ಯೋಜನೆಯ ಲಾಭ ಪಡೆಯಲು ಎಪಿಎಲ್‌, ಬಿಪಿಎಲ್‌, ಅಂತ್ಯೋದಯ ಕಾರ್ಡ್‌ ಹೊಂದಿರುವ ಮನೆಯೊಡತಿಯು ಅರ್ಜಿ ಸಲ್ಲಿಸಬಹುದು. ಅರ್ಹರಿಗೆ ಆಗಸ್ಟ್‌ ತಿಂಗಳಿನಿಂದ ಮಾಸಿಕ 2 ಸಾವಿರ ರು. ಹಣ ನೇರವಾಗಿ ಖಾತೆಗೆ ಜಮೆಯಾಗಲಿದೆ.

ಬೆಂಗಳೂರು(ಜು.19): ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ‘ಶಕ್ತಿ’, ‘ಗೃಹಜ್ಯೋತಿ’, ‘ಅನ್ನಭಾಗ್ಯ’ ಬಳಿಕ ಬಹು ನಿರೀಕ್ಷಿತ ನಾಲ್ಕನೇ ಗ್ಯಾರಂಟಿ ‘ಗೃಹ ಲಕ್ಷ್ಮಿ’ ಯೋಜನೆಗೆ ಬುಧವಾರ ಸಂಜೆ 5.30 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಯೋಜನೆಯ ಲಾಭ ಪಡೆಯಲು ಎಪಿಎಲ್‌, ಬಿಪಿಎಲ್‌, ಅಂತ್ಯೋದಯ ಕಾರ್ಡ್‌ ಹೊಂದಿರುವ ಮನೆಯೊಡತಿಯು ಅರ್ಜಿ ಸಲ್ಲಿಸಬಹುದು. ಅರ್ಹರಿಗೆ ಆಗಸ್ಟ್‌ ತಿಂಗಳಿನಿಂದ ಮಾಸಿಕ 2 ಸಾವಿರ ರು. ಹಣ ನೇರವಾಗಿ ಖಾತೆಗೆ ಜಮೆಯಾಗಲಿದೆ.

ಗೃಹಲಕ್ಷ್ಮಿ ಯೋಜನೆಗೆ 10 ನಕಲಿ ಆ್ಯಪ್‌ಗಳ ಹಾವಳಿ: ಡೌನ್ಲೋಡ್‌ ಮಾಡಿದ್ರೆ ಹಣ ಖೋತಾ

ಗೃಹ ಲಕ್ಷ್ಮಿ ಯೋಜನೆಗೆ ಗೃಹ ಜ್ಯೋತಿ ಯೋಜನೆ ಮಾದರಿಯಲ್ಲಿ ಆನ್‌ಲೈನ್‌ನಲ್ಲಿ ನೇರವಾಗಿ ಸ್ವಯಂ ನೋಂದಣಿ ಮಾಡಿಕೊಳ್ಳಲು ಅವಕಾಶವಿಲ್ಲ. ಬದಲಿಗೆ ಸರ್ಕಾರ ನಿಗದಿಪಡಿಸಿರುವ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು. ಇಲ್ಲದಿದ್ದರೆ ಸರ್ಕಾರ ನಿಯೋಜಿಸಿರುವ ಪ್ರಜಾಪ್ರತಿನಿಧಿಗಳ ಸಹಾಯದಿಂದ ತಮ್ಮ ಮನೆಗಳ ಬಳಿಯೇ ನೋಂದಣಿ ಮಾಡಿಕೊಳ್ಳಬಹುದು. 1.28 ಕೋಟಿ ಫಲಾನುಭವಿಗಳಿಗೆ ಮುಟ್ಟಲಿರುವ ಈ ಯೋಜನೆಗೆ ಈ ವರ್ಷ 17,500 ಕೋಟಿ ರು. ವೆಚ್ಚವಾಗುವ ಅಂದಾಜಿದೆ.

ನೋಂದಣಿ ಪ್ರಕ್ರಿಯೆ ಹೇಗೆ?:

ಈಗಾಗಲೇ ಪಡಿತರ ಚೀಟಿಯಲ್ಲಿ ಗುರುತಿಸಲಾಗಿರುವ ಮನೆಯೊಡತಿಗೆ ಅವರು ನೀಡಿರುವ ಮೊಬೈಲ್‌ ಸಂಖ್ಯೆ ಆಧರಿಸಿ ಅವರು ನೋಂದಣಿ ಮಾಡಬೇಕಾದ ದಿನಾಂಕ, ಸಮಯ ಹಾಗೂ ನೋಂದಣಿ ಮಾಡಿಸುವ ಸ್ಥಳದ ವಿವರಗಳನ್ನು ಇ-ಆಡಳಿತ ಇಲಾಖೆ ಮೂಲಕ ತಿಳಿಸಲಾಗುವುದು. ಅದೇ ಸಂದೇಶದಲ್ಲಿ ಸೂಚಿಸಿದ ಸಮಯಕ್ಕೆ ಗ್ರಾಮಾಂತರ ಪ್ರದೇಶದವರು ನಿಗದಿತ ಗ್ರಾಮ ಒನ್‌, ಬಾಪೂಜಿ ಸೇವಾ ಕೇಂದ್ರ ಹಾಗೂ ನಗರ ಪ್ರದೇಶದವರು ಬೆಂಗಳೂರು ಒನ್‌, ಕರ್ನಾಟಕ ಒನ್‌ ಕೇಂದ್ರಗಳಿಗೆ ಹೋಗಿ ನೋಂದಣಿ ಮಾಡಬಹುದು.

ಒಂದು ವೇಳೆ ಸಂದೇಶ ಬಾರದಿದ್ದರೆ ಅಂತಹವರು 1902 ಸಂಖ್ಯೆಗೆ ಕರೆ ಮಾಡಿ ಅಥವಾ 8147500500 ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಎಸ್‌ಎಂಎಸ್‌, ವಾಟ್ಸಾಪ್‌ ಸಂದೇಶ ಕಳುಹಿಸುವ ಮೂಲಕ ನೋಂದಣಿ ಮಾಡಬೇಕಾದ ವಿವರಗಳನ್ನು ಪಡೆಯಬಹುದು. ಅರ್ಜಿದಾರರು ಸೂಚಿಸಿದ ಸಮಯದಲ್ಲೇ ಹೋಗಿ ಅರ್ಜಿ ನೋಂದಣಿ ಮಾಡಬೇಕು.

ಇಲಾಖೆ ಸಂದೇಶದಲ್ಲಿ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು ಗ್ರಾಮ ಒನ್‌, ಬಾಪೂಜಿ ಕೇಂದ್ರ, ಕರ್ನಾಟಕ ಒನ್‌, ಬೆಂಗಳೂರು ಒನ್‌ ಕೇಂದ್ರಗಳಿಗೆ ಹೋಗಲು ಸಾಧ್ಯವಾಗದಿದ್ದರೂ ಪರ್ಯಾಯ ವ್ಯವಸ್ಥೆಯಿದೆ. ಅಂತಹವರು ಅದೇ ಸೇವಾ ಕೇಂದ್ರಗಳಿಗೆ ಯಾವುದೇ ದಿನ ಸಂಜೆ 5 ರಿಂದ 7 ಗಂಟೆಯೊಳಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.

ಯೋಜನೆಗೆ ಯಾರು ಅರ್ಹರಲ್ಲ?

ಫಲಾನುಭವಿ ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಅಥವಾ ಜಿಎಸ್‌ಟಿ ರಿಟನ್ಸ್‌ರ್‍ ಸಲ್ಲಿಸುವವರಾಗಿದ್ದರೆ ಅಂತಹವರು ಯೋಜನೆಗೆ ಅರ್ಹರಾಗುವುದಿಲ್ಲ. ಜತೆಗೆ ಪಡಿತರ ಚೀಟಿಯಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಯಜಮಾನಿಯರಿದ್ದರೆ ಅನ್ವಯವಾಗುವುದಿಲ್ಲ.

ಮನೆ ಯಜಮಾನಿಗೆ ಗೃಹಲಕ್ಷ್ಮಿ ಅನುಗ್ರಹ: 2000 ರೂಪಾಯಿ ಬೇಕು ಅಂದ್ರೆ ಏನು ಮಾಡಬೇಕು..?

ಬೇಕಾಗಿರುವ ದಾಖಲೆಗಳು:

ಈ ಯೋಜನೆಯಡಿ ನೋಂದಾಯಿಸಿಕೊಳ್ಳಲು ಪಡಿತರ ಚೀಟಿ ಸಂಖ್ಯೆ, ಪತಿ ಹಾಗೂ ಇಬ್ಬರೂ ವ್ಯಕ್ತಿಗಳ ಆಧಾರ್‌ ಕಾರ್ಡ್‌ ಪ್ರತಿ ನೀಡಬೇಕು. ಆಧಾರ್‌ ಕಾರ್ಡ್‌ ಜೋಡಣೆಯಾಗಿರುವ ಬ್ಯಾಂಕ್‌ ಖಾತೆ ಹೊರತುಪಡಿಸಿ ಬೇರೆ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆಯಾಗಬೇಕಾದರೆ ಸದರಿ ಬ್ಯಾಂಕ್‌ ಖಾತೆಯ ಪಾಸ್‌ ಬುಕ್‌ ಝೆರಾಕ್ಸ್‌ ಪ್ರತಿ ನೀಡಬೇಕು. ಜತೆಗೆ ಆಧಾರ್‌ ಕಾರ್ಡ್‌ ಲಿಂಕ್‌ ಆಗಿರುವ ಮೊಬೈಲ್‌ ತೆಗೆದುಕೊಂಡು ಬರಬೇಕು. ನೋಂದಣಿ ಮಾಡಿದ ಬಳಿಕ ಸ್ಥಳದಲ್ಲೇ ಮಂಜೂರಾತಿ ಪತ್ರವೂ ನೀಡಲಾಗುತ್ತದೆ. ಪ್ರಜಾಪ್ರತಿನಿಧಿ ಮೂಲಕ ನೋಂದಣಿ ಮಾಡಿಕೊಂಡರೆ ನಿಧಾನವಾಗಿ ಮನೆಗೆ ಮಂಜೂರಾತಿ ಪತ್ರ ತಲುಪಿಸಲಾಗುವುದು.

3 ‘ಜ್ಯೋತಿ’ಗಳು ಇನ್ನು ಗೃಹಜ್ಯೋತಿಯಲ್ಲಿ ಲೀನ

ಬೆಂಗಳೂರು: ರಾಜ್ಯದಲ್ಲಿ ‘ಗೃಹ ಜ್ಯೋತಿ’ ಯೋಜನೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈ ಮೊದಲು ಬಡವರಿಗೆ ಉಚಿತ ವಿದ್ಯುತ್‌ ಪೂರೈಸಲು ಅಸ್ತಿತ್ವದಲ್ಲಿದ್ದ ‘ಕುಟೀರ ಜ್ಯೋತಿ’, ‘ಭಾಗ್ಯ ಜ್ಯೋತಿ’ ಹಾಗೂ ‘ಅಮೃತ ಜ್ಯೋತಿ’ ಯೋಜನೆಗಳನ್ನು ಗೃಹ ಜ್ಯೋತಿ ಯೋಜನೆಯಡಿ ವಿಲೀನಗೊಳಿಸಿ ಇಂಧನ ಇಲಾಖೆ ಆದೇಶ ಹೊರಡಿಸಿದೆ. ಇದರಿಂದ ಮೂರು ಯೋಜನೆಗಳ ಫಲಾನುಭವಿಗಳಿಗೆ ಉಚಿತ ವಿದ್ಯುತ್‌ ಮಿತಿ ತುಸು ಹೆಚ್ಚಾಗಿದೆ. 50 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಲಾಭವಾಗಲಿದೆ.