ಯಾವುದೇ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಯಾರೂ ದಡ್ಡರಾಗುವುದಿಲ್ಲ. ಅವಕಾಶ ಸಿಕ್ಕರೆ ಯಾವ ಸಮುದಾಯದ ಮಕ್ಕಳಾದರೂ ಬುದ್ಧಿವಂತರಾಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

 ಬೆಂಗಳೂರು (ಏ.19) : ಯಾವುದೇ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಯಾರೂ ದಡ್ಡರಾಗುವುದಿಲ್ಲ. ಅವಕಾಶ ಸಿಕ್ಕರೆ ಯಾವ ಸಮುದಾಯದ ಮಕ್ಕಳಾದರೂ ಬುದ್ಧಿವಂತರಾಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಮಾಚಿದೇವ ಗುರುಪೀಠ ವಿಶ್ವಸ್ತ ಸಮಿತಿ ಟ್ರಸ್ಟ್‌ ಕೆಂಗೇರಿಯಲ್ಲಿ ಹೊಸದಾಗಿ ನಿರ್ಮಿಸಿರುವ ಕಲ್ಯಾಣ ಮಂಟಪ ‘ಕಲಿದೇವ ಕನ್ವೆನ್ಷನ್ ಹಾಲ್’ಅನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ನಮ್ಮ ಕುಟುಂಬದಲ್ಲೇ ನಾವು ಆರು ಜನ ಮಕ್ಕಳಲ್ಲಿ ನಾನೊಬ್ಬನೇ ಓದಿದ್ದು. ಓದಿ ಅವಕಾಶ ಸಿಕ್ಕಿದ್ದರಿಂದ ನಾನು ಮುಖ್ಯಮಂತ್ರಿ ಆಗಲು ಸಾಧ್ಯವಾಯಿತು. ಹಾಗಾಗಿ ಯಾವುದೇ ಕಾರಣಕ್ಕೂ ಮಡಿವಾಳ ಸಮುದಾಯದವರು ನಿಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ. 

ನಿಮ್ಮ ಸಮುದಾಯದ ಮಕ್ಕಳಿಗಾಗಿ ಉದ್ದೇಶಿತ ಹಾಸ್ಟೆಲ್‌ ನಿರ್ಮಾಣಕ್ಕೆ ಸರ್ಕಾರದಿಂದ ಸೂಕ್ತ ಅನುದಾನ ಒದಗಿಸಲಾಗುವುದು. ಮಡಿವಾಳ ಸಮುದಾಯದ ಪ್ರಗತಿಗೆ ಕಾಂಗ್ರೆಸ್‌ ಸರ್ಕಾರ ಬದ್ಧವಾಗಿದೆ. ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುವ ಜೊತೆ ಜೊತೆಗೆ ಈ ಸಮುದಾಯವು ತಾವೂ ಕೂಡ ಮುಖ್ಯವಾಹಿನಿಗೆ ಬರಲು ಸಂಘಟಿತರಾಗಿ ಹೆಚ್ಚೆಚ್ಚು ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

12ನೇ ಶತಮಾನದಲ್ಲೇ ಮಡಿವಾಳ ಮಾಚಿ ದೇವರು ಬಸವಣ್ಣನವರ ಜೊತೆ ಸೇರಿ ಸಮಾಜದ ಬದಲಾವಣೆಗೆ ಪ್ರಯತ್ನ ಮಾಡಿದರು. ಬಸವಾದಿ ಶರಣರು ಜಾತಿಮುಕ್ತ ಮನುಷ್ಯ ಸಮಾಜ, ಸಮಸಮಾಜ ನಿರ್ಮಾಣಕ್ಕೆ ಹೋರಾಡಿದ್ದರು. ಬಸವಣ್ಣ ಎಲ್ಲ ಸಮುದಾಯದವರನ್ನೂ ಒಟ್ಟುಗೂಡಿಸಿಕೊಂಡು ಅನುಭವ ಮಂಟಪ ಕಟ್ಟಿದರು. ಎಲ್ಲರೂ ಸೇರಿ ಸಮಾಜದ ನ್ಯೂನತೆಗಳಿಗೆ ಪರಿಹಾರ ಕಂಡುಹಿಡಿಯುವ ಚರ್ಚೆ ಮಾಡಿದರು. ಜಾತಿ ಮುಕ್ತ ಸಮಾಜ, ಅಸಮಾನತೆ ಅಳಿಸುವುದೇ ಅವರ ಗುರಿಯಾಗಿತ್ತು ಎಂದರು.

ಇದನ್ನೂ ಓದಿ: ನೇಹಾ ಹಿರೇಮಠಗೆ ನ್ಯಾಯ ಯಾವಾಗ? ಸಿಎಂ ಸಿದ್ದರಾಮಯ್ಯಗೆ ಪ್ರಮೋದ್ ಮುತಾಲಿಕ್ ಪ್ರಶ್ನೆ

ಮಡಿವಾಳ ಸಮುದಾಯ ತೀವ್ರ ಹಿಂದುಳಿದಿರುವ ಹಿನ್ನೆಲೆಯಲ್ಲಿ ತಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಬೇಡಿಕೆ ಇಡುತಿದ್ದೀರಿ. ಈ ಸಮಾಜದಲ್ಲಿ ಒಬ್ಬರೂ ಶಾಸಕರಿಲ್ಲ, ಒಬ್ಬರು ಮಾತ್ರ ಐಎಎಸ್‌ ಅಧಿಕಾರಿ ಇದ್ದಾರೆ. ಮಡಿವಾಳ ಸಮಾಜ ಇಷ್ಟು ಹಿಂದುಳಿಯಲು ಮನುಸ್ಮೃತಿ ಕಾರಣ. ಈ ಅಸಮಾನತೆ ಕಾರಣಕ್ಕೇ ಮನುಸ್ಮೃತಿಯನ್ನು ಅಂಬೇಡ್ಕರ್ ಅವರು ಬೆಂಕಿ ಹಾಕಿ ಸುಟ್ಟರು. ಈ ಮನುಸ್ಮೃತಿಯೇ ಜಾತಿ ವ್ಯವಸ್ಥೆಯ ಮೂಲ. ಹಾಗಾಗಿ ಸಮಾನತೆ ಸಾರುವ ಸಂವಿಧಾನವನ್ನು ವಿರೋಧಿಸುವವರನ್ನು ಹತ್ತಿರ ಸೇರಿಸಬೇಡಿ. ಸಂವಿಧಾನ ವಿರೋಧಿಗಳ ಜೊತೆ ಕೈ ಜೋಡಿಸುವುದು ಮಡಿವಾಳ ಮಾಚಿದೇವರಿಗೆ ಮಾಡುವ ಅವಮಾನ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್‌.ಟಿ.ಸೋಮಶೇಖರ್‌, ವಿಧಾನ ಪರಿಷತ್‌ನ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ಮಡಿವಾಳ ಸಮುದಾಯದ ಅಧ್ಯಕ್ಷ ನಂಜಪ್ಪ, ಟ್ರಸ್ಟ್‌ ಅಧ್ಯಕ್ಷ ರವಿಕುಮಾರ್‌ ಹಾಗೂ ಸಮುದಾಯದ ಮಠಾಧೀಶರು ಇದ್ದರು.

ಮಡಿವಾಳರ ಬೇಡಿಕೆಗಳಿಗೆ ಸ್ಪಂದಿಸಲು ಬದ್ಧ: ಡಿಸಿಎಂ

ಮಡಿವಾಳ ಸಮುದಾಯದ ಎಲ್ಲ ಬೇಡಿಕೆಗಳ ಈಡೇರಿಕೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ತಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಪ್ರಮುಖ ಬೇಡಿಕೆ ಬಗ್ಗೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯವರು ಹಾಗೂ ನಾವು ಚರ್ಚೆ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇದೇ ವೇಳೆ ಭರವಸೆ ನೀಡಿದರು.

ಇದನ್ನೂ ಓದಿ: 1500 ಇದ್ದ ವಿದ್ಯಾಸಿರಿ ವಿದ್ಯಾರ್ಥಿವೇತನ ₹2000ಕ್ಕೆ ಹೆಚ್ಚಳ: ಸಿಎಂ ಭರವಸೆ

ಸಮುದಾಯದ ಜನ ನೂರಕ್ಕೆ 99ರಷ್ಟು ಭಾಗ ನಮಗೆ ಬೆಂಬಲವಾಗಿ ನಿಂತಿದ್ದಾರೆ. ಏನಾದರೂ ಮಾಡಿ ವಿಧಾನಸಭೆಯಲ್ಲಿ ನಿಮಗೆ ಒಂದು ಸೀಟು ಅವಕಾಶ ಮಾಡಿಕೊಡಬೇಕು ಎಂಬ ಆಲೋಚನೆ ನಮ್ಮಲ್ಲಿತ್ತು. ಆದರೆ ಕಾರಣಾಂತರಗಳಿಂದ ಸಮೀಕ್ಷೆ ವರದಿ ಆಧರಿಸಿ ತೀರ್ಮಾನ ಮಾಡಬೇಕಾಯಿತು. 17 ರಾಜ್ಯಗಳಲ್ಲಿ ಈ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ನಮ್ಮ ರಾಜ್ಯದಲ್ಲೂ ಸೇರಿಸಬೇಕು ಎಂದು ಕೇಳಿದ್ದೀರಿ. ಮುಖ್ಯಮಂತ್ರಿಗಳು ಹಾಗೂ ನಾವು ಮುಂದಿನ ದಿನಗಳಲ್ಲಿ ಈ ವಿಚಾರ ಚರ್ಚೆ ಮಾಡುತ್ತೇವೆ. ಈ ಸಮುದಾಯದಿಂದ ಕೆಲವೇ ಕೆಲವರು ಮಾತ್ರ ಅಧಿಕಾರಿಗಳಿದ್ದಾರೆ. ನಿಮ್ಮಲ್ಲಿ ಬಹುತೇಕರು ಕುಲಕಸುಬು ಬಿಟ್ಟಿಲ್ಲ. ನಮ್ಮ ಸರ್ಕಾರ ನಿಮ್ಮ ಬೇಡಿಕೆಗೆ ಸ್ಪಂದಿಸಲು ಬದ್ಧವಾಗಿದೆ ಎಂದರು.