ಇಂದು ಸಿಎಂ ಸಿದ್ದರಾಮಯ್ಯ ವಿಜಯನಗರ ಜಿಲ್ಲಾ ಪ್ರವಾಸ: ಬೆಳಗ್ಗೆ 9 ಗಂಟೆಗೆ ಪಲ್ಸ್ ಪೋಲಿಯೊ ಅಭಿಯಾನಕ್ಕೆ ಚಾಲನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ. 3ರಂದು ಬೆಳಗ್ಗೆ 9 ಗಂಟೆಗೆ ಕಮಲಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಹೊಸಪೇಟೆ (ಮಾ.3): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ. 3ರಂದು ಬೆಳಗ್ಗೆ 9 ಗಂಟೆಗೆ ಕಮಲಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಾಂಕೇತಿಕವಾಗಿ ಮಕ್ಕಳಿಗೆ ಪೋಲಿಯೋ ಹನಿ ಹಾಕಲಿದ್ದಾರೆ. ಈ ಮೂಲಕ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ತಿಳಿಸಿದರು.
ಶಾಸಕರ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 62,85,880 ಮಕ್ಕಳಿಗೆ ಪಲ್ಸ್ ಪೋಲಿಯೋ ನೀಡುವ ಗುರಿ ಹೊಂದಲಾಗಿದೆ. ರಾಷ್ಟ್ರೀಯ ಲಸಿಕಾ ದಿನದ ನಿಮಿತ್ತ ಹೊಸಪೇಟೆಯ ಕಮಲಾಪುರದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ. 12 ವರ್ಷಗಳಿಂದ ದೇಶದಲ್ಲಿ ಪೋಲಿಯೋ ಪ್ರಕರಣಗಳು ಕಂಡು ಬಂದಿಲ್ಲ. ಆದರೆ, ಈ ಪ್ರಕರಣಗಳು ಕಾಣಿಸದಿರಲಿ ಎಂದು ಮುನ್ನೆಚ್ಚರಿಕಾ ಕ್ರಮವಾಗಿ ಐದು ವರ್ಷದೊಳಗಿನ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕಲಾಗುತ್ತಿದೆ. ವಿಜಯನಗರ ಜಿಲ್ಲೆಯಲ್ಲೂ 1,33,429 ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಸಂಚಾರಿ ತಂಡ, ಟ್ರಾನ್ಸಿಟ್ ತಂಡಗಳನ್ನು ರಚಿಸಿ ಲಸಿಕೆ ಹಾಕಲು ಕ್ರಮವಹಿಸಲಾಗಿದೆ. ಈಗಾಗಲೇ ರಾಜ್ಯ ಸೇರಿದಂತೆ ಜಿಲ್ಲೆಯಾದ್ಯಂತ ಜಾಗೃತಿ ಕೂಡ ಮೂಡಿಸಲಾಗುತ್ತಿದೆ ಎಂದರು.
ಯಡಿಯೂರಪ್ಪ ಕರ್ನಾಟಕದ ಮೋದಿ ಇದ್ದಂತೆ: ಶ್ರೀರಾಮುಲು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಈಗ ರಾಷ್ಟ್ರೀಯ ಲಸಿಕಾ ದಿನದ ನಿಮಿತ್ತ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಸಂಡೂರು ಶಾಸಕ ಈ. ತುಕಾರಾಂ ಅವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಚಿಕ್ಕಮಗಳೂರಿಗೆ ತೆರಳಲಿದ್ದಾರೆ ಎಂದು ತಿಳಿಸಿದರು.
ಶಾಸಕರ ಕಾರ್ಖಾನೆ ಸ್ಥಾಪನೆಗೆ ಕ್ರಮ: ಈ ಭಾಗದ ರೈತರ ಒತ್ತಾಸೆಯಂತೆ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸರ್ಕಾರ ಹಾಗೂ ಮುಖ್ಯಮಂತ್ರಿ ಮಟ್ಟದಲ್ಲಿ ಒತ್ತಡ ಹೇರಿ ಕ್ರಮವಹಿಸಲಾಗುವುದು. ಈ ಭಾಗದ ರೈತರಿಗೆ ಸಕ್ಕರೆ ಕಾರ್ಖಾನೆ ನಿರ್ಮಾಣ ಮುಖ್ಯವಾಗಿದೆ. ಈಗಾಗಲೇ 77 ಎಕರೆ ಜಾಗವನ್ನು ಕೂಡ ನಾಗೇನಹಳ್ಳಿ ಭಾಗದಲ್ಲಿ ಗುರುತಿಸಲಾಗಿದೆ. ಈ ಹಿಂದೆ ಖಾಸಗಿ ಕಾರ್ಖಾನೆ ಸ್ಥಾಪನೆಗೆ ನೀಡಿದ್ದ ಪರವಾನಗಿ ಕೂಡ ಇನ್ನೂ ಕ್ಯಾಬಿನೆಟ್‌ನಲ್ಲಿ ರದ್ದುಪಡಿಸಲಾಗಿಲ್ಲ. ಈ ಬಗ್ಗೆ ಸಕ್ಕರೆ ಕಾರ್ಖಾನೆ ಸಚಿವರ ಗಮನಕ್ಕೂ ತರಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರೊಂದಿಗೂ ಚರ್ಚಿಸಿ ಸಿಎಂ ಅವರೊಂದಿಗೆ ಈ ಬಗ್ಗೆ ಚರ್ಚಿಸಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕ್ರಮವಹಿಸಲಾಗುವುದು ಎಂದರು.
ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಯಿಂದಾಗಿ ಜಿಲ್ಲೆಗೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ದೊರೆತಿಲ್ಲ. ಮೆಡಿಕಲ್ ಕಾಲೇಜ್, ಸಕ್ಕರೆ ಕಾರ್ಖಾನೆ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನ ನೀಡಬೇಕಿತ್ತು. ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜ್‌ಗೆ ಅನುದಾನ ಲಭಿಸಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಗೂ ಅನುದಾನ ದೊರೆಯುವ ಸಾಧ್ಯತೆ ಇದೆ. ಈ ಭಾಗದ ಜನರಿಗೆ ಮೆಡಿಕಲ್ ಕಾಲೇಜ್ ಅವಶ್ಯಕವಾಗಿದೆ. ಜಿಲ್ಲೆಗೆ ಅನುದಾನ ತರುವ ವಿಷಯದಲ್ಲಿ ನಮ್ಮ ಧ್ವನಿ ಕಡಿಮೆಯಾಗಿದೆ ಅನಿಸುತ್ತಿದೆ. ಹಾಗಾಗಿ ಜಿಲ್ಲೆಯ ಎಲ್ಲ ಶಾಸಕರು ಒಗ್ಗೂಡಿ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ ಅನುದಾನಕ್ಕೆ ಮತ್ತೊಮ್ಮೆ ಒತ್ತಡ ಹೇರುತ್ತೇವೆ ಎಂದರು.
ನಿಮ್ಮ ಮಕ್ಕಳಿಗೆ ಮಾ.10ಕ್ಕೆ ತಪ್ಪದೇ ಪೊಲಿಯೋ ಲಸಿಕೆ ಹಾಕಿಸಿ
ನಿಗಮ-ಮಂಡಳಿ ನೇಮಕದಲ್ಲೂ ಜಿಲ್ಲೆಗೆ ಮನ್ನಣೆ ಸಿಕ್ಕಿಲ್ಲ. ಇನ್ನೂ ಹುಡಾ ಅಧ್ಯಕ್ಷರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಮಕ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಜತೆಗೆ ಚರ್ಚಿಸಿ ಸೂಕ್ತರಾದವರನ್ನು ನೇಮಿಸಲಿದ್ದಾರೆ. ನಾನು ಕೂಡ ಸಲಹೆ ನೀಡುವೆ. ಜಿಲ್ಲೆಯಲ್ಲಿ ಪಕ್ಷಕ್ಕಾಗಿ ದುಡಿದ ಶಾಸಕರನ್ನು ಕಡೆಗಣಿಸಿಲ್ಲ. ನಮ್ಮ ಕ್ಷೇತ್ರದಲ್ಲೇ 135 ಕಾರ್ಯಕರ್ತರನ್ನು ವಿವಿಧ ಸಮಿತಿಗೆ ನೇಮಿಸಿರುವೆ. ಇನ್ನೂ 100 ಕಾರ್ಯಕರ್ತ ಪಟ್ಟಿಯೂ ಸಿದ್ಧವಾಗಿದೆ. ಅವರಿಗೂ ಹಂತ ಹಂತವಾಗಿ ನೇಮಿಸಲು ಕ್ರಮವಹಿಸುವೆ ಎಂದರು.
ಆರೋಗ್ಯ ಇಲಾಖೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ. ನಾಗರಾಜ, ಡಿಎಚ್‌ಒ ಡಾ. ಶಂಕರ್ ನಾಯ್ಕ, ಆರ್‌ಸಿಎಚ್‌ಒ ಡಾ. ಜಂಬಯ್ಯ ನಾಯಕ ಇದ್ದರು.