ಬೆಂಗಳೂರು (ಮೇ.11): ರಾಜ್ಯದಲ್ಲಿ ಕೋವಿಡ್‌ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಯ ಸಿಬ್ಬಂದಿ ಶೇ.100ರಷ್ಟು ಮತ್ತು ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯ ಶೇ.50ರಷ್ಟು  ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್‌ ಸುತ್ತೋಲೆ ಹೊರಡಿಸಿದ್ದಾರೆ.

ಅತ್ಯಗತ್ಯ ಸೇವೆ ಒದಗಿಸುತ್ತಿರುವ ಆರೋಗ್ಯ, ವೈದ್ಯಕೀಯ ಶಿಕ್ಷಣ, ಕಂದಾಯ, ಒಳಾಡಳಿತ, ಕಾರ್ಮಿಕ, ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿ, ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಬೇಕು. ನಗರಾಭಿವೃದ್ಧಿ, ಆಹಾರ, ಇಂಧನ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಆರ್ಥಿಕ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಕೃಷಿ ಇಲಾಖೆ, ತೋಟಗಾರಿಕೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಶೇ.50ರಷ್ಟುರೋಟೇಷನ್‌ ಆಧಾರದ ಮೇಲೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ರಾಜ್ಯದ ಎಲ್ಲಾ ಸಬ್ ರಿಜಿಸ್ಟರ್ ಕಚೇರಿಗಳು ಬಂದ್: ಎಲ್ಲಿವರೆಗೆ? .

ಉಳಿದೆಲ್ಲ ಇತರೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೆ ಕಚೇರಿಯಿಂದ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ. ವಿನಾಯಿತಿ ನೀಡಿರುವ ಇಲಾಖೆಯ ಕಾರ್ಯದರ್ಶಿ ಅಥವಾ ಇಲಾಖಾ ಮುಖ್ಯಸ್ಥರು ಇಚ್ಛಿಸಿದರೆ ಅವರು ಬಯಸುವಂತಹ ಅಧಿಕಾರಿ, ನೌಕರರು ಯಾವುದೇ ಕಾರಣ ನೀಡದೆ ಕಚೇರಿಗೆ ಹಾಜರಾಗಬೇಕು. ಕರ್ತವ್ಯಕ್ಕೆ ಹಾಜರಾಗುವ ಅಧಿಕಾರಿ/ನೌಕರರಿಗೆ ಸಂಬಂಧಪಟ್ಟಇಲಾಖೆಗಳು ಸಾಧ್ಯವಿದ್ದಲ್ಲಿ ಸರ್ಕಾರಿ ವಾಹನಗಳನ್ನು ಒದಗಿಸಬೇಕು. ಅಗತ್ಯ ಸೇವೆ ಒದಗಿಸುತ್ತಿರುವ ಇಲಾಖೆಯ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿ ಲಭ್ಯವಿರಬೇಕು. ಕೋವಿಡ್‌ ಕರ್ತವ್ಯಕ್ಕಾಗಿ ನಿಯೋಜಿಸಿದರೆ ತಪ್ಪದೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.

ದೃಷ್ಟಿಹೀನ ಮತ್ತು ಇತರೆ ದೈಹಿಕ ಅಂಗವೈಕಲ್ಯ ಹೊಂದಿರುವ ಅಧಿಕಾರಿ, ಸಿಬ್ಬಂದಿ ಮತ್ತು ಗರ್ಭಿಣಿ ಸಿಬ್ಬಂದಿ ಕಚೇರಿಗೆ ಹಾಜರಾಗುವುದಕ್ಕೆ ವಿನಾಯಿತಿ ನೀಡಲಾಗಿದೆ. ಈ ಸುತ್ತೋಲೆಯು ಮೇ 23ರವರೆಗೆ ಜಾರಿಯಲ್ಲಿರುತ್ತದೆ ಎಂದು ಉಲ್ಲೇಖಿಸಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona