Asianet Suvarna News Asianet Suvarna News

ವಾಸ್ತುದೋಷ: 20 ವರ್ಷಗಳಿಂದ ಮುಚ್ಚಿದ ವಿಧಾನಸೌಧದ ಬಾಗಿಲು ತೆರೆಸಿ ಮೌಢ್ಯಕ್ಕೆ ಸಿದ್ದು ಬ್ರೇಕ್‌..!

ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (1999-2004) ವಾಸ್ತುಗೆ ಪೂರಕವಲ್ಲ ಎಂಬ ಕಾರಣಕ್ಕೆ ದಕ್ಷಿಣದ ಬಾಗಿಲು ಮುಚ್ಚಲಾಗಿತ್ತು. 2013ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ದಶಕದ ಬಳಿಕ ಮೊದಲ ಬಾರಿಗೆ ಈ ಬಾಗಿಲನ್ನು ತೆರೆಸಿದ್ದರು.

CM Siddaramaiah Break to Superstition in Vidhanasoudha at Bengaluru grg
Author
First Published Jun 25, 2023, 3:00 AM IST

ಬೆಂಗಳೂರು(ಜೂ.25):  ವಾಸ್ತುದೋಷದ ಕಾರಣಕ್ಕಾಗಿ ಎರಡು ದಶಕಗಳಿಂದ ಮುಚ್ಚಿದ್ದ ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯ ದಕ್ಷಿಣದ ದ್ವಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ತೆರೆಸಿದ್ದಾರೆ. ತನ್ಮೂಲಕ ಮತ್ತೊಮ್ಮೆ ಮೂಢ ನಂಬಿಕೆ ಮುರಿದಿದ್ದಾರೆ.

ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (1999-2004) ವಾಸ್ತುಗೆ ಪೂರಕವಲ್ಲ ಎಂಬ ಕಾರಣಕ್ಕೆ ದಕ್ಷಿಣದ ಬಾಗಿಲು ಮುಚ್ಚಲಾಗಿತ್ತು. 2013ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ದಶಕದ ಬಳಿಕ ಮೊದಲ ಬಾರಿಗೆ ಈ ಬಾಗಿಲನ್ನು ತೆರೆಸಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಚೇರಿ ವಾಸ್ತು ದೋಷ ನಿವಾರಣೆ, ರಾಜಕೀಯ ವಲಯದಲ್ಲಿ ಚರ್ಚೆ

ಬಳಿಕ ಮುಖ್ಯಮಂತ್ರಿಗಳಾಗಿದ್ದ ಎಚ್‌.ಡಿ.ಕುಮಾರಸ್ವಾಮಿ, ಬಿ.ಎಸ್‌.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಈ ಬಾಗಿಲನ್ನು ಮುಚ್ಚಲಾಗಿತ್ತು. ಇದೀಗ ಶನಿವಾರ ದಕ್ಷಿಣದ ಬಾಗಿಲು ಮುಚ್ಚಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿಲನ್ನು ತೆರೆಸಿ ಅದೇ ದ್ವಾರದ ಮೂಲಕ ಕಚೇರಿಗೆ ಪ್ರವೇಶಿಸಿದರು.

ಅನ್ನಭಾಗ್ಯ ಯೋಜನೆ ಕುರಿತು ಕರೆದಿದ್ದ ಹಿರಿಯ ಅಧಿಕಾರಿಗಳ ಸಭೆಗೆ ದಕ್ಷಿಣ ಭಾಗದಿಂದ ಬಂದ ಸಿದ್ದರಾಮಯ್ಯ ಅವರು ಮುಚ್ಚಿದ್ದ ಬಾಗಿಲ ಮುಂದೆ ನಿಂತಿದ್ದರು. ಈ ವೇಳೆ ಅಧಿಕಾರಿಗಳು ವಾಸ್ತು ಕಾರಣಕ್ಕಾಗಿ ಮುಚ್ಚಿರುವುದಾಗಿ ಹೇಳಿದಾಗ ಅದೇ ದ್ವಾರವನ್ನು ತೆರೆಸಿ ಒಳ ಪ್ರವೇಶಿಸಿದರು. ಸಭೆ ಬಳಿಕವೂ ಅದೇ ದ್ವಾರದ ಮೂಲಕ ಹೊರ ನಡೆದರು.

ಒಳ್ಳೆ ಗಾಳಿ, ಬೆಳಕಿಗಿಂತ ಉತ್ತಮ ವಾಸ್ತು ಇಲ್ಲ:

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಿದ್ದರಾಮಯ್ಯ ಅವರು, ‘ಜನರ ಬಗ್ಗೆ ಕಾಳಜಿ, ನಡತೆಯಲ್ಲಿ ಪ್ರಾಮಾಣಿಕತೆ ಹಾಗೂ ಕರ್ತವ್ಯದಲ್ಲಿ ನಿಷ್ಠೆ ನಮ್ಮೊಳಗಿದ್ದರೆ ದಿಕ್ಕು, ಘಳಿಗೆ, ಮುಹೂರ್ತ ಎಲ್ಲವೂ ನಗಣ್ಯ’ ಎಂದು ಹೇಳಿದ್ದಾರೆ. ವಾಸ್ತು ದೋಷಕ್ಕಾಗಿ ಮುಚ್ಚಿದ್ದ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸಿ ಅದೇ ಬಾಗಿಲಿನಿಂದ ಕಚೇರಿ ಪ್ರವೇಶ ಮಾಡಿದೆ. ಕೊಠಡಿಯೊಳಗೆ ಒಳ್ಳೆಯ ಗಾಳಿ, ಬೆಳಕು ಬರುವಂತಿದ್ದರೆ ಅದಕ್ಕಿಂತ ಉತ್ತಮ ವಾಸ್ತು ಬೇರಿಲ್ಲ. ನಡೆ-ನುಡಿ ಶುದ್ಧವಿದ್ದರೆ ಮತ್ತೆಲ್ಲವೂ ಶುಭದಾಯಕವಾಗಿರಲಿದೆ. ಜನತೆಯ ಆಶೀರ್ವಾದ ಇರಲಿ ಎಂದು ಮನವಿ ಮಾಡಿದ್ದಾರೆ.

Follow Us:
Download App:
  • android
  • ios