ಶಂಕಿತ ಉಗ್ರರಿಗೆ ಕರಾವಳಿ, ಕೇರಳ ಸಂಪರ್ಕ: ಸಚಿವ ಆರಗ ಜ್ಞಾನೇಂದ್ರ
ಶಂಕಿತ ಉಗ್ರರ ಚಟುವಟಿಕೆ ಕುರಿತು ಎಲ್ಲ ದಿಕ್ಕಿನಿಂದಲೂ ತನಿಖೆ, ಸರಿಯಾದ ಸಮಯದಲ್ಲಿ ಶಂಕಿತ ಉಗ್ರರನ್ನು ಬಂಧಿಸಿದ್ದು, ಪೊಲೀಸರಿಗೆ ಸೂಕ್ತ ಬಹುಮಾನ: ಆರಗ ಜ್ಞಾನೇಂದ್ರ
ಶಿವಮೊಗ್ಗ(ಸೆ.25): ಶಂಕಿತ ಉಗ್ರರ ಬಂಧನದಿಂದ ಮುಂದೆ ನಡೆಯಬಹುದಾಗಿದ್ದ ದೊಡ್ಡ ಅನಾಹುತವನ್ನು ಶಿವಮೊಗ್ಗ ಪೊಲೀಸರು ತಪ್ಪಿಸಿದ್ದಾರೆ. ಪ್ರಕರಣ ಕುರಿತಂತೆ ಎಲ್ಲ ದಿಕ್ಕಿನಿಂದಲೂ ತನಿಖೆ ಚುರುಕುಗೊಂಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ತೀರ್ಥಹಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಶಂಕಿತ ಉಗ್ರರಿಗೆ ಕರಾವಳಿ ಹಾಗೂ ಕೇರಳದೊಂದಿಗೆ ಸಂಪರ್ಕ ಇದೆ. ಹೀಗಾಗಿಯೇ ಇಂತಹ ಕೃತ್ಯ ನಡೆಯುತ್ತಿದೆ. ಈ ಹಿಂದೆ ತೀರ್ಥಹಳ್ಳಿಯಲ್ಲಿ ಸ್ಯಾಟ್‌ಲೈಟ್ ಫೋನ್ ಬಳಕೆ ಸಹ ಆಗಿತ್ತು. ಇಡೀ ಪ್ರಕರಣವನ್ನು ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಇದಕ್ಕೆ ತಾರ್ಕಿಕ ಅಂತ್ಯ ಹಾಡಬೇಕಿದೆ ಎಂದರು.
ಶಂಕಿತ ಉಗ್ರರದ್ದು ತೀರ್ಥಹಳ್ಳಿ ಮೂಲ ಹೌದು. ಆದರೆ ಸಹವಾಸ ಮಂಗಳೂರಿನ ಕರಾವಳಿಯದ್ದಾಗಿದೆ. ಅಲ್ಲಿ ಮತಾಂಧರ ಪರಿಚಯದಿಂದ ಈ ರೀತಿಯಾಗಿದೆ. ದೇಶದ್ರೋಹಿ ವ್ಯಕ್ತಿಗಳ ಹಿಂದಿರುವವರು ಯಾರು? ಅವರಿಗಿರುವ ಲಿಂಕ್ ಯಾವುದು? ಹೀಗೆ ಎಲ್ಲ ದಿಕ್ಕುಗಳಲ್ಲೂ ತನಿಖೆ ನಡೆಯುತ್ತಿದೆ. ಈಗಾಗಲೇ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೂಡ ತನಿಖೆ ಕೈಗೊಂಡಿದೆ. ಪೊಲೀಸರು ಸರಿಯಾದ ಸಮಯದಲ್ಲಿ ಶಂಕಿತ ಉಗ್ರರನ್ನು ಬಂಧಿಸುವುದರ ಮೂಲಕ ಅಪಾಯ ತಪ್ಪಿಸಿದ್ದಾರೆ. ಇವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದರು.
ಶಿವಮೊಗ್ಗ: ಶಂಕಿತ ಉಗ್ರರು ಪಾಕಿಸ್ತಾನಕ್ಕೆ ಭೇಟಿ?
15 ಮಂದಿ ಬಂಧನ:
ಎನ್‌ಐಎ ದಾಳಿ ನಡೆಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವರು. ಪೊಲೀಸರು 15 ಜನರನ್ನು ಬಂಧಿಸಿದ್ದಾರೆ. ಎನ್‌ಐಎ ತಂಡ 7 ಜನರನ್ನು ವಶಕ್ಕೆ ಪಡೆದಿದ್ದಾರೆ. ಯಾರಿಗೆ ಯಾವ ಆಯುಧ ಬಳಸಬೇಕು, ಯಾವ ಭಾಷೆ ಬಳಸಬೇಕೋ ಅದನ್ನ ಬಳಸಬೇಕಾಗುತ್ತದೆ. ಈ ಹಿಂದೆ ಕೆಲವರ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದಾಗ ಅನಾವಶ್ಯಕವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಕೆಲವರು ಆರೋಪ ಮಾಡುತ್ತಿದ್ದರು. ಆದರೀಗ ಏನಾಯ್ತು? ಕೂಲಂಕುಶ ಪರಿಶೀಲನೆ ನಡೆಯುತ್ತಿದೆ. ಪೊಲೀಸರಿಗೆ ಎಲ್ಲಾ ರೀತಿಯ ಜಾಡು ಸಿಗುತ್ತಿದೆ. ನಮ್ಮ ಸರ್ಕಾರ ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದೆ. ಪೊಲೀಸರು ದೇಶದ್ರೋಹಿಗಳನ್ನು ಬಗ್ಗುಬಡಿಯುತ್ತಾರೆ. ಆದರೆ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಪೊಲೀಸರು ಈ ರೀತಿ ಕೆಲಸ ಮಾಡಲು ಸಾಧ್ಯವಿರಲಿಲ್ಲ. ನಮ್ಮ ಸರ್ಕಾರ ಪೊಲೀಸರ ಕೆಲಸದಲ್ಲಿ ಮೂಗು ತೂರಿಸಲು ಹೋಗುವುದಿಲ್ಲ. ಇಲಾಖೆ ಕೂಡ ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
‘ನಲಪಾಡ್ ಜವಾಬ್ದಾರಿ ಹೇಳಿಕೆ ನೀಡಲಿ’
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ್ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಗರ ಜ್ಞಾನೇಂದ್ರ, ಉದ್ಯೋಗ ಇದ್ದವರು ಏನೇನು ಮಾಡಿದ್ದಾರೆ ಅಂತಾ ಗೊತ್ತಿದೆ. ಅಲ್ಲದೆ ನಿರುದ್ಯೋಗಿ ಎಂದು ಬಾಂಬ್ ತಯಾರಿಸಲು ಹೋದರೆ ಈ ದೇಶದಲ್ಲಿ ಶಾಂತಿ ನೆಲೆಸಲು ಹೇಗೆ ಸಾಧ್ಯ? ಜವಾಬ್ದಾರಿಯುತ ಹೇಳಿಕೆ ನೀಡಬೇಕು ಹೊರತು, ಈ ರೀತಿ ಮನಸ್ಸಿಗೆ ಬಂದಂತೆ ಹೇಳಿಕೆ ನೀಡಬಾರದು. ನಲಪಾಡ್ ಏನೇನು ಮಾಡಿದ್ದಾರೆ ಎಂಬುದೂ ಗೊತ್ತು ಎಂದರು.
Suspected Terrorists: ಶಂಕಿತ ಉಗ್ರ ಶಾರೀಕ್‌ಗಾಗಿ ತೀವ್ರ ಶೋಧ
ಕಾಂಗ್ರೆಸ್‌ನ ಪೇಸಿಎಂ ಆರೋಪಕ್ಕೆ ತಿರುಗೇಟು ನೀಡಿದ ಗೃಹ ಸಚಿವರು, ಅವರಿಗೆ ಯಾವ ಪೇಸಿಎಂ ಇದೆ? ಪೇಸಿಎಂ ಕಾಂಗ್ರೆಸ್‌ನ ವಿಕೃತ ಮನಸ್ಥಿತಿಗೆ ಸಾಕ್ಷಿಯಂತಾಗಿದೆ. ಅವರಿಗೆ ನಾಚಿಕೆ ಆಗಬೇಕು. ನೇರಾನೇರ ರಾಜಕಾರಣ ಮಾಡಲು ಅವರಿಗೆ ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ರಮೇಶ್‌ಕುಮಾರ್ ಈ ಹಿಂದೆ ಮೂರು ತಲೆಮಾರಿಗೆ ಆಗುವಷ್ಟುಆಸ್ತಿ ಮಾಡಿಕೊಂಡಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಅವರಿಗೆ ಯಾವ ಪೇಸಿಎಂ ಬರುತ್ತದೆ? ಚುನಾವಣೆ ಸಮೀಪಿಸುತ್ತಿರುವುದರಿಂದ ಇಂತಹ ಗಿಮಿಕ್ ಮಾಡುತ್ತಿದ್ದಾರೆ. ಅಲ್ಲದೇ ಕಾಂಗ್ರೆಸ್‌ನವರನ್ನು ನಂಬುವ ಸ್ಥಿತಿಯಲ್ಲಿ ರಾಜ್ಯದ ಜನರಿಲ್ಲ ಎಂದರು.
ಹೈದ್ರಾಬಾದ್ ಆಸ್ಪತ್ರೆಗೆ ಶ್ರೀಮಂತ ಇಲ್ಯಾಳ
ಕಲಬುರಗಿ ಸಿಪಿಐ ಮೇಲೆ ಮಹಾರಾಷ್ಟಾ್ರ ಗಡಿಯಲ್ಲಿ ಸುಮಾರು 30 ಜನರ ಗಾಂಜಾಗ್ಯಾಂಗ್ ದಾಳಿ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ಸಿಪಿಐ ಶ್ರೀಮಂತ ಇಲ್ಲಾಳ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ, ಒಳ್ಳೆಯ ಕಡೆ ಚಿಕಿತ್ಸೆ ಕೊಡಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಬೆಂಗಳೂರಿಗೆ ಕರೆ ತಂದು ಚಿಕಿತ್ಸೆ ಕೊಡಲು ವಿಳಂಬವಾಗುತ್ತದೆ. ಹಾಗಾಗಿ ಹೈದ್ರಾಬಾದ್‌ನ ಆಸ್ಪತ್ರೆಗೆ ಕರೆದೊಯ್ಯಲು ನಮ್ಮ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಿದರು.