ಜೈಲಲ್ಲಿ ಕೈದಿ ಸಾವಿಗೀಡಾದರೆ ಕುಟುಂಬಕ್ಕೆ ಪರಿಹಾರ: ಸರ್ಕಾರ
ಜೈಲುಗಳಲ್ಲಿ ಅಸಹಜವಾಗಿ ಸಾವನ್ನಪ್ಪಿದ ಕೈದಿಗಳ ಸಂಬಂಧಿಕರು ಅಥವಾ ಉತ್ತರಾಧಿಕಾರಿಗಳಿಗೆ ಪರಿಹಾರ ಪಾವತಿಸಲು ನೀತಿ ರೂಪಿಸಲಾಗಿದೆ. ಕೈದಿಗಳ ನಡುವೆ ಹೊಡೆದಾಟದಲ್ಲಿ ಕೈದಿ ಸಾವನ್ನಪ್ಪಿದರೆ ಆತನ ಕುಟುಂಬದ ಅಥವಾ ಅವಲಂಬಿತರಿಗೆ 7.50 ಲಕ್ಷ ರು. ಹಾಗೂ ಆತ್ಮಹತ್ಯೆ ಸೇರಿದಂತೆ ಅಸಹಜ ಸಾವು ಸಂಭವಿಸಿದರೆ ಆ ಕೈದಿಯ ಕುಟುಂಬಸ್ಥರಿಗೆ 5 ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ತಿಳಿಸಿದ ಸರ್ಕಾರದ ಪರ ವಕೀಲರು.

ಬೆಂಗಳೂರು(ಅ.06): ಜೈಲುಗಳಲ್ಲಿ ಅಸಹಜವಾಗಿ ಸಾವನ್ನಪ್ಪಿದ ಕೈದಿಗಳ ಸಂಬಂಧಿಕರು ಅಥವಾ ಉತ್ತರಾಧಿಕಾರಿಗಳಿಗೆ ಪರಿಹಾರ ಪಾವತಿಸಲು ನೀತಿಯೊಂದನ್ನು ರೂಪಿಸಲಾಗಿದ್ದು, ಹೊಡೆದಾಟದಿಂದ ಕೈದಿ ಸಾವಿಗೀಡಾದರೆ ಆತನ ಉತ್ತರಾಧಿಕಾರಿಗೆ 7.50 ಲಕ್ಷ ರು., ಆತ್ಮಹತ್ಯೆ ಸೇರಿದಂತೆ ಅಸಹಜವಾಗಿ ಮೃತಪಟ್ಟರೆ ಐದು ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಗುರುವಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಸುಪ್ರೀಂ ಕೋರ್ಟ್ 2017ರಲ್ಲಿ ಹೊರಡಿಸಿದ ತೀರ್ಪಿನ ಹಿನ್ನೆಲೆಯಲ್ಲಿ ಜೈಲಿನಲ್ಲಿ ಕೈದಿಗಳ ಅಸಹಜ ಸಾವಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ತಾಳಿ ಕಟ್ಟಿದೋರು ಸಪ್ತಪದಿ ತುಳಿಲೇಬೇಕು: ಇಲ್ಲಾಂದ್ರೆ ವಿವಾಹ ಮಾನ್ಯವಲ್ಲವೆಂದ ಹೈಕೋರ್ಟ್
ಸರ್ಕಾರದ ಪರ ವಕೀಲರು, ಜೈಲುಗಳಲ್ಲಿ ಅಸಹಜವಾಗಿ ಸಾವನ್ನಪ್ಪಿದ ಕೈದಿಗಳ ಸಂಬಂಧಿಕರು ಅಥವಾ ಉತ್ತರಾಧಿಕಾರಿಗಳಿಗೆ ಪರಿಹಾರ ಪಾವತಿಸಲು ನೀತಿ ರೂಪಿಸಲಾಗಿದೆ. ಕೈದಿಗಳ ನಡುವೆ ಹೊಡೆದಾಟದಲ್ಲಿ ಕೈದಿ ಸಾವನ್ನಪ್ಪಿದರೆ ಆತನ ಕುಟುಂಬದ ಅಥವಾ ಅವಲಂಬಿತರಿಗೆ 7.50 ಲಕ್ಷ ರು. ಹಾಗೂ ಆತ್ಮಹತ್ಯೆ ಸೇರಿದಂತೆ ಅಸಹಜ ಸಾವು ಸಂಭವಿಸಿದರೆ ಆ ಕೈದಿಯ ಕುಟುಂಬಸ್ಥರಿಗೆ 5 ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಅದನ್ನು ಪರಿಗಣಿಸಿದ ಹೈಕೋರ್ಟ್, ರಾಜ್ಯ ಸರ್ಕಾರ ನೀತಿ ರೂಪಿಸಿರುವ ಕಾರಣ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿರುವುದರ ಉದ್ದೇಶವು ಈಡೇರಿದೆ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿತು.