ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ, ಬಂಧಿತರಾಗಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಎನ್ಐಎ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಇದು ಇತ್ತೀಚಿನ ದಿನಗಳಲ್ಲಿ ಸಿಎಂಗೆ ಎದುರಾದ ಎರಡನೇ ಕಪ್ಪು ಬಾವುಟ ಪ್ರದರ್ಶನ ಘಟನೆಯಾಗಿದೆ. ಬೆಳಗಾವಿಯಲ್ಲೂ ಇದೇ ರೀತಿಯ ಘಟನೆ ನಡೆದಿತ್ತು.

ಮಂಗಳೂರು (ಮೇ.16): ಸಿಎಂ ಸಿದ್ಧರಾಮಯ್ಯಗೆ ಮತ್ತೊಮ್ಮೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 20 ದಿನಗಳ ಅವಧಿಯಲ್ಲಿ ಸಿಎಂ ಸಿದ್ಧರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ 2ನೇ ಘಟನೆ ಇದಾಗಿದೆ.

ದಕ್ಷಿಣ ಕನ್ನಡದ ನೂತನ ಜಿಲ್ಲಾಡಳಿತ ಕೇಂದ್ರ ಪ್ರಜಾ ಸೌಧದ ಉದ್ಘಾಟನಾ ಸಮಾರಂಭಕ್ಕೆ ಮಂಗಳೂರಿಗೆ ಸಿಎಂ ಸಿದ್ಧರಾಮಯ್ಯ ಪ್ರಯಾಣ ಮಾಡುತ್ತಿದ್ದರು. ಮಂಗಳೂರಿನ ಸನಿಹಕ್ಕೆ ಬರುವಾಗ ಬಿಜೆಪಿಯ ಕೆಲವು ಕಾರ್ಯಕರ್ತರು ಅವರ ಕಾರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿ, ಬೆಂಗಾವಲಿಗೆ ಅಡ್ಡಿಪಡಿಸಿದ ಘಟನೆ ನಡೆದಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಸಿಎಂ ಸಿದ್ಧರಾಮಯ್ಯ ಅಲ್ಲಿಂದ ಪಡೀಲ್‌ಗೆ ಕಾರ್‌ನಲ್ಲಿ ಪ್ರಯಾಣ ಮಾಡಿದ್ದರು. ಈ ವೇಳೆ ಯಯ್ಯಾಡಿಯಲ್ಲಿ ದಿಢೀರನೇ ಪ್ರತ್ಯಕ್ಷವಾದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸರ್ಕಾರ ವಿರೋಧಿ ಘೋಷಣೆ ಕೂಗಲು ಆರಂಭ ಮಾಡಿದ್ದರು.

ಬಜಪೆಯಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆಯಲ್ಲಿ ಉಗ್ರರ ಕೈವಾಡವಿದೆ. ಹಾಗಾಗಿ ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು. ಅದರೊಂದಿಗೆ ಸುಹಾಸ್‌ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಬೇಕು ಎಂದು ಅಗ್ರಹಿಸಿ ಬಿಜೆಪಿ ಮಂಗಳೂರು ಉತ್ತರ ಮಂಡಲ ಯುವ ಮೋರ್ಚಾ ಕಾರ್ಯಕರ್ತರು ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರು. ಈ ವೇಳೆ ಕಾರ್ಯಪ್ರವರ್ತರಾದ ಬಂದೋಬಸ್ತ್‌ನಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದು, ವ್ಯಾನ್‌ನಲ್ಲಿ ಹಾಕಿ ಹೊರಗೆ ಕರೆದುಕೊಂಡು ಹೋಗಿದ್ದಾರೆ.

ಸಿಎಂ ಬರುವ ಮೊದಲೇ ದಾರಿ ಯೆಯ್ಯಾಡಿ ಬಳಿ ಕಪ್ಪು ಬಾವುಟ ಪ್ರದರ್ಶನ ಯತ್ನ ಮಾಡಲಾಗಿತ್ತು. ನೂತನ ಡಿಸಿ ಕಚೇರಿ ಉದ್ಘಾಟನೆ ಹಾಗೂ ಉಳ್ಳಾಲ ದರ್ಗಾ ಉರುಸ್ ನಲ್ಲಿ ಭಾಗವಹಿಸಲು ಸಿಎಂ ಆಗಮಿಸಿದ್ದರು. ಮಂಗಳೂರು ಏರ್ಪೋರ್ಟ್ ನಿಂದ ಉರ್ವಾ ಮಾರ್ಕೆಟ್ ಕಡೆಗೆ ಸಿದ್ಧರಾಮಯ್ಯ ಅವರ ಬೆಂಗಾವಲು ಪಡೆ ಸಾಗುತ್ತಿತ್ತು. ಈ ವೇಳೆ ಸಿದ್ದರಾಮಯ್ಯ ದಾರಿಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಪ್ರಕರಣ ಎನ್ಐಎ ತನಿಖೆಗೆ ವಹಿಸಲು ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡಿದ್ದು, ಹತ್ಯೆಯಲ್ಲಿ ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯಕರ್ತರ ಭಾಗಿ ಹಿನ್ನೆಲೆ ಎನ್ಐಎಗೆ ವಹಿಸಲು ಆಗ್ರಹಿಸಲಿದ್ದಾರೆ. ಮೇ.1ರಂದು ಬಜಪೆಯ ಕಿ‌ನ್ನಿಪದವು ಬಳಿ ಸುಹಾಸ್ ಹತ್ಯೆ ನಡೆದಿತ್ತು. ಪ್ರಕರಣ ಸಂಬಂಧ ಈಗಾಗಲೇ ಹನ್ನೊಂದು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯಲ್ಲಿಯೂ ಕಪ್ಪು ಬಾವುಟ ಪ್ರದರ್ಶನ: ಇದಕ್ಕೂ ಮುಂಚೆ ಸಿಎಂ ಸಿದ್ದರಾಮಯ್ಯಗೆ ಬೆಳಗಾವಿಯಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿತ್ತು. ಕೇಂದ್ರದ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಸರ್ಕಾರ ಬೆಳಗಾವಿಯಲ್ಲಿ ಪ್ರತಿಭಟನಾ ಸಮಾವೇಶ ಮಾಡಿತ್ತು. ಸಿಎಂ ಸಿದ್ಧರಾಮಯ್ಯ ಭಾಷಣ ಆರಂಭಿಸುವ ವೇಳೆ ಬಿಜೆಪಿಯ ಮಹಿಳಾ ಕಾರ್ಯಕರ್ತೆ ಶಿಲ್ಪಾ ಕೇಕರೆ ಸೇರಿದಂತೆ ಆರು ಮಂದಿ ಸಿಎಂ ವಿರುದ್ಧ ವೇದಿಕೆ ಎದುರಲ್ಲಿಯೇ ಕಪ್ಪು ಬಟ್ಟೆ ಪ್ರದರ್ಶನ ಮಾಡಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನ ಮತ್ತು ಉಗ್ರರ ಪರ ಮಾತನಾಡಿದ್ದಾರೆ. ಸಿಎಂ ಹೇಳಿಕೆಯಿಂದ ಬೇಸರವಾಗಿ ಕಪ್ಪು ಬಾವುಟ ಪ್ರದರ್ಶಿಸಿದ್ದೇವೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷೆ ಶಿಲ್ಪಾ ಹೇಳಿದರು. ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನಾ ಸಭೆ ನಡೆಯುತ್ತಿತ್ತು. ಈ ವೇಳೆ ಕಪ್ಪು ಭಾವುಟ ತೋರಿಸಿದ್ದಾರೆ. ಕೆಲ ಘೋಷಣೆ ಕೂಗಿದ್ದಾರೆ. ಇದರಿಂದ ಸಭೆಗೆ ಅಡಚಣೆ ಆಗಿದೆ. ಜಿಲ್ಲಾ ಕಾಂಗ್ರೆಸ್ ಪಕ್ಷ ದೂರು ನೀಡಿದೆ. ಬಿಎನ್​ಎಸ್ ಸೆಕ್ಷನ್ 189, 352 ಅಡಿ ಸಾರ್ವಜನಿಕ ಶಾಂತಿಭಂಗ, ಹಾಗೂ ಪ್ರಚೋಧನೆ ಕೃತ್ಯ ಆಧಾರದ ಅಡಿ ಕೇಸ್ ದಾಖಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಚೇತನ್ ಸಿಂಗ್ ರಾಠೋಡ್ ಹೇಳಿದ್ದರು.