Asianet Suvarna News Asianet Suvarna News

ಉನ್ನತ ಶಿಕ್ಷಣ ಬ್ಯಾಕ್‌ಲಾಗ್‌ ಹುದ್ದೆ ಭರ್ತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಉನ್ನತ ಶಿಕ್ಷಣ ಇಲಾಖೆಯಲ್ಲಿನ ಕಲ್ಯಾಣ ಕರ್ನಾಟಕ ಮತ್ತು ಬ್ಯಾಕ್‌ಲಾಗ್‌ ಹುದ್ದೆಗಳನ್ನು ಮೊದಲು ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಹಣಕಾಸು ಹಾಗೂ ಉನ್ನತ ಶಿಕ್ಷಣ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

CM siddaramaiah instruction for filling higher education backlog posts rav
Author
First Published Oct 22, 2023, 6:26 AM IST

ಬೆಂಗಳೂರು (ಅ.22): ಉನ್ನತ ಶಿಕ್ಷಣ ಇಲಾಖೆಯಲ್ಲಿನ ಕಲ್ಯಾಣ ಕರ್ನಾಟಕ ಮತ್ತು ಬ್ಯಾಕ್‌ಲಾಗ್‌ ಹುದ್ದೆಗಳನ್ನು ಮೊದಲು ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಹಣಕಾಸು ಹಾಗೂ ಉನ್ನತ ಶಿಕ್ಷಣ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ಶನಿವಾರ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಶಿಕ್ಷಣ ಕ್ಷೇತ್ರದ ಗುಣಮಟ್ಟ ಕಾಯ್ದುಕೊಳ್ಳಲು ಬೋಧಕ ಸಿಬ್ಬಂದಿ ನೇಮಕ ಅತಿ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಕುರಿತು ಆದ್ಯತೆಗಳನ್ನು ಗುರುತಿಸಿ ಕ್ರಮ ವಹಿಸಬೇಕು. ವಿವಿಧ ವಿಶ್ವವಿದ್ಯಾಲಯಗಳ ಕಾರ್ಯಚಟುವಟಿಕೆಗಳು ಭಿನ್ನ ಅವಧಿಗೆ ನಡೆಯುವುದರಿಂದ ಅಭ್ಯರ್ಥಿಗಳಿಗೆ ಅನಾನುಕೂಲವಾಗುತ್ತಿದೆ. ಆದ್ದರಿಂದ ಏಕರೂಪದ ವೇಳಾಪಟ್ಟಿ ಜಾರಿಗೊಳಿಸಲು ಸೂಚಿಸಿದರು.

ಡಿಕೆಶಿ-ಜಾರಕಿಹೊಳಿ ನಡುವೆ ವೈಯಕ್ತಿಕವಾಗಿ ವೈಮನಸ್ಸಿರಬಹುದು: ಮಧು ಬಂಗಾರಪ್ಪ

ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದಾಗ ಜೆಎನ್‌ಯುನಲ್ಲಿ ಪ್ರಾರಂಭಿಸಿದ್ದ ಕನ್ನಡ ಅಧ್ಯಯನ ಪೀಠದ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕು. ಮೈಸೂರು ಮಹಾರಾಣಿ ಆರ್ಟ್ಸ್‌ ಕಾಲೇಜು ಹಾಸ್ಟೆಲ್‌ ಆವರಣದಲ್ಲಿ 99 ಕೋಟಿ ರು. ಅಂದಾಜು ವೆಚ್ಚದಲ್ಲಿ ಆರ್ಟ್ಸ್‌ ಮತ್ತು ವಿಜ್ಞಾನ ಕಾಲೇಜಿನ ತಲಾ ಸಾವಿರ ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸುವ ಹಾಸ್ಟೆಲ್‌ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಉನ್ನತ ಶಿಕ್ಷಣ ಇಲಾಖೆಯ ಬಳಿ 47 ಕೋಟಿ ರು. ಲಭ್ಯವಿದ್ದು, ಮುಂದಿನ ವರ್ಷದ ಆಯವ್ಯಯದಲ್ಲಿ ಹೆಚ್ಚುವರಿ ಅನುದಾನ ಒದಗಿಸುವಂತೆ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಶಿಥಿಲಾವಸ್ಥೆಯಲ್ಲಿರುವ ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜಿನ ನವೀಕರಣ ಮತ್ತು ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಹೇಳಿದ ಅವರು, ದಸರಾ ಸಂದರ್ಭದಲ್ಲಿ ತಾವು ಸ್ವತಃ ಮಹಾರಾಣಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.

ಇಸ್ರೇಲ್- ಹಮಾಸ್‌ ಸಂಘರ್ಷ: ಭೂದಾಳಿಗೆ ಇಸ್ರೇಲ್‌ ಮೀನಮೇಷ ಏಕೆ?

ರಾಜ್ಯದ 16 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಸುಧಾರಣೆಗೆ ಆದ್ಯತೆ ನೀಡಬೇಕು. ಉನ್ನತ ಶಿಕ್ಷಣ ಇಲಾಖೆಯಡಿ ನಿರ್ಮಿಸಿರುವ 13169 ವಿದ್ಯಾರ್ಥಿಗಳ ಸಾಮರ್ಥ್ಯದ 224 ವಸತಿ ನಿಲಯಗಳನ್ನು ಹಸ್ತಾಂತರಿಸಿಕೊಳ್ಳಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಿದ್ಧವಿದ್ದು, ಇದನ್ನು ಸಚಿವ ಸಂಪುಟದ ಮುಂದೆ ತರುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳು ವಿಭಜನೆಯಾಗಿರುವುದರಿಂದ ಹಳೆಯ ಐದು ವಿಶ್ವವಿದ್ಯಾಲಯಗಳ ಪಿಂಚಣಿ ವಿತರಣೆ ಸಮಸ್ಯೆ ಕುರಿತು ಚರ್ಚಿಸಲಾಯಿತು.

Follow Us:
Download App:
  • android
  • ios