ಕೇಂದ್ರದವರು ಮಾತೆತ್ತಿದರೆ ಆಹಾರ ಭದ್ರತಾ ಕಾಯ್ದೆ ಎನ್ನುವ ಕೇಂದ್ರ ಸರ್ಕಾರ, ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಯು.ಪಿ.ಎ ಸರ್ಕಾರದಲ್ಲಿ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಎನ್ನುವುದನ್ನು ಮರೆಯುತ್ತಿದೆ: ಸಿದ್ದರಾಮಯ್ಯ
ಬೆಂಗಳೂರು(ಜೂ.21): ರಾಜ್ಯಕ್ಕೆ ಅಕ್ಕಿ ಕೊಡಲು ಕೇಂದ್ರ ಆಹಾರ ನಿಮಮ ನಿರಾಕರಿಸಿದ್ದರೂ ಕೂಡ ನಮ್ಮ ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಕೇಂದ್ರ ಆಹಾರ ಸರಬರಾಜು ಸಚಿವರನ್ನು ಬುಧವಾರ ದೆಹಲಿಯಲ್ಲಿ ಭೇಟಿಯಾಗಿ ಅಕ್ಕಿ ಖರೀದಿಗೆ ಅನುಮತಿ ನೀಡುವಂತೆ ಮನವಿ ಮಾಡಲಿದ್ದಾರೆ. ಹೇಗಾದರೂ ಮಾಡಿ ನಾವು ಅಕ್ಕಿ ಖರೀದಿಸಿ ಅನ್ನಭಾಗ್ಯದಡಿ 10 ಕೆ.ಜಿ ಅಕ್ಕಿಯನ್ನು ಕೊಟ್ಟೇ ಕೊಡುತ್ತೇವೆ ಸ್ವಲ್ಪ ತಡವಾಗಬಹುದು ಅಷ್ಟೆಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ನಾನು ದೆಹಲಿಯಲ್ಲಿ ರಾಷ್ಟ್ರಪತಿ ಅವರನ್ನು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಲಿದ್ದೇನೆ. ಮುಖ್ಯಮಂತ್ರಿಯಾದ ಬಳಿಕ ಕೇಂದ್ರ ಸಚಿವರೊಂದಿಗೆ ಸೌಜನ್ಯದ ಭೇಟಿ ಮಾಡಲಿದ್ದೇನೆ. ಆದರೆ, ನಮ್ಮ ಆಹಾರ ಸಚಿವರಾದ ಕೆ.ಹೆಚ್. ಮುನಿಯಪ್ಪ ಕೇಂದ್ರ ಆಹಾರ ಸರಬರಾಜು ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಕೇಂದ್ರದಿಂದ ಅಕ್ಕಿ ಖರೀದಿಸಲು ರಾಜ್ಯಕ್ಕೆ ಅವಕಾಶ ನೀಡುವಂತೆ ಮನವಿ ಮಾಡಲಿದ್ದಾರೆ ಎಂದರು.
ಅಕ್ಕಿ ಖರೀದಿಯೇ ಆಗಿಲ್ಲ, ಅನ್ನಭಾಗ್ಯ ಯೋಜನೆ ವಿಳಂಬ ಆಗಲಿದೆ: ಆಹಾರ ಸಚಿವ ಮುನಿಯಪ್ಪ
ಇದೇ ವೇಳೆ ಅಕ್ಕಿ ಖರೀದಿ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ ಮುಖ್ಯಮಂತ್ರಿ ಅವರು, ಬಡವರಿಗೆ ಕೊಡುವ ಅಕ್ಕಿ ಖರೀದಿಗೂ ದ್ವೇಷ ರಾಜಕಾರಣ ಮಾಡುವವರಿಗೆ ಮಾನವೀಯತೆ ಇದೆಯಾ? ಮೊದಲು ಅಕ್ಕಿ ಕೊಡಲು ಒಪ್ಪಿಕೊಂಡು ನಂತರ ಕೊಡಲ್ಲ ಅನ್ನುವುದು ದ್ವೇಷ ರಾಜಕಾರಣ, ಬಡವರ ವಿರೋಧಿ ಕ್ರಮ ತಾನೆ. ಭಾರತದಲ್ಲಿರುವುದು ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವ. ಸರ್ವಾಧಿಕಾರಿ ವ್ಯವಸ್ಥೆಯಲ್ಲ. ಕೇಂದ್ರ ಸರ್ಕಾರವೇನು ತಾನೇ ಅಕ್ಕಿ ಬೆಳೆಯುತ್ತಾ? ಅಕ್ಕಿ ಬೆಳೆಯುವ ರಾಜ್ಯಗಳಿಂದ ಖರೀದಿಸಲ್ವಾ? ನಾವು ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ ಎಂದು ಪ್ರಧಾನಿ ಮೋದಿಯವರು ಯಾವಾಗಲೂ ಹೇಳುತ್ತಾರೆ. ಇದೇನಾ ಇವರ ಸಹಕಾರಿ ಒಕ್ಕೂಟ ವ್ಯವಸ್ಥೆ? ಎಂದು ಪ್ರಶ್ನಿಸಿದರು.
ಕೇಂದ್ರದವರು ಮಾತೆತ್ತಿದರೆ ಆಹಾರ ಭದ್ರತಾ ಕಾಯ್ದೆ ಎನ್ನುವ ಕೇಂದ್ರ ಸರ್ಕಾರ, ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಯು.ಪಿ.ಎ ಸರ್ಕಾರದಲ್ಲಿ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಎನ್ನುವುದನ್ನು ಮರೆಯುತ್ತಿದೆ ಎಂದರು. ಈ ಕಾಯ್ದೆ ಬಂದಿದ್ದರಿಂದ ಕೇಂದ್ರದಿಂದ 5 ಕೆ.ಜಿ ಅಕ್ಕಿ ಕೊಡುವುದು ಮುಂದುವರೆದಿದೆ. ನಾವು ರಾಜ್ಯ ಸರ್ಕಾರದಿಂದ 10 ಕೆ.ಜಿ. ಅಕ್ಕಿ ಕೊಡುವುದಾಗಿ ಘೋಷಿಸಿದ್ದೇವೆ. ಹಾಗಾಗಿ ಹೆಚ್ಚುವರಿ ಅಕ್ಕಿ ಖರೀದಿಗೆ ಕೋರಿದ್ದೇವೆ. ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್‌ಗಢ ರಾಜ್ಯಗಳೊಂದಿಗೂ ಚರ್ಚಿಸಿದ್ದೇವೆ. ಸ್ವಲ್ಪ ವಿಳಂಬವಾಗಬಹುದು ಅಷ್ಟೇ ಎಲ್ಲಾದರೂ ಖರೀದಿಸಿ ತಂದು ಕೊಟ್ಟೇ ಕೊಡುತ್ತೇವೆ ಎಂದರು.
