ಮುಖ್ಯಮಂತ್ರಿ ಸಿದ್ದರಾಮಯ್ಯರ ಜತೆಗೆ ನಿಂತಿರುವ ಈ ಅಜ್ಜಿ ಅವರೆ ಅಲ್ವಾ? ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆ ಬಿಡುಗಡೆಯಾದಾಗ ಈ ಅಜ್ಜಿ ರಾಜ್ಯದ ಗಮನ ಸೆಳೆದಿದ್ದಳು.
ಬೆಂಗಳೂರು (ಸೆ.3): ಕಾಂಗ್ರೆಸ್ ನ 5 ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸುವ ಶಕ್ತಿಯೋಜನೆ ಜಾರಿ ಮಾಡಿದಾಗ ರಾಜ್ಯಾದ್ಯಂತ ಮಹಿಳೆಯರು ಖುಷಿಪಟ್ಟರು. ಅದರಲ್ಲೂ ಉತ್ತರ ಕರ್ನಾಟಕದ ಹಳ್ಳಿಗಳಿಂದ ಮಹಿಳೆಯರು ತಂಡೋಪತಂಡವಾಗಿ ತೀರ್ಥಕ್ಷೇತ್ರಗಳಿಗೆ ಹೊರಟುನಿಂತರು.ಇವೆಲ್ಲದರ ನಡುವೆ ಒಂದು ದೃಶ್ಯ ರಾಜ್ಯದ ಗಮನ ಸೆಳೆಯಿತು. ವಯಸ್ಸಾದ ಅಜ್ಜಿಯೊಬ್ಬರು ಮೊದಲ ಸಲ ಉಚಿತ ಪ್ರಯಾಣ ಮಾಡುವಾಗ ಬಸ್ ಬಾಗಿಲಿಗೆ ತಲೆಬಾಗಿ ನಮಸ್ಕರಿಸಿ ಹತ್ತುವ ದೃಶ್ಯ. ಸಾಮಾಜಿಕ ಜಾಲತಾಣದಲ್ಲಂತೂ ಈ ದೃಶ್ಯ ಭಾರೀ ವೈರಲ್ ಆಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯರ ಜತೆಗೆ ನಿಂತಿರುವ ಈ ಅಜ್ಜಿ ಅವರೆ ಅಲ್ವಾ? ಹೌದು, ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ಸಂಗವ್ವ ಇವರೇ. ಇಂದು ಖಾಸಗಿ ಚಾನೆಲ್ಲೊಂದರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಭಾಗಿಯಾಗಿದ್ದ ವೇಳೆ ಸಂಗೊಳ್ಳಿ ಸಂಗವ್ವ ಭೇಟಿಯಾಗುವ ಅವಕಾಶ ಸಿಕ್ಕಿದೆ. ಸಂಗವ್ವಳನ್ನು ಭೇಟಿಯಾಗಿದ್ದಕ್ಕೆ ಮುಖ್ಯಮಂತ್ರಿಗಳು ಸಂತಸಪಟ್ಟಿದ್ದಾರೆ. ಸಂಗೊಳ್ಳಿಯ ಸಂಗವ್ವಳನ್ನು ಭೇಟಿ ಮಾಡಿದಾಗ, ನನ್ನಲ್ಲಿ ಅಚ್ಚರಿ ಮತ್ತು ಖುಷಿಯ ಜೊತೆಗೆ ಸಾರ್ಥಕ್ಯದ ಭಾವ ಮೂಡಿಸಿತು ಎಂದು ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಮಹಿಳೆಯರ ಸಬಲೀಕರಣಕ್ಕೆ ನಾವು ಬೆಂಬಲವಾಗಿ ನಿಲ್ಲಬೇಕು ಎನ್ನುವ ಕಾಳಜಿಯಿಂದ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಮೊದಲ ದಿನವೇ ಸಂಗವ್ವ ಅವರಿಂದ ದೊರೆತ ಪ್ರತಿಕ್ರಿಯೆ ಕಂಡು ನಮ್ಮ ಯೋಜನೆ ನೂರಕ್ಕೆ ನೂರರಷ್ಟು ಯಶಸ್ವಿಯಾಗಲಿದೆ ಎಂಬ ಭರವಸೆ ನನ್ನಲ್ಲಿ ಮೂಡಿತ್ತು. ಈ ದಿನ ಇಂಥದ್ದೊಂದು ಭೇಟಿಯ ಅವಕಾಶ ಕಲ್ಪಿಸಿದ ಖಾಸಗಿ ವಾಹಿನಿಗೆ ಧನ್ಯವಾದ ತಿಳಿಸಿದ್ದರಾರೆ.
