ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ತನಿಖೆ ಹಾದಿ ತಪ್ಪಿಸಲು ಕುತಂತ್ರ, ಸಿದ್ದು, ಡಿಕೆಶಿ
ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣದಲ್ಲಿ ರಚನೆಯಾಗಿರುವ ಎಸ್‌ಐಟಿ ಕುರಿತು ದೇವರಾಜೇಗೌಡರ ಆರೋಪ ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದರೆ, ನನಗೂ ಪೆನ್ ಡ್ರೈವ್ ಬಿಡುಗಡೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ ಶಿವಕುಮಾರ್
ಬೆಂಗಳೂರು(ಮೇ.07): ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ದೇವರಾಜೇಗೌಡ ತಮ್ಮ ವಿರುದ್ಧ ಮಾಡಿರುವ ಆರೋಪವನ್ನು ಬಲವಾಗಿ ನಿರಾಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇದು ಅಪರಾಧಿಗಳನ್ನು ರಕ್ಷಿಸುವ ದುರುದ್ದೇಶದಿಂದ ತನಿಖೆಯ ಹಾದಿ ತಪ್ಪಿಸಲು ಮಾಡಿರುವ ಕುತಂತ್ರ ಎಂದು ತಿರುಗೇಟು ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣದಲ್ಲಿ ರಚನೆಯಾಗಿರುವ ಎಸ್‌ಐಟಿ ಕುರಿತು ದೇವರಾಜೇಗೌಡರ ಆರೋಪ ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದರೆ, ನನಗೂ ಪೆನ್ ಡ್ರೈವ್ ಬಿಡುಗಡೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಉಭಯ ನಾಯಕರು ಸೋಮವಾರ ರಾತ್ರಿ ಪ್ರತ್ಯೇಕವಾಗಿ ಪ್ರಕಟಣೆ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ವಿಡಿಯೋದಲ್ಲಿ 3 ಮಹಿಳಾ ಸರ್ಕಾರಿ ನೌಕರರು: ದೂರು ನೀಡಲು ಎಸ್‌ಐಟಿ ಸೂಚನೆ
ಸಿದ್ದರಾಮಯ್ಯ ಹೇಳಿಕೆ:
ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳ ಬಗ್ಗೆ ತನಿಖೆ ನಡೆಸಲು ರಚಿಸಲಾದ ವಿಶೇಷ ತನಿಖಾ ತಂಡ ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದೆ. ಇದರಲ್ಲಿ ರಾಜ್ಯ ಸರ್ಕಾರ ಒಂದು ಸೂಜಿಯ ಮೊನೆಯಷ್ಟೂ ಮಧ್ಯಪ್ರವೇಶ ಮಾಡುವುದಿಲ್ಲ.
ಎಸ್ ಐಟಿ ಎನ್ನುವುದು ರಿಮೋಟ್ ಕಂಟ್ರೋಲ್ ಮೇಲೆ ಕೆಲಸ ಮಾಡುತ್ತಿದೆ. ಅದು ಸರ್ಕಾರದ ರಬ್ಬರ್ ಸ್ಟಾಂಪ್ ಎಂಬ ಬಿಜೆಪಿ ನಾಯಕ ದೇವರಾಜೇಗೌಡರ ಆರೋಪ ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದೆ. ಇದು ಅಪರಾಧಿಗಳನ್ನು ರಕ್ಷಿಸುವ ದುರುದ್ದೇಶದಿಂದ ತನಿಖೆಯ ಹಾದಿ ತಪ್ಪಿಸಲು ಮಾಡಿರುವ ಕುತಂತ್ರವಾಗಿದೆ. ತಪ್ಪಿತಸ್ಥರು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ಈ ಉದ್ದೇಶದಿಂದಲೇ ಆಯ್ದ ದಕ್ಷ ಅಧಿಕಾರಿಗಳನ್ನು ಸೇರಿಸಿಕೊಂಡು ಎಸ್‌ಐಟಿ ರಚಿಸಲಾಗಿದೆ.
ಈ ಪ್ರಕರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹಾಳಾಗುತ್ತಿದೆ ಎಂದು ಬಿಜೆಪಿ ನಾಯಕರು ಈಗ ಗೋಳಾಡುವುದರಿಂದ ಏನೂ ಪ್ರಯೋಜನವಾಗದು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಡುವಾಗಲೇ ಇದನ್ನು ಯೋಚನೆ ಮಾಡಬೇಕಾಗಿತ್ತು.
ಡಿ.ಕೆ.ಶಿವಕುಮಾರ್ ಹೇಳಿಕೆ:
ನನಗೂ ಪೆನ್ ಡ್ರೈವ್ ಬಿಡುಗಡೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ-ಜೆಡಿಎಸ್ ಷಡ್ಯಂತ್ರದ ಭಾಗವಾಗಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಇದೇ ಬಿಜೆಪಿ ಮುಖಂಡ ದೇವರಾಜೇಗೌಡ ನಾಲ್ಕು ತಿಂಗಳ ಹಿಂದೆ ತಮ್ಮ ಬಳಿ ಪೆನ್ ಡ್ರೈವ್ ಇರುವುದಾಗಿ ಹಾಗೂ ಬಿಜೆಪಿ ನಾಯಕರ ಅನುಮತಿ ಪಡೆದು ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು.
ದೇವರಾಜೇಗೌಡ ಹಿಂದೆ ಬಿಜೆಪಿಯಿಂದ ವಿಧಾನಸಭೆ ಚುನಾವಣೆಗೆ ನಿಂತಿದ್ದವರು. ಆ ಪಕ್ಷದ ಸಕ್ರಿಯ ಕಾರ್ಯಕರ್ತ. ಈಗ ಪ್ರಜ್ವಲ್ ಪ್ರಕರಣದಲ್ಲಿ ಜೆಡಿಎಸ್ ಜತೆಗೆ ಅದರ ಮಿತ್ರ ಪಕ್ಷ ಬಿಜೆಪಿಗೂ ಬಹಳ ಮುಜುಗರ ಮತ್ತು ಮುಖಭಂಗ ಆಗಿದೆ. ಹೀಗಾಗಿ ಆಗಿರುವ ಡ್ಯಾಮೇಜ್ ನಿವಾರಿಸಿಕೊಳ್ಳಲು ಬಿಜೆಪಿ-ಜೆಡಿಎಸ್ ನಾಯಕರು ದೇವರಾಜೇಗೌಡನ ಮೂಲಕ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿಸಿದ್ದಾರೆ.
ಇದೇ ದೇವೇಗೌಜೇಗೌಡ ಪೆನ್‌ಡ್ರೈವ್ ಬಿಡುಗಡೆ ಮಾಡುವುದಾಗಿ ಹೇಳಿದ್ದ. ಇದೀಗ ಕೋತಿ ತಿಂದು ಮೇಕೆ ಬಾಯಿಗೆ ಒರೆಸಿತು ಎಂಬಂತೆ ದೇವರಾಜೇಗೌಡ ಮಾಡೋದೆಲ್ಲ ಮಾಡಿ ನನ್ನ ವಿರುದ್ಧ ಆಪಾದನೆ ಮಾಡುತ್ತಿದ್ದಾರೆ. ಇದರ ಹಿಂದೆ ಬಿಜೆಪಿ-ಜೆಡಿಎಸ್ ನಾಯಕರ ಷಡ್ಯಂತ್ರ ಇದೆ. ಪ್ರಕರಣದಲ್ಲಿ ಏನೆಲ್ಲಾ ಆಗಿದೆ. ಇವರು ಯಾಕೆ ಆ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂಬುದು ಜನರಿಗೆ ಈಗಾಗಲೇ ಅರ್ಥವಾಗಿದೆ. ನಾನೀಗ ಬೆಂಗಳೂರಿಂದ ಹೊರಗೆ ಇದ್ದೇನೆ. ಬಂದ ನಂತರ ಈ ಬಗ್ಗೆ ಮಾತಾಡುತ್ತೇನೆ.
Prajwal Revanna Sex Scandal: ಡಿಕೆ ಬ್ರದರ್ಸ್, ದೇವೇಗೌಡ ನಿವಾಸಕ್ಕೆ ಹೆಚ್ಚಿನ ಭದ್ರತೆ
ಬಿಜೆಪಿ ತನ್ನ ನಿಲುವು ಸ್ಪಷ್ಟಪಡಿಸಲಿ: ಸಿದ್ದು
ಜೆಡಿಎಸ್ ಜೊತೆ ಈಗಲೂ ರಾಜಕೀಯ ಮೈತ್ರಿ ಹೊಂದಿರುವ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಎಸ್‌ಐಟಿ ತನಿಖೆಯ ಯಶಸ್ಸು ಈಗ ಸಂಪೂರ್ಣವಾಗಿ ಕೇಂದ್ರ ಸರ್ಕಾರ ನೀಡುವ ಸಹಕಾರವನ್ನು ಅವಲಂಬಿಸಿದೆ. ವಿದೇಶದಲ್ಲಿದ್ದಾನೆ ಎಂದು ಹೇಳಲಾದ ಆರೋಪಿ ಪ್ರಜ್ವಲ್ ರೇವಣ್ಣನವರನ್ನು ಭಾರತಕ್ಕೆ ಕರೆತರಲು ಸಹಕಾರ ನೀಡಬೇಕಾಗಿರುವುದು ಕೇಂದ್ರ ಸರ್ಕಾರ ಎಂದಿದ್ದಾರೆ.
ಇದೇ ಬಿಜೆಪಿ ಮುಖಂಡ ದೇವರಾಜೇಗೌಡ ನಾಲ್ಕು ತಿಂಗಳ ಹಿಂದೆ ತಮ್ಮ ಬಳಿ ಪೆನ್ ಡ್ರೈವ್ ಇರುವುದಾಗಿ ಹಾಗೂ ಬಿಜೆಪಿ ನಾಯಕರ ಅನುಮತಿ ಪಡೆದು ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.