Asianet Suvarna News Asianet Suvarna News

ವರ್ಷಪೂರ್ತಿ ಸುವರ್ಣ ಸಂಭ್ರಮದಲ್ಲಿ ಕರ್ನಾಟಕ: ಕನ್ನಡ ಜ್ಯೋತಿ ರಥಯಾತ್ರೆಗೆ ಹಂಪಿಯಲ್ಲಿಂದು ಸಿಎಂ ಚಾಲನೆ

ಮೈಸೂರು ರಾಜ್ಯ ಕರ್ನಾಟಕವಾಗಿ ನಾಮಕರಣಗೊಂಡು 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ‘ಕರ್ನಾಟಕ ಸಂಭ್ರಮ-50’ ಹೆಸರಿನಲ್ಲಿ ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಸರ್ಕಾರ ಮುಂದಾಗಿದ್ದು, ಇದರ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಸಂಜೆ 5 ಗಂಟೆಗೆ ವಿಶ್ವವಿಖ್ಯಾತ ಹಂಪಿಯಲ್ಲಿ ಕರುನಾಡಿನ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ.

CM Siddaramaiah Inaugurate for Kannada Jyoti RathaYatra in Hampi gvd
Author
First Published Nov 2, 2023, 7:03 AM IST

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ (ನ.02): ಮೈಸೂರು ರಾಜ್ಯ ಕರ್ನಾಟಕವಾಗಿ ನಾಮಕರಣಗೊಂಡು 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ‘ಕರ್ನಾಟಕ ಸಂಭ್ರಮ-50’ ಹೆಸರಿನಲ್ಲಿ ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಸರ್ಕಾರ ಮುಂದಾಗಿದ್ದು, ಇದರ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಸಂಜೆ 5 ಗಂಟೆಗೆ ವಿಶ್ವವಿಖ್ಯಾತ ಹಂಪಿಯಲ್ಲಿ ಕರುನಾಡಿನ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಹಂಪಿಗೆ ಆಗಮಿಸಲಿರುವ ಸಿಎಂ, ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಗಂಗಾ ಜಲಾಭಿಷೇಕ ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ದೇವಾಲಯದ ಪ್ರಾಂಗಣದಲ್ಲಿರುವ ಭುವನೇಶ್ವರಿ ದೇಗುಲದಲ್ಲಿ ಪಂಚಾಮೃತ ಅಭಿಷೇಕ ಸಹಿತ ಪೂಜೆ ನೆರವೇರಿಸುವರು. ನಂತರ, ವಿರೂಪಾಕ್ಷೇಶ್ವರ ರಥಬೀದಿಯಲ್ಲಿ ಜನಪದ ಕಲಾತಂಡಗಳೊಂದಿಗೆ ಕಾಲ್ನಡಿಗೆಯಲ್ಲೇ ಬಸವಣ್ಣ ಮಂಟಪ ವೇದಿಕೆಯವರೆಗೆ ಸಾಗಲಿದ್ದಾರೆ. ಈ ವೇಳೆ, ರಥ ಬೀದಿಯಲ್ಲಿ ಜಾನಪದ ಕಲಾ ತಂಡಗಳ ಮೆರವಣಿಗೆ, ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ನಡೆಯಲಿದೆ. ಬಳಿಕ, ಬಸವಣ್ಣ ಮಂಟಪ ವೇದಿಕೆಯಲ್ಲಿ ಜ್ಯೋತಿ ರಥಯಾತ್ರೆಗೆ ಸಿಎಂ ಚಾಲನೆ ನೀಡಲಿದ್ದಾರೆ.

ಸರ್ಕಾರಿ ಶಾಲೆಗಳಿಗಿನ್ನು ಉಚಿತ ವಿದ್ಯುತ್‌, ನೀರು: ಸಿದ್ದರಾಮಯ್ಯ ಘೋಷಣೆ

ಹಂಪಿಯಿಂದ ಹೊಸಪೇಟೆ, ಕೊಪ್ಪಳ ಮಾರ್ಗವಾಗಿ ಜ್ಯೋತಿ ರಥಯಾತ್ರೆ ಗದಗಕ್ಕೆ ತೆರಳಲಿದ್ದು ಶುಕ್ರವಾರ ಅಲ್ಲಿ ಕಾರ್ಯಕ್ರಮ ನಡೆಯಲಿದೆ. ಸುವರ್ಣ ಸಂಭ್ರಮ ನೆನಪಿನಲ್ಲಿ 50 ಕನ್ನಡ ಪುಸ್ತಕಗಳ ಬಿಡುಗಡೆ, 50 ಮಹಿಳೆಯರಿಗೆ ಸನ್ಮಾನ ಸಮಾರಂಭ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಅಲ್ಲಿಂದ ನಾಡಿನಾದ್ಯಂತ ಈ ಜ್ಯೋತಿ ರಥಯಾತ್ರೆ ಸಂಚರಿಸಿ, 2024ರ ಅಕ್ಟೋಬರ್‌ 31ರ ವೇಳೆಗೆ ಬೆಂಗಳೂರು ತಲುಪಲಿದೆ.

ಕಾರ್ಯಕ್ರಮದಲ್ಲಿ ಕನ್ನಡ ಗೀತೆಗಳ ಗಾಯನ ನಡೆಯಲಿದೆ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆ ಮೊಳಗಲಿದೆ. ಬಳಿಕ ಸರ್ವ ಧರ್ಮಗಳ ಸಂದೇಶ ನಡೆಯಲಿದ್ದು, ಸಿದ್ದರಾಮಯ್ಯನ ಹುಂಡಿಯ ಕಲಾವಿದರಿಂದ ವೀರ ಮಕ್ಕಳ ಕುಣಿತ ನಡೆಯಲಿದೆ. ಸಾಧುಕೋಕಿಲ ಮತ್ತು ತಂಡದವರಿಂದ ರಸಮಂಜರಿ ಕೂಡ ನಡೆಯಲಿದೆ. ಶಾಲಾ- ಕಾಲೇಜುಗಳ 5000ಕ್ಕೂ ಅಧಿಕ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವೇದಿಕೆ ಮುಂಭಾಗ 5000ಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಂಪಿಯಲ್ಲಿ ಕನ್ನಡ ಸಂಭ್ರಮ ಮನೆ ಮಾಡಿದ್ದು, ಕನ್ನಡ ಧ್ವಜದ ಬಣ್ಣಗಳಿಂದ ಹಂಪಿ ಮಂಟಪಗಳನ್ನು ಶೃಂಗರಿಸಲಾಗಿದೆ.

ಡಿಕೆಶಿ, ಭೈರತಿ, ಪಾಟೀಲ್ ರಾಜೀನಾಮೆ ನೀಡಲಿ: ಕೆ.ಎಸ್.ಈಶ್ವರಪ್ಪ ಆಗ್ರಹ

ಅರಸು ಮಾದರಿ ನೆನಪು: 1973ರ ನವೆಂಬರ್‌ನಲ್ಲಿ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರನ್ನಿಟ್ಟು ಇಡೀ ಕನ್ನಡದ ಮನಸ್ಸುಗಳನ್ನು ಬೆಸೆಯುವ ಕಾರ್ಯ ಮಾಡಿದ್ದರು. ಅಂದು ಹಂಪಿ ನೆಲದಿಂದಲೇ ಜ್ಯೋತಿ ರಥಯಾತ್ರೆ ನೆರವೇರಿಸಲಾಗಿತ್ತು. ಆಗಿನ ಸಿಎಂ ದೇವರಾಜ ಅರಸು ಅವರು ಹಂಪಿಯ ಎದುರು ಬಸವಣ್ಣ ಮಂಟಪದ ಬಳಿಯ ದೀಪಸ್ತಂಭದಲ್ಲಿ ದೀಪ ಬೆಳಗಿದ್ದರು. ಈ ಜ್ಯೋತಿ ರಥಯಾತ್ರೆ ಹಂಪಿಯಿಂದ ಗದುಗಿನ ವೀರನಾರಾಯಣ ದೇವಾಲಯಕ್ಕೆ ತೆರಳಿತ್ತು. ಅಲ್ಲಿಂದ ಇಡೀ ನಾಡಿನಾದ್ಯಂತ ಸಂಚರಿಸಿ, ಬೆಂಗಳೂರು ತಲುಪಿತ್ತು. ಈಗ ಅಂದಿನ ಕಾರ್ಯಕ್ರಮ ನೆನಪಿಸುವ ಮಾದರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕರ್ನಾಟಕ ಸಂಭ್ರಮ-50ರ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

Follow Us:
Download App:
  • android
  • ios