ಕರ್ನಾಟಕ ಬಿಜೆಪಿಯಲ್ಲಿ ಇಬ್ಬರೇ ನಿರ್ಣಾಯಕ ಆಟಗಾರರು; ಒಬ್ಬರು ಬಿಎಸ್‌ವೈ, ಇನ್ನೊಬ್ಬರು?
9 ವಿಧಾನ ಪರಿಷತ್ ಸ್ಥಾನಗಳಲ್ಲಿ ಮೂವರು ಸೋತವರಿಗೆ ಅಂದರೆ, ಎಚ್.ವಿಶ್ವನಾಥ್, ಎಂ.ಟಿ.ಬಿ ನಾಗರಾಜ್ ಮತ್ತು ಆರ್.ಶಂಕರ್ ಅವರಿಗೆ ಸ್ಥಾನ ನೀಡುವ ಬಗ್ಗೆ ದಿಲ್ಲಿ ವಲಯದಲ್ಲಂತೂ ಒಲವು ಇಲ್ಲ.
ಬೆಂಗಳೂರು (ಮೇ. 29): 9 ವಿಧಾನ ಪರಿಷತ್ ಸ್ಥಾನಗಳಲ್ಲಿ ಮೂವರು ಸೋತವರಿಗೆ ಅಂದರೆ, ಎಚ್.ವಿಶ್ವನಾಥ್, ಎಂ.ಟಿ.ಬಿ ನಾಗರಾಜ್ ಮತ್ತು ಆರ್.ಶಂಕರ್ ಅವರಿಗೆ ಸ್ಥಾನ ನೀಡುವ ಬಗ್ಗೆ ದಿಲ್ಲಿ ವಲಯದಲ್ಲಂತೂ ಒಲವು ಇಲ್ಲ. ಆದರೆ ಯಡಿಯೂರಪ್ಪನವರು ಬೇರೆ ಪಕ್ಷದವರಿಗೆ ಬಿಜೆಪಿಗೆ ಬರುವಾಗ ನಾನೇ ಸ್ವತಃ ಮಾತು ಕೊಟ್ಟಿದ್ದು, ಅವರನ್ನು ರಾಜಕೀಯವಾಗಿ ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ ಎಂದು ಸ್ಪಷ್ಟಮಾತುಗಳಲ್ಲಿ ಹೈಕಮಾಂಡ್ ನಾಯಕರಿಗೆ ಮೊದಲೇ ಹೇಳಿದ್ದಾರೆ.
ನೋಡೋಣ, ರಾಜ್ಯ ಕೋರ್ ಕಮಿಟಿ ಎದುರು ಅಂಗೀಕಾರ ಪಡೆದು ದಿಲ್ಲಿಗೆ ಪಟ್ಟಿತೆಗೆದುಕೊಂಡು ಬನ್ನಿ ಎಂದಿದ್ದಾರಂತೆ ವರಿಷ್ಠರು. ಸೋತಿರುವ ಮೂವರೂ ಹಿಂದುಳಿದ ಕುರುಬ ಸಮುದಾಯಕ್ಕೆ ಸೇರಿರುವ ಕಾರಣ, ಮೂರೂ ಟಿಕೆಟ್ ಒಂದೇ ಸಮುದಾಯಕ್ಕೆ ಬೇಡ ಎಂದು ಕೆಲವು ಕೋರ್ ಕಮಿಟಿ ಸದಸ್ಯರ ಅಭಿಪ್ರಾಯವಿದೆ. ಆದರೆ ಸಿದ್ದರಾಮಯ್ಯ ಅವರಿಂದ ಕುರುಬರನ್ನು ಸ್ವಲ್ಪ ದೂರ ಸೆಳೆಯಬೇಕಾದರೆ ಕೊಟ್ಟಮಾತಿನಂತೆ ಮೂವರಿಗೂ ಟಿಕೆಟ್ ಕೊಡಬೇಕು ಎನ್ನುವುದು ಯಡಿಯೂರಪ್ಪ ಮುಂದಿಟ್ಟಿರುವ ವಾದ.
ಸಿಎಂ ಯಡಿಯೂರಪ್ಪಗೆ ಲಿಂಗಾಯತ ನಾಯಕರೇ ರೆಬೆಲ್ಸ್!
ದಿಲ್ಲಿ ವರಿಷ್ಠರಿಗೆ ಮನಸ್ಸಿಲ್ಲ, ಆದರೆ ಯಡಿಯೂರಪ್ಪ ಹಿಡಿದ ಹಟ ಬಿಡುವವರಲ್ಲ. ಹೀಗಾಗಿ ಕೊನೆಗೆ ಎಚ್.ವಿಶ್ವನಾಥ್ ಅವರಿಗೆ ಹುದ್ದೆ ತಪ್ಪಿದರೂ ಉಳಿದಿಬ್ಬರಿಗೆ ಕೊಡೋಣ ಎಂಬ ಸೂತ್ರಕ್ಕೆ ದಿಲ್ಲಿ ವರಿಷ್ಠರು ಮತ್ತು ಯಡಿಯೂರಪ್ಪ ಇಬ್ಬರೂ ಒಪ್ಪಬಹುದು ಎಂಬ ಮಾತು ಕೇಳಿಬರುತ್ತಿದೆ.
ಆದರೆ, ವಲಸೆ ಶಾಸಕರ ಗುಂಪಿನಿಂದ ವಿಶ್ವನಾಥ್ ಅವರಿಗೂ ಎಂಎಲ್‌ಸಿ ಹುದ್ದೆ ನೀಡಬೇಕೆಂಬ ಒತ್ತಡ ಕೇಳಿಬರುತ್ತಿದೆ. ಅಂತಿಮವಾಗಿ ಏನಾಗುತ್ತೋ ಕಾದು ನೋಡಬೇಕು. ಅಂದಹಾಗೆ, ಕರ್ನಾಟಕ ಬಿಜೆಪಿಯಲ್ಲಿ ಇಬ್ಬರೇ ನಿರ್ಣಾಯಕ ಆಟಗಾರರು; ಒಬ್ಬರು ರಾಜ್ಯ ಆಳುತ್ತಿರುವ ಯಡಿಯೂರಪ್ಪ, ಇನ್ನೊಬ್ಬರು ದಿಲ್ಲಿಯಲ್ಲಿರುವ ಬಿ.ಎಲ್.ಸಂತೋಷ್.
ಸಂತೋಷ್ ನೇಮಕದ ಮರ್ಮವೇನು?
ಕಳೆದ ಮೂರು ತಿಂಗಳಿನಿಂದ ಯಡಿಯೂರಪ್ಪ ವಿರುದ್ಧ ದೂರು ಕೊಡುತ್ತೇನೆ ಎಂದು ದಿಲ್ಲಿ ಬಿಜೆಪಿ ನಾಯಕರ ಮನೆಗಳಿಗೆ ಓಡಾಡಿದ ಯಡಿಯೂರಪ್ಪನವರ ಹಿಂದಿನ ಆಪ್ತ ಕಾರ್ಯದರ್ಶಿ ಎನ್.ಆರ್. ಸಂತೋಷ್ ದಿಢೀರನೆ ನಿನ್ನೆ ಮುಖ್ಯಮಂತ್ರಿಗಳ ಕ್ಯಾಂಪ್‌ಗೆ ಮರಳಿದ್ದು, ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಆಪರೇಷನ್ ಯಡಿಯೂರಪ್ಪ: ಬಿಜೆಪಿ ಅತೃಪ್ತ ಶಾಸಕರ 4 ಬೇಡಿಕೆಗಳಿವು!
ಮೂಲಗಳು ಹೇಳುವ ಪ್ರಕಾರ, ಸಂತೋಷರನ್ನು ಡಾಲರ್ಸ್ ಕಾಲೋನಿ ಮನೆಗೆ ಕರೆಸಿಕೊಂಡಿದ್ದ ಯಡಿಯೂರಪ್ಪ ಮತ್ತು ವಿಜಯೇಂದ್ರ ಹಳೆಯ ಕಾರ್ಯದರ್ಶಿ ಜೊತೆ ಮನಬಿಚ್ಚಿ ಮಾತನಾಡಿದ ಬಳಿಕ ಹಳೆಯ ವೈಮನಸ್ಯ ಬಗೆಹರಿದಿದೆ. ವಿಜಯೇಂದ್ರ ಮತ್ತು ಸಂತೋಷ್ ನಡುವೆ ಅಷ್ಟಕ್ಕಷ್ಟೆಎಂಬುದು ಗುಟ್ಟಿನ ಸಂಗತಿಯಾಗಿರಲಿಲ್ಲ. ಯೋಗೇಶ್ವರ್ ಜೊತೆ ಕಾಣಿಸಿಕೊಳ್ಳುತ್ತಿದ್ದ ಸಂತೋಷ್, ಮೂರು ತಿಂಗಳ ಹಿಂದೆ ಯಡಿಯೂರಪ್ಪನವರ ಸರ್ಕಾರ ಬೀಳಿಸುತ್ತೇನೆ ಎನ್ನುತ್ತಿದ್ದರು.
ಈಗ ಸಂತೋಷ್ ಮುಖ್ಯಮಂತ್ರಿ ಕ್ಯಾಂಪ್ ಏನೋ ಸೇರಿಕೊಂಡಿದ್ದಾರೆ. ಆದರೆ ಯೋಗೇಶ್ವರ ಜೊತೆ ಇನ್ನು ಮುಖ್ಯಮಂತ್ರಿಗಳ ಸಿಟ್ಟಿಂಗ್ ಆಗಿಲ್ಲ. ಅಂದಹಾಗೆ, ಸಂತೋಷ್ ಯಡಿಯೂರಪ್ಪ ಸಂಬಂಧಿಕ ಎಂದು ಹೇಳಿಕೊಳ್ಳುತ್ತಾರೆ. ಇವರು ತಿಪಟೂರಿನ ಟಿಕೆಟ್ ಆಕಾಂಕ್ಷಿಯಂತೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ