ಮಾ.17ರ ಪುನೀತ್ ಜನ್ಮದಿನ 'ಸ್ಫೂರ್ತಿ ದಿನ'ವಾಗಿ ಆಚರಣೆ: ಸಿದ್ಧರಾಮಯ್ಯ
‘ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನ ಮಾ.17ನ್ನು ‘ಸ್ಫೂರ್ತಿ ದಿನ’ ವಾಗಿ ಆಚರಿಸುವ ನಿರ್ಧಾರವನ್ನು ಹಿಂದಿನ ಸರ್ಕಾರ ಕೈಗೊಳ್ಳದಿದ್ದರೂ ನಾವು ಮಾಡುತ್ತೇವೆ. ಜೊತೆಗೆ ಅಶ್ವಿನಿ ರಾಜ್ ಕುಮಾರ್ ಅವರ ಮನವಿಯಂತೆ ಡಾ ರಾಜ್‌ಕುಮಾರ್ ಸ್ಮಾರಕ ಪುನರಾಭಿವೃದ್ಧಿಗೆ ಸರ್ಕಾರ ಬದ್ಧವಾಗಿರುತ್ತದೆ’ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ಅ.17): ‘ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನ ಮಾ.17ನ್ನು ‘ಸ್ಫೂರ್ತಿ ದಿನ’ ವಾಗಿ ಆಚರಿಸುವ ನಿರ್ಧಾರವನ್ನು ಹಿಂದಿನ ಸರ್ಕಾರ ಕೈಗೊಳ್ಳದಿದ್ದರೂ ನಾವು ಮಾಡುತ್ತೇವೆ. ಜೊತೆಗೆ ಅಶ್ವಿನಿ ರಾಜ್ ಕುಮಾರ್ ಅವರ ಮನವಿಯಂತೆ ಡಾ ರಾಜ್‌ಕುಮಾರ್ ಸ್ಮಾರಕ ಪುನರಾಭಿವೃದ್ಧಿಗೆ ಸರ್ಕಾರ ಬದ್ಧವಾಗಿರುತ್ತದೆ’ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಪುನೀತ್ ರಾಜ್‌ಕುಮಾರ್ ಡಿಜಿಟಲ್ ಪುತ್ಥಳಿಗಳ ಅನಾವರಣ ಮಾಡಿ ಸಿಎಂ ಮಾತನಾಡಿದರು.
‘ನನಗೆ ಡಾ ರಾಜ್ ಕುಟುಂಬದ ಜೊತೆಗೆ ಬಹಳ ಹಿಂದಿನಿಂದಲೂ ಒಡನಾಟ ಇತ್ತು. ಪುನೀತ್ ರಾಜ್‌ಕುಮಾರ್ ನನಗೆ ನೀಡುತ್ತಿದ್ದಷ್ಟು ಗೌರವವನ್ನು ನನ್ನ ಮನೆಯವರೂ ನೀಡುತ್ತಿರಲಿಲ್ಲ. ಡಾ ರಾಜ್ ಕುಟುಂಬದವರು, ಪುನೀತ್ ಅವರು ಎಂದೂ ಯಾರಿಗೂ ಕೆಟ್ಟದನ್ನು ಬಯಸಿಲ್ಲ, ಕೆಟ್ಟ ಪದ ಬಳಸಿಲ್ಲ. ಜನಪ್ರಿಯತೆಯಲ್ಲಿ ಅವರು ಮೇರು ನಟ ಡಾ. ರಾಜ್‌ಕುಮಾರ್ ಅವರಿಗಿಂತಲೂ ಒಂದು ಹಜ್ಜೆ ಮುಂದಿದ್ದರು.
ಅವರು ತೀರಿಕೊಂಡಾಗ ಮನೆಮಂದಿಯನ್ನೇ ಕಳೆದುಕೊಂಡಷ್ಟು ದುಃಖದಲ್ಲಿ ಕರ್ನಾಟಕದ ಜನತೆ ಇದ್ದರು. ಆ ಮಟ್ಟಿನ ಗೌರವ, ಅಭಿಮಾನ ಬೇರೆ ಯಾವ ನಟನಿಗೂ ಸಿಕ್ಕಿದ್ದನ್ನು ನಾನು ಕಂಡಿಲ್ಲ ಎಂದರು. ಇದಕ್ಕೂ ಮೊದಲು ಪುನೀತ್ ಪುತ್ಥಳಿಗೆ ಮುತ್ತು ನೀಡಿ ಮಾತಿಗಾರಂಭಿಸಿದ ರಾಘವೇಂದ್ರ ರಾಜ್‌ಕುಮಾರ್, ‘ಅಪ್ಪು ಬದುಕಿದ್ದಾಗ ತನ್ನ ಮನೆಮಂದಿ ಜೊತೆಗೆ ಇದ್ದ. ಈಗ ಇಡೀ ಕರ್ನಾಟಕದ ಮನೆಮಂದಿ ಜೊತೆಗೆ ಇದ್ದಾನೆ. ಈ ಪುತ್ಥಳಿಯನ್ನು ನೋಡುತ್ತಿದ್ದರೆ ನನ್ನ ತಮ್ಮನನ್ನು ಜೀವಂತವಾಗಿ ಮನೆಗೆ ಕರ್ಕೊಂಡು ಹೋಗ್ತಿದ್ದೀನಿ ಅನ್ನುವ ಭಾವ ಬರುತ್ತದೆ.
ಬದುಕಿನ ಸಂದೇಶವುಳ್ಳ ಚಲನಚಿತ್ರಗಳಿಂದ ಸಮಾಜಕ್ಕೆ ಉಪಯುಕ್ತ: ಸಿಎಂ ಸಿದ್ದರಾಮಯ್ಯ
ಹಿಂದಿನ ಸರ್ಕಾರದವರು ಪುನೀತ್ ಜನ್ಮದಿನ ಮಾ.17ನ್ನು ‘ಸ್ಫೂರ್ತಿ ದಿನ’ವಾಗಿ ಘೋಷಣೆ ಮಾಡಿದ್ದರು. ಆದರೆ ಆ ಹೊತ್ತಿಗೆ ಚುನಾವಣೆ ಬಂದ ಕಾರಣ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗಿನ ಸರ್ಕಾರ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇದನ್ನು ಕಾರ್ಯರೂಪಕ್ಕೆ ತರಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ಸಿಎಂ ಸಮ್ಮತಿಸಿದರು. ಅಶ್ವಿನಿ ಪುನೀತ್ ರಾಜ್‌ಕುಮಾರ್, ಸಚಿವ ಭೈರತಿ ಸುರೇಶ್, ಪುನೀತ್ ಪುತ್ರಿ ವಂದಿತಾ, ಡಾ ರಾಜ್ ಕುಟುಂಬಸ್ಥರು, ಚಿತ್ರರಂಗದ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.