಸಿ ಅವರು ಪರಿಹಾರ ಘೋಷಣೆ ಮಾಡುವ ಸಾಧ್ಯತೆ ಇದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಕೊರೋನಾ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಖಾಸಗಿ ಸಾರಿಗೆ ಕ್ಷೇತ್ರ ನಷ್ಟದಲ್ಲಿದೆ. ಅದರ ಜತೆಗೆ ಇದೀಗ ‘ಶಕ್ತಿ’ ಯೋಜನೆ ಜಾರಿ ನಂತರ ಖಾಸಗಿ ಬಸ್, ಕ್ಯಾಬ್ ಮತ್ತು ಆಟೋಗಳಿಗೆ ಪ್ರಯಾಣಿಕರ ಕೊರತೆ ಉಂಟಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹೀಗಾಗಿ ರಾಜ್ಯ ಸರ್ಕಾರ ತಮಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಖಾಸಗಿ ಬಸ್, ಕ್ಯಾಬ್ ಮತ್ತು ಆಟೋ ಸಂಘಟನೆಗಳು ಜುಲೈ 26ರಂದು ಸಾರಿಗೆ ಬಂದ್ ಮಾಡುವ ಕುರಿತು ಘೋಷಿಸಿದ್ದವು.
ಯೋಜನೆ ಜಾರಿಯಾಗಿ 2 ತಿಂಗಳಾದ್ರೂ ಕುಗ್ಗದ ಮಹಿಳಾ ‘ಶಕ್ತಿ’: ಪ್ರಯಾಣವಿನ್ನೂ ದಣಿದಿಲ್ಲ..!
ಆ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಂದ್‌ಗೆ ಕರೆ ನೀಡಿದ್ದ ಸಂಘಟನೆಗಳ ಮುಖಂಡರೊಂದಿಗೆ ಎರಡು ಬಾರಿ ಮಾತುಕತೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಆ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಚರ್ಚಿಸಿದ್ದರು. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ರಾಮಲಿಂಗಾರೆಡ್ಡಿ ಅವರು ಸಾರಿಗೆ ಇಲಾಖೆಗೆ ಪರಿಹಾರ ಕ್ರಮಗಳ ಕುರಿತು ವರದಿ ನೀಡುವಂತೆ ತಿಳಿಸಿದ್ದಾರೆ. ಅದರಲ್ಲೂ ಸಾರಿಗೆ ಕ್ಷೇತ್ರಕ್ಕೆ ಆಗಿರುವ ನಷ್ಟದ ವರದಿ ನೀಡುವಂತೆಯೂ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಮಸ್ಯೆ ಏನು?
- ಕೊರೋನಾ, ಮತ್ತಿತರ ಕಾರಣದಿಂದ 3-4 ವರ್ಷದಿಂದ ಸಾರಿಗೆ ಕ್ಷೇತ್ರಕ್ಕೆ ಸಂಕಷ್ಟ
- ಸರ್ಕಾರದ ‘ಶಕ್ತಿ’ ಉಚಿತ ಬಸ್ ಪ್ರಯಾಣ ಯೋಜನೆಯಿಂದ ಸಮಸ್ಯೆ ಹೆಚ್ಚಳ
- ಖಾಸಗಿ ಬಸ್, ಕ್ಯಾಬ್, ಆಟೋಗಳಿಗೆ ಪ್ರಯಾಣಿಕರ ತೀವ್ರ ಕೊರತೆ, ಭಾರಿ ನಷ್ಟ
- ಹೀಗಾಗಿ ತಮಗೆ ಪರಿಹಾರ ಕೊಡಬೇಕು ಎಂದು ಸಂಘಟನೆಗಳಿಂದ ಹೋರಾಟ
ಶಕ್ತಿ ಯೋಜನೆ ಎಫೆಕ್ಟ್: ಸಾರಿಗೆ ಸಿಬ್ಬಂದಿಗಿಲ್ಲ ವೇತನ ಗ್ಯಾರಂಟಿ, ಪಗಾರ ಸಿಗದೆ ಪರದಾಟ..!
ಸಾರಿಗೆ ಬಂದ್‌ಗೆ 19ಕ್ಕೆ ಸಭೆ
ಬೆಂಗಳೂರು: ಸಾರಿಗೆ ಸಚಿವರು ಭರವಸೆ ನೀಡಿದಂತೆ ಯಾವುದೇ ಪರಿಹಾರ ಕ್ರಮಗಳನ್ನು ಘೋಷಿಸದ ಕಾರಣ, ಆಗಸ್ಟ್ 10ರಂದು ಮತ್ತೆ ಸಾರಿಗೆ ಬಂದ್ ಮಾಡುವುದಾಗಿ ಸಂಘಟನೆಗಳು ತಿಳಿಸಿದ್ದವು. ಆದರೆ, ಸಾರಿಗೆ ಸಚಿವರು ಸಂಘಟನೆಗಳ ಮುಖಂಡರೊಂದಿಗೆ ಅನೌಪಚಾರಿಕವಾಗಿ ಮಾತನಾಡಿ, ‘ಸಾರಿಗೆ ಉದ್ಯಮದ ಸಮಸ್ಯೆಯನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ. ಅವರು ಪರಿಹಾರ ಕ್ರಮಗಳ ಕುರಿತು ವರದಿ ಪಡೆಯುತ್ತಿದ್ದಾರೆ’ ಎಂದು ತಿಳಿಸಿದ್ದಾರೆ. ಹೀಗಾಗಿ ಆಗಸ್ಟ್ 18 ಅನ್ನು ಅಂತಿಮ ಗಡುವಾಗಿಸಿಕೊಂಡಿರುವ ಸಾರಿಗೆ ಸಂಘಟನೆಗಳು, ಆಗಸ್ಟ್ 19ಕ್ಕೆ ಸಭೆ ನಡೆಸಿ ಬಂದ್ ಕುರಿತು ನಿರ್ಧಾರ ತೆಗೆದುಕೊಳ್ಳಲಿವೆ.
ಆ.18ರವರೆಗೆ ಕಾಯ್ತೀವಿ
ಶಕ್ತಿ ಯೋಜನೆ ಸೇರಿದಂತೆ ಇನ್ನಿತರ ಕಾರಣಗಳಿಂದ ಖಾಸಗಿ ಖಾಸಗಿ ಬಸ್, ಕ್ಯಾಬ್ ಮತ್ತು ಆಟೋ ಚಾಲಕ ಮತ್ತು ನಿರ್ವಾಹಕರಿಗಾಗಿರುವ ನಷ್ಟದ ಕುರಿತಂತೆ ಸಾರಿಗೆ ಬಂದ್ ಮಾಡಲು ನಿರ್ಧರಿಸಲಾಗಿದೆ. ಆದರೆ, ಸಾರಿಗೆ ಸಚಿವರು ಆಗಸ್ಟ್ 18ರವರೆಗೆ ಸಮಯ ನೀಡುವಂತೆ ಕೋರಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಗಳು ಕೂಡ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಪರಿಹಾರ ಕ್ರಮಗಳ ಕುರಿತು ವರದಿ ನೀಡುವಂತೆ ತಿಳಿಸಿದ್ದಾರೆ. ಹೀಗಾಗಿ ಆಗಸ್ಟ್ 18ರ ನಂತರ ಸಾರಿಗೆ ಬಂದ್‌ನ ಕುರಿತು ನಿರ್ಧರಿಸಲಾಗುವುದು ಎಂದು ಬೆಂಗಳೂರು ಆದರ್ಶ ಆಟೋ ಸಂಘಟನೆ ಮಂಜುನಾಥ್ ತಿಳಿಸಿದ್ದಾರೆ.