Asianet Suvarna News Asianet Suvarna News

ಆಡಳಿತಕ್ಕೆ ಸಿಎಂ ಚುರುಕು: ಎಲ್ಲ ಇಲಾಖೆ ಅಧಿಕಾರಿಗಳ ಜತೆ ಸತತ 8 ತಾಸು ಸಭೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಇಡೀ ದಿನ ಶಕ್ತಿಕೇಂದ್ರ ವಿಧಾನಸೌಧದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ಗಳ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಅಧಿಕಾರಿಗಳ ಕಾರ್ಯವೈಖರಿಯನ್ನು ಪರಾಮರ್ಶಿಸಿ, ಜನಪರವಾಗಿ ಕೆಲಸ ಮಾಡುವಂತೆ ಚಾಟಿ ಬೀಸುವ ಮೂಲಕ ಆಡಳಿತ ವ್ಯವಸ್ಥೆಗೆ ಚುರುಕುಮುಟ್ಟಿಸಿದರು.

CM siddaramaiah 8 hour meeting with all department officials at bengaluru rav
Author
First Published Sep 13, 2023, 5:10 AM IST

ಬೆಂಗಳೂರು (ಸೆ.13) :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಇಡೀ ದಿನ ಶಕ್ತಿಕೇಂದ್ರ ವಿಧಾನಸೌಧದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ಗಳ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಅಧಿಕಾರಿಗಳ ಕಾರ್ಯವೈಖರಿಯನ್ನು ಪರಾಮರ್ಶಿಸಿ, ಜನಪರವಾಗಿ ಕೆಲಸ ಮಾಡುವಂತೆ ಚಾಟಿ ಬೀಸುವ ಮೂಲಕ ಆಡಳಿತ ವ್ಯವಸ್ಥೆಗೆ ಚುರುಕುಮುಟ್ಟಿಸಿದರು.

ಪ್ರಮುಖವಾಗಿ ಡಿಸಿ, ಎಸಿ ಮತ್ತು ತಹಶೀಲ್ದಾರರ ನ್ಯಾಯಾಲಯಗಳಲ್ಲಿನ ಅರ್ಜಿಗಳ ಇತ್ಯರ್ಥದಲ್ಲಿ ಆಗುತ್ತಿರುವ ವಿಳಂಬ, ಜನರು ಸಣ್ಣಪುಟ್ಟ ವಿಚಾರಗಳಿಗೂ ಸಿಎಂ ಕಚೇರಿಗೆ ಬರುತ್ತಿರುವುದು, ಕಚೇರಿಗೆ ಬಾರದೆ ಮನೆಯಲ್ಲಿ ಕೂತು ಕೆಲಸ ಮಾಡುವಂತಹ ಅಧಿಕಾರಿಗಳ ಪ್ರವೃತ್ತಿ, ಸಾರ್ವಜನಿಕರು, ಜನ ಪ್ರತಿನಿಧಿಗಳ ದೂರವಾಣಿ ಕರೆಗೂ ಸಿಗದಿರುವುದು, ಸಿಕ್ಕರೂ ಸ್ಪಂದಿಸದಿರುವುದು, ಅನಧಿಕೃತ ಬಡಾವಣೆಗಳು ತಲೆಎತ್ತುವುದನ್ನು ತಡೆಯದೆ ಅಧಿಕಾರಿಗಳೇ ಸಹಕಾರ ನೀಡುವ ಧೋರಣೆ, ಒತ್ತುವರಿ ಭೂಮಿ ತೆರವುಗೊಳಿಸುವಲ್ಲಿ ತೋರುತ್ತಿರುವ ನಿರ್ಲಕ್ಷ್ಯ ತೋರುತ್ತಿರುವ ನಡವಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಯವರು ನಿಮ್ಮ ನಿರ್ಲಕ್ಷ್ಯ ಉಡಾಫೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ತಂದರೆ ಸುಮ್ಮನೆ ಇರುವುದಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

 

ಸಿಎಂ ಸಿದ್ದರಾಮಯ್ಯರನ್ನು ಜನರು ದೇವರಾಜ್ ಅರಸರಂತೆ ಕಾಣುತ್ತಿದ್ದಾರೆ: ಶಿವರಾಜ ತಂಗಡಗಿ 

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಸಂಪುಟದ ಎಲ್ಲ ಸಹೋದ್ಯೋಗಿಗಳನ್ನೂ ಒಳಗೊಂಡು ಬೆಳಗ್ಗೆಯಿಂದ ರಾತ್ರಿ ವರೆಗೂ ಸುಮಾರು 8 ಗಂಟೆಗಳಿಗೂ ಹೆಚ್ಚು ಕಾಲ ಸುದೀರ್ಘ ಸಭೆ ನಡೆಸಿದ ಮುಖ್ಯಮಂತ್ರಿ ಅವರು, ಅಧಿಕಾರಿಗಳು ಯಾವುದೇ ಕಾರಣಕ್ಕೂ ಮನೆಯಲ್ಲಿ ಕೂತು ಕೆಲಸ ಮಾಡಕೂಡದು. ತಮ್ಮ ಕಚೇರಿ, ಕೇಂದ್ರ ಸ್ಥಾನಲ್ಲಿ ಕೂತು ಕೆಲಸ ಮಾಡಬೇಕು. ಇಲ್ಲವೇ ಜಿಲ್ಲಾ, ತಾಲ್ಲೂಕು ಪ್ರವಾಸದಲ್ಲಿರಬೇಕು. ವಾರಕ್ಕೊಮ್ಮೆ ತಾಲ್ಲೂಕು ಮಟ್ಟದಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಜನಸಂಪರ್ಕ ಸಭೆ ನಡೆಸಿ ಜನರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಬೇಕು. ಜನರು ಸುಮ್ಮನೆ ಬದಲಾವಣೆಗಾಗಿ ನಮಗೆ ಅಧಿಕಾರ ಕೊಟ್ಟಿಲ್ಲ, ಬಹಳ ನಿರೀಕ್ಷೆ ಇಟ್ಟು ಅಧಿಕಾರ ನೀಡಿದ್ದಾರೆ. ಅವರ ನಿರೀಕ್ಷೆ ತಕ್ಕಂತೆ ಕೆಲಸ ಮಾಡಿ. ಪ್ರತಿಯೊಬ್ಬ ಅಧಿಕಾರಿಯೂ ದಕ್ಷತೆ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು. ಮನುಷ್ಯತ್ವ ಇಲ್ಲದವರು ಸಾರ್ವನಿಕ ಸೇವೆಗೆ ಬರಬಾರದು ಎಂದು ಮಾರ್ಮಿಕವಾಗಿ ಹೇಳಿದರು.

ಣ್ಣ ಪುಟ್ಟದ್ದಕ್ಕೂ ಜನ ನನ್ನ ಕಚೇರಿಗೆ ಬರೋದಾದ್ರೆ ನೀವೇಕೆ?:

ನಾಡಿನ ಜನತೆ ಸಣ್ಣ ಪುಟ್ಟ ವಿಚಾರಗಳಿಗೂ ಹಳ್ಳಿಗಳಿಂದ ನನ್ನ ಬಳಿಗೆ ಬರುತ್ತಿದ್ದಾರೆ ಎಂದರೆ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಅಧಿಕಾರಿ ವರ್ಗ ಏನು ಪ್ರಯೋಜನ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ನಾನು ಮುಖ್ಯಮಂತ್ರಿ ಆದ ಬಳಿಕ ಹಲವಾರು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಜನರು ನೂರಾರು ರೀತಿಯ ಮನವಿಗಳನ್ನು ನೀಡಿದ್ದಾರೆ. ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಬಗೆಹರಿಯಬೇಕಾದ ಸಮಸ್ಯೆಗಳನ್ನು ಹೊತ್ತು ನನ್ನ ಬಳಿಗೆ ಬರುತ್ತಿದ್ದಾರೆ. ಇದು ಆಗಕೂಡದು. ಜನ ಕೇವಲ ಬದಲಾವಣೆಗೆ ಸರ್ಕಾರ ಬದಲಿಸಿಲ್ಲ. ಬಹಳ ನಿರೀಕ್ಷೆ ಇಟ್ಟುಕೊಂಡು ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು.

ಸರ್ಕಾರ ಒಂದು ಟ್ರಸ್ಟ್‌. ಶಾಸಕರು, ಸಚಿವರು ಹಾಗೂ ಅಧಿಕಾರಿಗಳು ಜನ ಸೇವಕರು ಎಂಬ ತಿಳುವಳಿಕೆ ಪ್ರತಿಯೊಬ್ಬರಿಗೂ ಇರಬೇಕು. ಪ್ರತಿ ತಾಲ್ಲೂಕು ಮಟ್ಟದಲ್ಲೂ ಅಧಿಕಾರಿಗಳು ಸ್ಥಳೀಯ ಶಾಸಕರು, ಸಚಿವರೊಟ್ಟಿಗೆ ವಾರಕ್ಕೊಮ್ಮೆ ಜನಸಂಪರ್ಕ ಸಭೆ ನಡೆಸಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಮುಂದಿನ ಸಭೆಯ ವೇಳೆಗೆ ಹಿಂದೆ ಜನ ನೀಡಿದ್ದ ಮನವಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿರಬೇಕು. ಇದು ಆಗಿದೆಯೇ ಎಂದು ಡಿಸಿ, ಸಿಇಒಗಳು ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು.

ಸಾರ್ವಜನಿಕ ಭೇಟಿಗೆ ಪ್ರತಿ ಅಧಿಕಾರಿಯು ಸಮಯ ನಿಗದಿಪಡಿಸಬೇಕು. ಆ ಸಮಯದಲ್ಲಿ ಕಚೇರಿಯಲ್ಲಿದ್ದು ಜನರ ಸಮಸ್ಯೆಗಳನ್ನು ಆಲಿಸಿ ಕೂಡಲೇ ಪರಿಹಾರ ಕಲ್ಪಿಸಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಆಸ್ಪತ್ರೆಗಳು, ಹಾಸ್ಟೆಲ್‌ಗಳು, ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಪರಿಶೀಲಿಸಬೇಕು. ಹಲವೆಡೆ ಆಸ್ಪತ್ರೆಗಳಲ್ಲಿ ವೈದ್ಯರು ಲಭ್ಯವಿರದೆ ಅರೆ ವೈದ್ಯಕೀಯ ಸಿಬ್ಬಂದಿಯೇ ರೋಗಿಗಳನ್ನು ವಿಚಾರಿಸುವುದು, ಔಷಧ ಬರೆದುಕೊಡುವ ಕೆಲಸ ಮಾಡುತ್ತಿರುವ ದೂರುಗಳಿವೆ. ಇದನ್ನು ಪರಿಶೀಲಿಸಿ ಅಂತಹ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿಳಂಬ ಧೋರಣೆಯೂ ಭ್ರಷ್ಟಾಚಾರವೇ:

ಡಿಸಿ, ಎಸಿ ಮತ್ತು ತಹಶೀಲ್ದಾರ್‌ ಕಚೇರಿಗಳ ನ್ಯಾಯಾಲಯದ ಅರ್ಜಿಗಳನ್ನು ಇತ್ಯರ್ಥಪಡಿಸುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಅವರು, ಐದು ವರ್ಷಗಳಾದರೂ ಅರ್ಜಿ ಇತ್ಯರ್ಥವಾಗದಿರುವುದು ಗಮನಕ್ಕೆ ಬಂದಿದೆ. ವಿಳಂಬ ಮಾಡಿದಷ್ಟೂ ಭ್ರಷ್ಟಾಚಾರ ಹೆಚ್ಚುತ್ತದೆ. ಈ ರೀತಿ ವಿಳಂಬ ಮಾಡುವುದೂ ಭ್ರಷ್ಟಾಚಾರವೇ. ನ್ಯಾಯ ವಿಳಂಬವಾದರೆ ನ್ಯಾಯ ನಿರಾಕರಿಸಿದಂತೆಯೇ ಸರಿ. ಇನ್ಮುಂದೆ ಇದು ಆಗಕೂಡದು. ತಹಶೀಲ್ದಾರ್‌ ನ್ಯಾಯಾಲಯದ ಅರ್ಜಿಗಳು ಮೂರು ತಿಂಗಳಲ್ಲಿ, ಉಪನಿರ್ದೇಶಕರ ನ್ಯಾಯಾಲಯದ ಅರ್ಜಿಗಳನ್ನು ಆರು ತಿಂಗಳಲ್ಲಿ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯದ ಅರ್ಜಿಗಳನ್ನು ಒಂದು ವರ್ಷದೊಳಗೆ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದರು.

ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದು ಬಿಜೆಪಿ ಸರ್ಕಾರದಲ್ಲಿ: ಆರ್‌ ಅಶೋಕ್ ತಿರುಗೇಟು

ಗ್ರಾಮ ಲೆಕ್ಕಿಗರು ಕೈಗೆ ಸಿಗುತ್ತಿಲ್ಲ!:

ಗ್ರಾಮ ಲೆಕ್ಕಿಗರು ಜನರ ಕೈಗೇ ಸಿಗುತ್ತಿಲ್ಲ. ಅವರು ಎಲ್ಲಿರುತ್ತಾರೆ ಎಂದು ಹುಡುಕಿಕೊಂಡು ಹೋಗುವುದೇ ಜನರಿಗೆ ತಲೆನೋವಾಗಿದೆ. ಹಾಗಾಗಿ ಗ್ರಾಮ ಪಂಚಾಯಿತಿಯಲ್ಲೇ ಒಂದು ಕೊಠಡಿ ನೀಡಿ ಅವರನ್ನು ಅಲ್ಲಿಯೇ ಕೆಲಸ ಮಾಡುವಂತೆ ಕ್ರಮ ವಹಿಸಬೇಕು ಎಂದು ಇದೇ ವೇಳೆ ಮುಖ್ಯಮಂತ್ರಿ ಅವರು ಡಿಸಿಗಳಿಗೆ ನಿರ್ದೇಶಿಸಿದರು.

ಸರ್ವೆಗೆ ಸಂಬಂಧಿಸಿದ ವ್ಯಾಜ್ಯಗಳು ಶೀಘ್ರ ವಿಲೇವಾರಿಗೆ ಕ್ರಮ ವಹಿಸಬೇಕು. ಭೂ ಮಾಪಕರಿಂದ ಸರ್ವೆ ಪ್ರಕರಣಗಳು ಬಾಕಿ ಉಳಿಯಬಾರದು. ರೈತರು ಸರ್ವೆ ವ್ಯಾಜ್ಯಗಳಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಕ್ಕಿಪಿಸಬೇಕು. ಕಂದಾಯ ಇಲಾಖೆ ಕಡತಗಳು ಆನ್‌ಲೈನ್‌ ಮೂಲಕ 5ರಿಂದ 10 ದಿನಗಳಲ್ಲಿ ವಿಲೇವಾರಿ ಆಗಬೇಕು. ನಿಗದಿತ ಅವಧಿಯೊಳಗೆ ಜೋಡಿ ಗ್ರಾಮಗಳ ಸರ್ವೆ ಕಾರ್ಯ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

Follow Us:
Download App:
  • android
  • ios