Asianet Suvarna News Asianet Suvarna News

ವಾಲ್ಮೀಕಿ ನಿಗಮ ಹಗರಣ: ವಿಪಕ್ಷ ಗದ್ದಲ, ಉತ್ತರ ಓದಲಾಗದೆ ಮಂಡಿಸಿದ ಸಿಎಂ

ಮುಖ್ಯಮಂತ್ರಿಗಳು ಭಾಷಣದ ಬದಲು ಲಿಖಿತ ಉತ್ತರ ಓದತೊಡಗುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಸಭಾಪತಿಗಳ ಮುಂದೆ ಬಂದು ಸರ್ಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಇದರ ನಡುವೆ ಕೆಲ ನಿಮಿಷ ಲಿಖಿತ ಉತ್ತರ ಓದಿದರು. ಕೊನೆಗೆ ಸಭಾಪತಿಗಳು ದಿಢೀರೆಂದು ಉತ್ತರವನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ಹೇಳಿ ಸದನವನ್ನು ಮುಂದೂಡಿದರು.

cm  siddaramaiah presented the written speech in the session grg
Author
First Published Jul 23, 2024, 8:07 AM IST | Last Updated Jul 23, 2024, 10:54 AM IST

ವಿಧಾನ ಪರಿಷತ್(ಜು.23):  ಪ್ರತಿಪಕ್ಷಗಳ ಪ್ರತಿಭಟನೆ, ಘೋಷಣೆ, ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಪದೇ ಪದೇ ವಾಗ್ವಾದದ ಪರಿಣಾಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮಗಳ ಕುರಿತು ನಡೆದ ಚರ್ಚೆಗೆ ಉತ್ತರಿಸಲು ಆಗದೇ, ಲಿಖಿತ ಭಾಷಣವನ್ನೂ ಸಹ ಓದಲು ಆಗದೇ ಕೊನೆಗೆ ಲಿಖಿತ ಭಾಷಣವನ್ನು ಸದನದಲ್ಲಿ ಮಂಡಿಸಿದ ಘಟನೆ ನಡೆಯಿತು. ಪ್ರಶೋತ್ತರ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಕುರಿತು ನಡೆದ ಚರ್ಚೆಗೆ ಉತ್ತರ ನೀಡಲು ಆರಂಭಿಸಿದರು.

ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ನೀಡಿದ್ದೇವೆ ಎಂದು ಅಂಕಿ-ಅಂಶಗಳ ಸಹಿತ ವಿವರಿಸುವಾಗ ಬಿಜೆ ಪಿಯ ಎನ್.ರವಿಕುಮಾರ್ ಅವರುಹಲವಾರು ಬಾರಿ ಎದ್ದು ನಿಂತು ಮಾತನಾಡತೊಡಗಿದರು. ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಆಹಮದ್ ಅವರು, ರವಿಕುಮಾ‌ರ್ ಅವರನ್ನು ಸದನದಿಂದ ಹೊರಗೆ ಹಾಕಿ ಎಂದರು. ಈ ಮಾತಿನಿಂದ ಕೆರಳಿದ ಪ್ರತಿಪಕ್ಷ ಸದಸ್ಯರು, ಸದನದಿಂದ ಹೊರಗೆ ಹಾಕುವಂತೆ ಹೇಳಲು ನೀವ್ಯಾರು ಎಂದು ವಾಗ್ವಾದಕ್ಕೆ ಇಳಿದರು.

ವಾಲ್ಮೀಕಿ ನಿಗಮ ಹಣ ದುರ್ಬಳಕೆ ಪ್ರಕರಣ: ಸಿಎಂ ಹೆಸರೇಳಲು ಒತ್ತಡ, ಇ.ಡಿ. ಅಧಿಕಾರಿಗಳ ವಿರುದ್ಧವೇ ಕೇಸ್‌!

ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿಗಳ ಉತ್ತರದ ನಂತರ ಎಲ್ಲರಿಗೂ ಪ್ರಶ್ನೆ ಕೇಳಲು ಅವಕಾಶ ಕೊಡುವುದಾಗಿ ಹತ್ತಾರು ಬಾರಿ ಹೇಳಿದರು. ನಂತರ ಮಾತು ಸಿದ್ದರಾಮಯ್ಯ ಮುಂದುವರಿಸುತ್ತಿದ್ದಂತೆ ಬಿಜೆಪಿಯ ಎನ್. ರವಿಕುಮಾರ್ ಪುನಃ ಮಾತನಾಡಲು ಅವಕಾಶ ನೀಡುವಂತೆ ಕೋರತೊಡಗಿದರು. ಇದರಿಂದ ಅಸಮಾಧಾನಗೊಂಡ ಮುಖ್ಯಮಂತ್ರಿಗಳು, ಪದೇ ಪದೆ ಈ ರೀತಿ ಅಡ್ಡಿ ಪಡಿಸಿದರೆ ನಿಮಗೆ (ಸಭಾಪತಿ) ಅಧಿಕಾರವಿದೆ. ಸಚೇತಕರು ಮೂವ್ ಮಾಡಿದರೆ ಅಮಾನತು ಮಾಡಬಹುದು, ನಮ್ಮ ಕಡೆಯವರು ಏಳಬೇಡಿ, ವಿರೋಧಪಕ್ಷದವರು ಎದ್ದರೆ ಕೂರಬೇಡಿ, ತಾಳ್ಮೆಗೂ ಒಂದು ಮಿತಿ ಇದೆ ಎಂದು ಕೊಂಚ ಸಿಟ್ಟಿನಿಂದಲೇ ಹೇಳಿದರು.

ಬ್ಲಾಕ್ ಮೇಲ್ ತಂತ್ರಕ್ಕೆ ಮುಂದಾದ ಸಿಎಂ ಸಿದ್ದರಾಮಯ್ಯ: ಶಾಸಕ ಸುನಿಲ್ ಕುಮಾರ್ ಆರೋಪ

ಸಭಾಪತಿಯ ಅನುಮತಿಯ ಮೇರೆಗೆ ಬಿಜೆಪಿಯ ಸಿ.ಟಿ. ರವಿ ಮಾತನಾಡಿ ನಮ್ಮ ಸಂಶಯ, ಪ್ರಶ್ನೆಗಳಿಗೆ ಅವರು ಉತ್ತರ ಕೊಡಬೇಕು, ಅದು ಅವರ ಕರ್ತವ್ಯ, ಸುಮ್ಮನೇ ಏನೂ ಹೇಳಲು ಆಗುವುದಿಲ್ಲ. ಪ್ರಜಾಪ್ರಭುತ್ವ ಜಬರ್‌ದಸ್ತಿ ಮೇಲೆ ನಡೆಯಲ್ಲ, ಮಾತನಾಡಲು ಅನುಮತಿ ಕೊಟ್ಟ ಮೇಲೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದರು. ಈ ಮಾತಿನಿಂದ ಪುನಃ ಉಭಯ ಕಡೆಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ಸಭಾಪತಿ ಹೊರಟ್ಟಿಸಿಟ್ಟಿನಿಂದ ಇದೇ ರೀತಿ ಸದಸ್ಯರು ನಡೆದುಕೊಂಡರೆ ಸದನದಿಂದ ಹೊರಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಮಧ್ಯೆ, ಮುಖ್ಯಮಂತ್ರಿಗಳು ಭಾಷಣದ ಬದಲು ಲಿಖಿತ ಉತ್ತರ ಓದತೊಡಗುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಸಭಾಪತಿಗಳ ಮುಂದೆ ಬಂದು ಸರ್ಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಇದರ ನಡುವೆ ಕೆಲ ನಿಮಿಷ ಲಿಖಿತ ಉತ್ತರ ಓದಿದರು. ಕೊನೆಗೆ ಸಭಾಪತಿಗಳು ದಿಢೀರೆಂದು ಉತ್ತರವನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ಹೇಳಿ ಸದನವನ್ನು ಮುಂದೂಡಿದರು.

Latest Videos
Follow Us:
Download App:
  • android
  • ios