ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿ ವಾಸ್ತು ದೋಷ ನಿವಾರಣೆ, ರಾಜಕೀಯ ವಲಯದಲ್ಲಿ ಚರ್ಚೆ
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಭವನದ ಪ್ರವೇಶ ದ್ವಾರದ ಮೆಟ್ಟಿಲುಗಳ ನವೀಕರಣ ಸೇರಿದಂತೆ ಇತರ ಕಾಮಗಾರಿಗಳನ್ನು ನಡೆಸಲಾಗಿದ್ದು, ವಾಸ್ತುದೋಷ ನಿವಾರಣೆಗಾಗಿ ಈ ಕೆಲಸ ಮಾಡಲಾಗಿದೆ ಎನ್ನುವ ಚರ್ಚೆ ನಡೆದಿದೆ.
ಮಂಗಳೂರು (ಡಿ.15): ಜಿಲ್ಲಾ ಕಾಂಗ್ರೆಸ್ ಭವನದ ಪ್ರವೇಶ ದ್ವಾರದ ಮೆಟ್ಟಿಲುಗಳ ನವೀಕರಣ ಸೇರಿದಂತೆ ಇತರ ಕಾಮಗಾರಿಗಳನ್ನು ನಡೆಸಲಾಗಿದ್ದು, ವಾಸ್ತುದೋಷ ನಿವಾರಣೆಗಾಗಿ ಈ ಕೆಲಸ ಮಾಡಲಾಗಿದೆ ಎನ್ನುವ ಚರ್ಚೆ ನಡೆದಿದೆ. ಆದರೆ ಇದನ್ನು ತಳ್ಳಿ ಹಾಕಿರುವ ಕಾಂಗ್ರೆಸ್ ನಾಯಕರು, ಅಂಡರ್ ಗ್ರೌಂಡ್ ನೀರಿನ ಟ್ಯಾಂಕ್ ದುರಸ್ತಿಗಾಗಿ ಮೆಟ್ಟಿಲು ದುರಸ್ತಿ ಮಾಡಲಾಗಿದೆ ಎಂದಿದ್ದಾರೆ.
ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಕಳೆದ ಮೂರು ದಿನಗಳಿಂದ ಇಂಟರ್‌ಲಾಕ್ ತೆಗೆದು ಕೆಲಸ ಆರಂಭಿಸಲಾಗಿತ್ತು. ವಾಸ್ತುಶಾಸ್ತ್ರದಲ್ಲಿ ನಂಬಿಕೆ ಇಟ್ಟಿರುವ ಪಕ್ಷದ ಮುಖಂಡರೊಬ್ಬರು ಅಧ್ಯಕ್ಷರ ಅನುಮತಿ ಮೇರೆಗೆ ಈ ನವೀಕರಣ ಕಾಮಗಾರಿ ನಡೆಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಕಚೇರಿ ಪ್ರವೇಶಕ್ಕೆ ಈ ಹಿಂದೆ 8 ಮೆಟ್ಟಿಲುಗಳಿದ್ದವು, ಇದು ವಾಸ್ತು ದೋಷವಾಗಿದ್ದು, ಬೆಸ ಸಂಖ್ಯೆಯ ಮೆಟ್ಟಿಲುಗಳನ್ನು ಹಾಕಬೇಕು ಎಂಬ ನಿಟ್ಟಿನಲ್ಲಿ ಈ ಕಾಮಗಾರಿ ನಡೆಸಲಾಗಿದೆ. ಅಲ್ಲದೆ, ಕಚೇರಿಯೊಳಗಿನ ಒಂದು ಶೌಚಾಲಯವನ್ನು ಮುಚ್ಚಲಾಗಿದೆ ಎಂಬ ಮಾಹಿತಿಯೂ ದೊರೆತಿದೆ.
ಅನೇಕ ವರ್ಷಗಳ ಕಾಲ ಹಂಪನಕಟ್ಟೆಯ ಬಾಡಿಗೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜಿಲ್ಲಾ ಕಾಂಗ್ರೆಸ್ ಕಚೇರಿ 2016ರಲ್ಲಿ ಮಲ್ಲಿಕಟ್ಟೆಯ ಹೊಸ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಿತ್ತು. ಅದರ ನಂತರ ನಡೆದ ವಿಧಾನಸಭೆ, ಲೋಕಸಭೆ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿತ್ತು. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಪಕ್ಷದ ಗೆಲುವಿಗೆ ಪೂರಕವಾಗಿ ವಾಸ್ತು ತಜ್ಞರ ಸಲಹೆಯಂತೆ ನವೀಕರಣ ಕೆಲಸ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಹೊಸ ಮುಖಗಳಿಗೆ ಕಾಂಗ್ರೆಸ್ ಟಿಕೆಟ್: ದಿನೇಶ್
‘ಕಾಂಗ್ರೆಸ್ ಪಕ್ಷದಿಂದ ಈ ಬಾರಿಯ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಖಂಡಿತ ಅವಕಾಶವಿದೆ. ಪ್ರತಿ ಕ್ಷೇತ್ರದಲ್ಲಿ ಎರಡು-ಮೂರು ಸಮೀಕ್ಷೆಗಳನ್ನು ಮಾಡಿದ್ದು, ವೈಜ್ಞಾನಿಕವಾಗಿ ಟಿಕೆಟ್ ಹಂಚಿಕೆ ಮಾಡಲಾಗುವುದು. ಹಾಲಿ ಶಾಸಕರಿಗೆ ಅವಕಾಶ ಸಿಗಲಿದೆ. ಆದರೆ ಪಕ್ಷ ಸಂಘಟನೆ, ಜನಸಂಪರ್ಕ ಹಾಗೂ ಅಭಿವೃದ್ದಿ ಕೆಲಸ ಮಾಡಿದವರಿಗೆ ವಯಸ್ಸಿನ ಮಾನದಂಡ ಅನ್ವಯವಾಗಬಾರದು’ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇಂದು ಕಾಂಗ್ರೆಸ್ ಸೇರಲಿರುವ ಮಾಜಿ ಶಾಸಕ, ಬಿಜೆಪಿ ನಾಯಕ ವಿ.ಎಸ್.ಪಾಟೀಲ್
ತಮಿಳುನಾಡು, ಗೋವಾ ಹಾಗೂ ಪುದುಚೆರಿ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ದಿನೇಶ್‌ಗುಂಡೂರಾವ್, ಚುನಾವಣಾ ಸಮಿತಿಯು ಎಲ್ಲಾ ಅಂಶಗಳನ್ನು ಪರಿಗಣಿಸಿ ಜನರ ಸಂಪರ್ಕದಲ್ಲಿರುವವರಿಗೆ ಗೆಲುವು ಹಾಗೂ ಸಾಮಾಜಿಕ ನ್ಯಾಯವನ್ನು ಗುರಿಯಾಗಿಟ್ಟುಕೊಂಡು ಟಿಕೆಟ್ ಹಂಚಿಕೆ ಮಾಡಲಿದೆ ಎಂದು ಹೇಳಿದರು.
ಗಂಗಾವತಿ ಗೃಹಪ್ರವೇಶ.. ಕಲ್ಯಾಣ ಪ್ರಗತಿ ಪಕ್ಷ.. ಜನಾರ್ಧನ ರೆಡ್ಡಿ ಹೊಸ ಆಟ!
ಮೊದಲ ಹಂತದಲ್ಲೇ ಕೆಲವು ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆಯಾಗಲಿದೆ. ಎಷ್ಟುಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆಯಾಗಲಿದೆ ಎಂದು ಹೇಳುವುದು ಕಷ್ಟ. ಅದನ್ನು ಚುನಾವಣಾ ಸಮಿತಿ ನಿರ್ಧಾರ ಮಾಡುತ್ತದೆ. ಎಷ್ಟುಸಾಧ್ಯವೋ ಅಷ್ಟೂಟಿಕೆಟ್ ಘೋಷಣೆ ಮಾಡಲಾಗುವುದು. ಇನ್ನು ಹಾಲಿ ಶಾಸಕರಿಗೆ ಅವಕಾಶ ಸಿಗಲಿದೆ. ಆದರೆ, ವಸ್ತುಸ್ಥಿತಿ ಪರಿಶೀಲಿಸಿಯೇ ಕ್ರಮ ಕೈಗೊಳ್ಳಲಿದ್ದಾರೆ ಎಂದರು.