ಕೋವ್ಯಾಕ್ಸಿನ್ ಟ್ರಯಲ್‌ಗೆ ಸಿಎಂ ಯಡಿಯೂರಪ್ಪ ಚಾಲನೆ
ಬೆಂಗಳೂರಿನ ವೈದೇಹಿ ಆಸ್ಪತ್ರೆಯಲ್ಲಿ 3ನೇ ಹಂತದ ಕ್ಲಿನಿಕಲ್ ಪ್ರಯೋಗ| ಮೊದಲ ದಿನವೇ 50ಕ್ಕೂ ಅಧಿಕ ಮಂದಿಗೆ ಲಸಿಕೆ| ರಾಜ್ಯದ ಯಾವುದೇ ಭಾಗದ ವ್ಯಕ್ತಿ ಪ್ರಯೋಗದಲ್ಲಿ ಪಾಲ್ಗೊಳ್ಳಬಹುದು| ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ಹೆಚ್ಚಿನ ಗಮನ ಇರಲಿದೆ|
ಬೆಂಗಳೂರು(ಡಿ.03): ಬೆಂಗಳೂರಿನ ವೈಟ್‌ಫೀಲ್ಡ್ ನಲ್ಲಿರುವ ‘ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಂಡ್ ರಿಸರ್ಚ್ ಸೆಂಟರ್’ನಲ್ಲಿ ಭಾರತ ಬಯೋಟೆಕ್ ನಿರ್ಮಿತ ಕೋವ್ಯಾಕ್ಸಿನ್ ಕೋವಿಡ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಬುಧವಾರದಿಂದ ಪ್ರಾರಂಭಗೊಂಡಿದೆ.
ಸ್ವದೇಶಿ ನಿರ್ಮಿತ ‘ಕೋವ್ಯಾಕ್ಸಿನ್’ ಲಸಿಕೆಯ ಮಾನವ ಪ್ರಯೋಗಕ್ಕೆ ಭಾರತೀಯ ಔಷಧ ಸಂಶೋಧನಾ ಪರಿಷತ್ ಅನುಮತಿ ನೀಡಿದ್ದು ದೇಶವ್ಯಾಪಿ 12 ರಾಜ್ಯಗಳಲ್ಲಿ 25 ಕಡೆ ಪ್ರಯೋಗ ನಡೆಯಲಿದೆ. ರಾಜ್ಯದಲ್ಲಿ ವೈದೇಹಿ ಆಸ್ಪತ್ರೆಯನ್ನು ಆಯ್ಕೆ ಮಾಡಲಾಗಿದೆ.
ಪ್ರಯೋಗಕ್ಕೆ ವರ್ಚುವಲ್ ಆಗಿ ಚಾಲನೆ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೋವ್ಯಾಕ್ಸಿನ್ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದ ಜವಾಬ್ದಾರಿಯನ್ನು ವೈದೇಹಿ ಸಂಸ್ಥೆ ತೆಗೆದುಕೊಂಡಿರುವುದು ತಮಗೆ ಸಂತೋಷ ತಂದಿದೆ. ಇದಕ್ಕಾಗಿ ವೈದೇಹಿ ಆಸ್ಪತ್ರೆಯ ನಿರ್ದೇಶಕರಾದ ಕೆ.ಎಂ.ಶ್ರೀನಿವಾಸಮೂರ್ತಿ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. ಈ ಪ್ರಯೋಗದಲ್ಲಿ ಭಾಗಿಯಾಗಲು ರಾಜ್ಯದ ಜನತೆ ಸ್ವಯಂಪ್ರೇರಣೆಯಿಂದ ಮುಂದೆ ಬರಬೇಕು. ಈ ಲಸಿಕೆ ಯಶಸ್ವಿಯಾಗಲಿದೆ ಎಂಬ ಸಂಪೂರ್ಣ ವಿಶ್ವಾಸ ತಮಗಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಡಿಸಂಬರ್, ಜನವರಿಯಲ್ಲಿ ಕೋವಿಡ್ 2 ನೇ ಅಲೆ ಪಕ್ಕಾ; ಮತ್ತೆ ಲಾಕ್‌ಡಾನ್ ಆಗುತ್ತಾ?
3 ಜಿಲ್ಲೆಗಳಲ್ಲಿ ಲಸಿಕೆ ಶೇಖರಣಾ ಕೇಂದ್ರ:
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ.ಸುಧಾಕರ್ ಮಾತನಾಡಿ, ಲಸಿಕೆ ವಿತರಣೆಗೆ ಸರ್ಕಾರ ಸಂಪೂರ್ಣವಾಗಿ ಸಜ್ಜಾಗಿದೆ. ಬೆಂಗಳೂರು, ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ಪ್ರಾದೇಶಿಕ ಲಸಿಕಾ ಶೇಖರಣಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ 10 ವ್ಯಾಕ್ಯೂಮ್ ಕೂಲರ್, 4 ವ್ಯಾಕ್ಯೂಮ್ ಫ್ರೀಜರ್ ಸೌಲಭ್ಯ ಈಗಾಗಲೇ ಇದೆ. ಕೇಂದ್ರ ಸರ್ಕಾರ ಹೊಸದಾಗಿ ಮೂರು ವ್ಯಾಕ್ಯೂಮ್ ಕೂಲರ್, ಎರಡು ವ್ಯಾಕೂಮ್ ಫ್ರೀಜರ್ ನೀಡಲಿದೆ. ರಾಜ್ಯದಲ್ಲಿ 29,451 ವ್ಯಾಕ್ಸಿನ್ ಕೇಂದ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ. 10,008 ಮಂದಿ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. 2,855 ಶೀತಲೀಕೃತ ದಾಸ್ತಾನು ಕೇಂದ್ರಗಳು ಲಭ್ಯ ಇವೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಆ ಬಳಿಕ ಕೊರೋನಾ ವಾರಿಯರ್ಸ್, 50 ವರ್ಷ ಮೇಲ್ಪಟ್ಟವರು ಮತ್ತು ಪೂರ್ವ ಕಾಯಿಲೆ ಇರುವವರಿಗೆ ಲಸಿಕೆ ನೀಡುತ್ತೇವೆ ಎಂದು ಹೇಳಿದರು.
ರಾಜ್ಯ ಸರ್ಕಾರ ಕೋವಿಡ್ ಚಿಕಿತ್ಸೆಗಾಗಿ 300 ಕೋಟಿ ರು. ವೆಚ್ಚ ಮಾಡಿದೆ. ದೇಶದಲ್ಲಿ ಐದು ಕೋವಿಡ್ ಲಸಿಕೆಗಳು ಪ್ರಯೋಗದ ವಿವಿಧ ಹಂತದಲ್ಲಿದೆ. ಕೆಲ ಅಡ್ಡ ಪರಿಣಾಮಗಳು ಕಂಡು ಬಂದಿರಬಹುದು. ಆದರೆ ತಜ್ಞರು ಅದನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಈ ಹಂತದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಸುಧಾಕರ್ ಹೇಳಿದರು.
‘ಸಾವಿರಕ್ಕಿಂತ ಹೆಚ್ಚು ಮಂದಿ ಮೇಲೆ ಪ್ರಯೋಗಕ್ಕೆ ಸಿದ್ಧ’
ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಆಸ್ಪತ್ರೆಯ ನಿರ್ದೇಶಕ ರಾಜೇಶ್ ನಾಯ್ಡು, ವೈದೇಹಿ ಅಸ್ಪತ್ರೆಯ ನುರಿತ ತಜ್ಞ ವೈದ್ಯರು ಮತ್ತು ಸಿಬ್ಬಂದಿ ಈ ಪ್ರಯೋಗವನ್ನು ನಡೆಸಿಕೊಡಲಿದ್ದಾರೆ. ನಮ್ಮ ಸಿಬ್ಬಂದಿ ಸಹ ಲಸಿಕೆ ಪಡೆಯಲಿದ್ದಾರೆ. ಫಲಿತಾಂಶ ಪಡೆಯುವ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು. ಸಾವಿರಕ್ಕಿಂತ ಹೆಚ್ಚು ಮಂದಿ ಮೇಲೆ ಪ್ರಯೋಗ ನಡೆಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಪ್ರಯೋಗಕ್ಕೆ ಒಡ್ಡಿಕೊಳ್ಳಲು ಸ್ವಯಂ ಪ್ರೇರಿತರಾಗಿ ಮುಂದೆ ಬರುವ 18 ವರ್ಷ ಮೇಲ್ಪಟ್ಟಆರೋಗ್ಯವಂತರಿಗೆ ಪ್ರಾಯೋಗಿಕವಾಗಿ ಲಸಿಕೆ ನೀಡಲಾಗುತ್ತದೆ. ಬುಧವಾರ 50ಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ. ಒಟ್ಟು ಒಂದು ಸಾವಿರ ಮಂದಿಗೆ ಲಸಿಕೆ ನೀಡಿ ಲಸಿಕೆಯ ಪರಿಣಾಮವನ್ನು ಅಧ್ಯಯನಕ್ಕೆ ಒಳಪಡಿಸಲು ಉದ್ದೇಶಿಸಲಾಗಿದೆ. ಲಸಿಕೆ ತೆಗೆದುಕೊಳ್ಳುವ ಮೊದಲು ವ್ಯಕ್ತಿಯ ಸಂಪೂರ್ಣ ಆರೋಗ್ಯ ತಪಾಸಣೆ ನಡೆಯಲಿದೆ. ಲಸಿಕೆ ಪಡೆದ ವ್ಯಕ್ತಿ ಎರಡು ಗಂಟೆ ಕಾಲ ಅಸ್ಪತ್ರೆಯಲ್ಲೇ ಇರಬೇಕು. ಆ ಬಳಿಕ 14 ದಿನಗಳ ಕಾಲ ಪ್ರತಿದಿನ ಆತನ ಆರೋಗ್ಯದ ಮೇಲೆ ವೈದೇಹಿ ಆಸ್ಪತ್ರೆಯ ವೈದ್ಯರು ಖುದ್ದು ಭೇಟಿ ನೀಡಿ ಅಥವಾ ದೂರವಾಣಿಯ ಮೂಲಕ ನಿಗಾ ಇಡುತ್ತಾರೆ. ಪ್ರಯೋಗಕ್ಕೆ ಒಮ್ಮೆ ಲಸಿಕೆಯ ಡೋಸ್ ಪಡೆದವರಿಗೆ 28 ದಿನದ ಬಳಿಕ ಮತ್ತೊಮ್ಮೆ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಆ ಬಳಿಕವೂ ವೈದ್ಯರ ನಿಗಾ ಇರಲಿದೆ. ಲಸಿಕೆ ಪಡೆದವರ ಮೇಲೆ 45 ದಿನಗಳವರೆಗೆ ನಿಗಾ ಇರಲಿದ್ದು ಆ ಬಳಿಕವೂ ಅಗತ್ಯವಾದರೆ ಕಾಳಜಿ ವಹಿಸಲಾಗುತ್ತದೆ. ಪ್ರತಿದಿನದ ವರದಿಯನ್ನು ಐಸಿಎಂಆರ್‌ಗೆ ಸಲ್ಲಿಸಲಾಗುತ್ತದೆ. ಬಳಿಕ ಫಲಿತಾಂಶವನ್ನು ಗೌಪ್ಯವಾಗಿ ಐಸಿಎಂಆರ್ ಗೆ ಸಲ್ಲಿಸಲಾಗುತ್ತದೆ. ಪ್ರಯೋಗದಲ್ಲಿ ಭಾಗಿಯಾಗುವ ಆಸಕ್ತಿ ಇರುವವರು ವೈದೇಹಿ ಆಸ್ಪತ್ರೆಯನ್ನು ಸಂಪರ್ಕಿಸಬಹುದಾಗಿದೆ. ಪ್ರಯೋಗದಲ್ಲಿ ಭಾಗಿಯಾಗುವವರಿಗೆ ವಿಮೆ ಮತ್ತಿತರ ಸೌಲಭ್ಯಗಳನ್ನು ನೀಡಲಾಗುವುದು ಎಂದರು.
ಪೂರ್ವ ಕಾಯಿಲೆ ಇರುವವರು, ಈ ಹಿಂದೆ ಕೋವಿಡ್ - 19 ಬಂದಿದ್ದು ಪ್ರತಿಕಾಯ ಇರುವವರು ಪ್ರಯೋಗದಲ್ಲಿ ಭಾಗವಹಿಸುವಂತಿಲ್ಲ. ರಾಜ್ಯದ ಯಾವುದೇ ಭಾಗದ ವ್ಯಕ್ತಿ ಪ್ರಯೋಗದಲ್ಲಿ ಪಾಲ್ಗೊಳ್ಳಬಹುದು. ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ಹೆಚ್ಚಿನ ಗಮನ ಇರಲಿದೆ ಎಂದು ಹೇಳಿದರು.