ತ್ರಿವಳಿ ತಲಾಖ್‌ ವಿಷಯದಲ್ಲಿ ತರಾತುರಿಯಲ್ಲಿ ಸುಗ್ರೀವಾಜ್ಞೆ ತಂದ ಕೇಂದ್ರ ಸರ್ಕಾರ ರಾಮಮಂದಿರ ವಿಷಯದಲ್ಲಿ ಮೌನ ವಹಿಸಿದೆ. ಬಿಜೆಪಿ ನಾಯಕರಿಗೆ ಚುನಾವಣೆ ಬಂದಾಗ ಮಾತ್ರ ರಾಮಮಂದಿರ ನೆನಪಾಗುತ್ತದೆ. ಇದೀಗ ಮತ್ತೆ ರಾಮಮಂದಿರ ವಿಷಯ ಪ್ರತಿಧ್ವನಿಸುತ್ತಿದೆ. ವೋಟಿಗಾಗಿ ಮಾತ್ರ ರಾಮಮಂದಿರ ನಿರ್ಮಾಣ ವಿಷಯ ಜಪಿಸುವುದು ಸಲ್ಲದು- ಸಿ. ಎಂ. ಇಬ್ರಾಹಿಂ

ವಿಜಯಪುರ[ನ.15]: ರಾಮಮಂದಿರ ನಿರ್ಮಾಣಕ್ಕೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಕೂಡಲೇ ಕೇಂದ್ರ ಸರ್ಕಾರ ಸೌಹಾರ್ದ ಸಭೆ ಕರೆದು ಸುಗ್ರೀವಾಜ್ಞೆ ಹೊರಡಿಸಲಿ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ವಿಜಯಪುರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಖ್‌ ವಿಷಯದಲ್ಲಿ ತರಾತುರಿಯಲ್ಲಿ ಸುಗ್ರೀವಾಜ್ಞೆ ತಂದ ಕೇಂದ್ರ ಸರ್ಕಾರ ರಾಮಮಂದಿರ ವಿಷಯದಲ್ಲಿ ಮೌನ ವಹಿಸಿದೆ. ಬಿಜೆಪಿ ನಾಯಕರಿಗೆ ಚುನಾವಣೆ ಬಂದಾಗ ಮಾತ್ರ ರಾಮಮಂದಿರ ನೆನಪಾಗುತ್ತದೆ. ಇದೀಗ ಮತ್ತೆ ರಾಮಮಂದಿರ ವಿಷಯ ಪ್ರತಿಧ್ವನಿಸುತ್ತಿದೆ. ವೋಟಿಗಾಗಿ ಮಾತ್ರ ರಾಮಮಂದಿರ ನಿರ್ಮಾಣ ವಿಷಯ ಜಪಿಸುವುದು ಸಲ್ಲ ಎಂದಿದ್ದಾರೆ.

ಶಿವಾಜಿ ಜಯಂತಿ ಆಚರಿಸುತ್ತೇವೆ:

ಮುಸ್ಲಿಮರಿಗೂ ಮತ್ತು ಶಿವಾಜಿಗೂ ಒಳ್ಳೆಯ ಸಂಬಂಧ ಇತ್ತು. ಅವರ ಆಡಳಿತದಲ್ಲಿ ಹೆಚ್ಚು ಮುಸ್ಲಿಮರು ಇದ್ದರು. ಹೀಗಾಗಿ ಒಬ್ಬ ಮಹಾತ್ಮ, ಮಹನೀಯರನ್ನು ಕೇವಲ ಒಂದು ಸಮಾಜಕ್ಕೆ ಸೀಮಿತಗೊಳಿಸುವುದು ಬೇಡ. ಈ ಹಿನ್ನೆಲೆಯಲ್ಲಿ ಮುಂದಿನ ಬಾರಿ ಮುಸ್ಲಿಂ ಸಮಾಜದವರು ಶಿವಾಜಿ ಜಯಂತಿ ಆಚರಿಸುತ್ತೇವೆ.

- ಸಿ. ಎಂ. ಇಬ್ರಾಹಿಂ

ನಮ್ಮದು ಅನ್‌ಬ್ರೇಕಬಲ್‌ ಲವ್‌:

ನೀವು ಯಾರ ಪರವಾಗಿದ್ದೀರಾ? ಎಂಬ ಪ್ರಶ್ನೆಗೆ ನನಗೆ ಅವ್ವನೂ ಬೇಕು, ಅಪ್ಪನೂ ಬೇಕು. ನನಗೂ ಹಾಗೂ ಸಿದ್ದರಾಮಯ್ಯನವರಿಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರದು ಹಾಗೂ ನನ್ನದೂ ಒಂದು ರೀತಿ ಅನ್‌ಬ್ರೇಕಬಲ್‌ ಲವ್‌ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘2019ರ ಚುನಾವಣೆ : ಕಾಂಗ್ರೆಸಿಗೆ ಅಧಿಕಾರ’

ಟಿಪ್ಪು ಜಯಂತಿ ಬಗ್ಗೆ ಶೀಘ್ರ ಚರ್ಚೆ:

ಇಸ್ಲಾಂ ಧರ್ಮದಲ್ಲಿ ಜಯಂತಿ ಆಚರಣೆಗೆ ಅವಕಾಶವಿಲ್ಲ, ಭಾವಚಿತ್ರ ಪೂಜೆಗೂ ಅವಕಾಶವಿಲ್ಲ. ಹೀಗಾಗಿ ಟಿಪ್ಪು ಜಯಂತಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಮುಸ್ಲಿಂ ಧರ್ಮಗುರುಗಳು, ಮುಸ್ಲಿಂ ಶಾಸಕರು, ಸಂಸದರೆಲ್ಲರೂ ಸೇರಿ ವಿಶೇಷ ಸಭೆ ನಡೆಸಿ ಒಂದು ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.